ಇತ್ತೀಚಿನ ವರ್ಷಗಳಲ್ಲಿ “ಕ್ರಿಪ್ಟೋ ಕರೆನ್ಸಿ” ಎಂಬ ಪದ ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ. ಬಿಟ್‌ಕಾಯಿನ್, ಎಥಿರಿಯಂ, ಡೋಜ್‌ಕಾಯಿನ್ ಮುಂತಾದ ಡಿಜಿಟಲ್ ಕರೆನ್ಸಿಗಳು ಕೆಲವರಿಗೆ ಲಕ್ಷಾಂತರ ಲಾಭ ತಂದುಕೊಟ್ಟರೆ, ಮತ್ತೊಂದೆಡೆ ಅನೇಕರಿಗೆ ಭಾರೀ ನಷ್ಟವನ್ನೂ ಮಾಡಿವೆ. “ಭವಿಷ್ಯದಲ್ಲಿ ಜಗತ್ತಿನ ಎಲ್ಲ ದೇಶಗಳಿಗೂ ಒಂದೇ ಡಿಜಿಟಲ್ ಹಣ ಬರುತ್ತದೆ” ಎಂಬ ಮಾತುಗಳೂ ಕೇಳಿಬರುತ್ತಿವೆ. ಅಸಲಿಗೆ ಈ ಕ್ರಿಪ್ಟೋ ಕರೆನ್ಸಿ ಏನು? ಅದು ಹೇಗೆ ಕೆಲಸ ಮಾಡುತ್ತದೆ? ಅದರ ಅಪಾಯಗಳೇನು ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ.
ಕ್ರಿಪ್ಟೋ ಕರೆನ್ಸಿ ಎಂದರೆ ಕಂಪ್ಯೂಟರ್ ಮತ್ತು ಇಂಟರ್ನೆಟ್ ಆಧಾರಿತ ಡಿಜಿಟಲ್ ಹಣ. ಇದು ನಮ್ಮ ಕೈಯಲ್ಲಿ ಹಿಡಿಯುವ ನೋಟು ಅಥವಾ ನಾಣ್ಯವಲ್ಲ. ಬಿಟ್‌ಕಾಯಿನ್, ಎಥಿರಿಯಂ ಮುಂತಾದವುಗಳು “ಬ್ಲಾಕ್‌ಚೇನ್” ಎಂಬ ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುತ್ತವೆ. ಈ ಆಧುನಿಕ ಡಿಜಿಟಲ್ ಕರೆನ್ಸಿಯ ಪರಿಕಲ್ಪನೆಯನ್ನು ಸತೋಷಿ ನಾಕಮೊಟೋ ಎಂಬ ಹೆಸರಿನ ವ್ಯಕ್ತಿ ಅಥವಾ ಗುಂಪು ಪರಿಚಯಿಸಿತು ಎಂದು ಹೇಳಲಾಗುತ್ತದೆ. ಆದರೆ ಅವರ ನಿಜವಾದ ಗುರುತು ಇಂದಿಗೂ ರಹಸ್ಯವಾಗಿಯೇ ಉಳಿದಿದೆ.
ಕ್ರಿಪ್ಟೋ ವ್ಯವಹಾರ ಹೇಗೆ ನಡೆಯುತ್ತದೆ?
ಕ್ರಿಪ್ಟೋ ಕರೆನ್ಸಿ ಖರೀದಿಸಲು ಮೊದಲು ಡಿಜಿಟಲ್ ವಾಲೆಟ್ ಅಥವಾ ಕ್ರಿಪ್ಟೋ ಖಾತೆ ತೆರೆಯಬೇಕು. ಭಾರತದಲ್ಲಿ WazirX, Binance, CoinDCX, ZebPay ಮುಂತಾದ ಅಪ್ಲಿಕೇಶನ್‌ಗಳು ಈ ಸೇವೆಗಳನ್ನು ನೀಡುತ್ತವೆ.
