ಮೈಸೂರು : ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದು, 8 ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 4 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ.
ಸಾಲಗಾರ ಕ್ಷೇತ್ರದಿಂದ ಜೆಡಿಎಸ್ ಬೆಂಬಲಿತರಾದ ಕುಶಾಲ ಸಿ.ಎಸ್, ಸುರೇಶ್ ಸಿ.ಪಿ, ರವಿ ಸಿ.ಪಿ, ಸಂಗೀತಾ ವೆಂಕಟೇಶ್, ಮುಕುಂದಚಾರಿ, ಪುಟ್ಟಮ್ಮ ಹಾಗೂ ಅಶ್ವಥ್ ಕುಮಾರ್.ಸಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತರಾದ ರಘು ಸಿ.ಪಿ, ಜಗದೀಶ್ ಹಾಗೂ ಗೌರಮ್ಮ ನಂದೀಶ್ ಕೂಡ ಗೆಲುವು ಸಾಧಿಸಿದ್ದಾರೆ.ಸಾಲಗಾರರಲ್ಲದ ಕ್ಷೇತ್ರದಿಂದ ಜೆಡಿಎಸ್ ಬೆಂಬಲಿತ ಶೀಲಾನಾಗೇಂದ್ರ ಅವರು ಹೆಚ್ಚಿನ ಮತಗಳನ್ನು ಪಡೆದು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಚೆಲುವನಾಯಕ ಅವರು ಅವಿರೋಧವಾಗಿ ಆಯ್ಕೆಯಾಗಿರುವುದು ಗಮನಾರ್ಹವಾಗಿದೆ.
ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಹಿತೇಂದ್ರ ಹಾಗೂ ಅವರ ತಂಡ ಕಾರ್ಯನಿರ್ವಹಿಸಿತು.ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳಲ್ಲಿ ಜಯಗಳಿಸಿದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.ಈ ಸಂದರ್ಭದಲ್ಲಿ ಸಂಘದ ಸಿಇಒ ಹುಚ್ಚಪ್ಪ, ಸಿಬ್ಬಂದಿ ಸಿ.ಕೆ ಮಂಜುನಾಥ್, ಎಂ.ಆರ್ ಯೋಗಾನಂದ, ಹೆಚ್.ಜೆ ಅವಿನಾಶ್, ರವಿಕುಮಾರ್ ಸೇರಿದಂತೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಮುಖಂಡರು, ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.