ಬ್ಯಾಂಕ್ ಖಾತೆಯಿಂದ ರೂಪಾಯಿಗಳನ್ನು ಕ್ರಿಪ್ಟೋ ಎಕ್ಸ್‌ಚೇಂಜ್‌ಗೆ ವರ್ಗಾಯಿಸಿ, ನಂತರ ಅದನ್ನು ಬಿಟ್‌ಕಾಯಿನ್ ಅಥವಾ ಇತರ ಡಿಜಿಟಲ್ ನಾಣ್ಯಗಳಾಗಿ ಪರಿವರ್ತಿಸಬಹುದು. ಈ ಎಲ್ಲಾ ವ್ಯವಹಾರಗಳು ಎನ್‌ಕ್ರಿಪ್ಟ್ ಆಗಿರುವುದರಿಂದ ಸಾಮಾನ್ಯ ಬ್ಯಾಂಕ್ ವ್ಯವಹಾರಗಳಿಗಿಂತ ಭಿನ್ನವಾಗಿರುತ್ತವೆ.
ನಿಯಂತ್ರಣ ಇಲ್ಲದ ಮಾರುಕಟ್ಟೆ
ಭಾರತೀಯ ರಿಸರ್ವ್ ಬ್ಯಾಂಕ್ (RBI) ಯಾವುದೇ ಕ್ರಿಪ್ಟೋ ಕರೆನ್ಸಿಯನ್ನು ಅಧಿಕೃತ ಹಣವಾಗಿ ಮಾನ್ಯತೆ ನೀಡಿಲ್ಲ. ಅಂದರೆ, ನೀವು ಅಂಗಡಿಗೆ ಹೋಗಿ ಬಿಟ್‌ಕಾಯಿನ್ ನೀಡಿ ಅಕ್ಕಿ ಅಥವಾ ಪೆಟ್ರೋಲ್ ಖರೀದಿಸಲು ಸಾಧ್ಯವಿಲ್ಲ.
ಇದರಲ್ಲಿ ಅತ್ಯಂತ ದೊಡ್ಡ ಸಮಸ್ಯೆ ಎಂದರೆ ಮೌಲ್ಯದ ಅಸ್ಥಿರತೆ. ಬೆಳಗ್ಗೆ 1 ಲಕ್ಷ ರೂ ಮೌಲ್ಯವಿದ್ದ ಬಿಟ್‌ಕಾಯಿನ್ ಸಂಜೆ ವೇಳೆಗೆ 60 ಸಾವಿರಕ್ಕೆ ಕುಸಿಯಬಹುದು. ಕೆಲವೊಮ್ಮೆ ಒಂದೇ ರಾತ್ರಿಯಲ್ಲಿ ಕೋಟ್ಯಂತರ ಲಾಭವಾಗಬಹುದು.
ಹೆಚ್ಚಿನ ಕ್ರಿಪ್ಟೋ ನಾಣ್ಯಗಳು “Pump and Dump” ಮಾದರಿಯಲ್ಲಿ ನಡೆಯುತ್ತವೆ ಎಂಬ ಆರೋಪಗಳಿವೆ. ಅಂದರೆ, ಕೃತಕವಾಗಿ ಬೆಲೆ ಏರಿಸಿ ನಂತರ ಹೂಡಿಕೆದಾರರನ್ನು ಮೋಸಗೊಳಿಸುವ ವಿಧಾನ. 2021ರಲ್ಲಿ “Squid Game Coin” ಹೆಸರಿನ ಕ್ರಿಪ್ಟೋ ಕೆಲವೇ ದಿನಗಳಲ್ಲಿ ಮಿಲಿಯನ್‌ಗಟ್ಟಲೆ ಹಣ ಸಂಗ್ರಹಿಸಿ ನಂತರ ಸಂಪೂರ್ಣವಾಗಿ ನಾಪತ್ತೆಯಾಗಿದ್ದ ಘಟನೆ ಜಗತ್ತಿನ ಗಮನ ಸೆಳೆದಿತ್ತು.
ಕ್ರಿಪ್ಟೋ ಬಳಸುವುದು ಎಲ್ಲೆಲ್ಲಿ?
ಕ್ರಿಪ್ಟೋ ಕರೆನ್ಸಿಯನ್ನು ಸಾಮಾನ್ಯ Google Pay ಅಥವಾ PhonePe ರೀತಿಯಲ್ಲಿ ದಿನನಿತ್ಯದ ವ್ಯವಹಾರಗಳಿಗೆ ಬಳಸುವ ವ್ಯವಸ್ಥೆ ಭಾರತದಲ್ಲಿ ಇಲ್ಲ. ಆದರೆ ಡಾರ್ಕ್ ವೆಬ್‌ಗಳಲ್ಲಿ ಅಕ್ರಮ ವಹಿವಾಟುಗಳಿಗೆ ಇದನ್ನು ಬಳಸಲಾಗುತ್ತಿದೆ ಎಂಬ ವರದಿಗಳಿವೆ.
ಅಕ್ರಮ ಆಯುಧ ಖರೀದಿ, ಮಾದಕ ವಸ್ತುಗಳ ಸಾಗಾಟ, ಸೈಬರ್ ಅಪರಾಧಗಳಂತಹ ಚಟುವಟಿಕೆಗಳಲ್ಲಿ ಕ್ರಿಪ್ಟೋ ಪ್ರಮುಖ ಪಾತ್ರ ವಹಿಸುತ್ತಿದೆ ಎಂಬ ಆತಂಕವೂ ಇದೆ. ಇದೇ ಕಾರಣಕ್ಕೆ ಅನೇಕ ರಾಷ್ಟ್ರಗಳು ಇದರ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ತರಲು ಮುಂದಾಗಿವೆ.
ತಾಂತ್ರಿಕ ಅಪಾಯ
ಕ್ರಿಪ್ಟೋ ಸಂಪೂರ್ಣವಾಗಿ ಡಿಜಿಟಲ್ ತಂತ್ರಜ್ಞಾನ ಆಧಾರಿತವಾಗಿರುವುದರಿಂದ ಹ್ಯಾಕಿಂಗ್ ಅಪಾಯವೂ ಹೆಚ್ಚು. ವಾಲೆಟ್ ಲಾಕ್ ಆಗುವುದು, ಸೀಕ್ರೆಟ್ ಕೀ ಕಳೆದುಹೋಗುವುದು, ಸೈಬರ್ ಕಳ್ಳತನಗಳು ನಡೆಯುವುದು ಸಾಮಾನ್ಯ.
ಭಾರತದಲ್ಲಿ ಕ್ರಿಪ್ಟೋ ಬೆಳವಣಿಗೆ
ಕ್ರಿಪ್ಟೋ ಪರಿಕಲ್ಪನೆ 2008ರಲ್ಲಿ ಹುಟ್ಟಿದ್ದರೂ, ಭಾರತದಲ್ಲಿ ಮೊದಲ ಕ್ರಿಪ್ಟೋ ವ್ಯವಹಾರ ನಡೆದದ್ದು 2010ರಲ್ಲಿ. 2013ರಲ್ಲಿ ಮೊದಲ ಕ್ರಿಪ್ಟೋ ಎಕ್ಸ್‌ಚೇಂಜ್ ಆರಂಭವಾಯಿತು. ನಂತರ 2021ರಲ್ಲಿ ಭಾರತ ಸರ್ಕಾರ ಕ್ರಿಪ್ಟೋವನ್ನು “Virtual Digital Asset (VDA)” ಎಂದು ಗುರುತಿಸಿ ಅದರ ಮೇಲೆ ತೆರಿಗೆ ವಿಧಿಸಿತು.
ಹೂಡಿಕೆ ಮಾಡುವ ಮುನ್ನ…
ಕ್ರಿಪ್ಟೋ ಸಂಪೂರ್ಣವಾಗಿ ತಂತ್ರಜ್ಞಾನ ಆಧಾರಿತ ಹೂಡಿಕೆ. ಇಲ್ಲಿ ಲಾಭದ ಅವಕಾಶ ದೊಡ್ಡದಿದ್ದರೂ, ಅಪಾಯವೂ ಅಷ್ಟೇ ದೊಡ್ಡದು. ಯಾವುದೇ ಕ್ರಿಪ್ಟೋ ನಾಣ್ಯದಲ್ಲಿ ಹಣ ಹೂಡುವ ಮೊದಲು ಅದರ ಉದ್ದೇಶ, ಹಿನ್ನಲೆ, ಮೌಲ್ಯದ ಏರಿಳಿತ ಮತ್ತು ಭದ್ರತೆಯ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ.