Saturday, May 30, 2026
HomeYour Voiceಧಾರಾವಾಹಿ ಪ್ರಪಂಚ; ಅಳತೆ ಮೀರಿದರೆ ಆಪತ್ತು!

ಧಾರಾವಾಹಿ ಪ್ರಪಂಚ; ಅಳತೆ ಮೀರಿದರೆ ಆಪತ್ತು!

ಸಂಜೆ ಆರು ಗಂಟೆ ಆಯಿತೆಂದರೆ ಸಾಕು, ಮನೆಯ ಟಿವಿ ರಿಮೋಟ್‌ ಯಾರ ಕೈಯಲ್ಲಿರಬೇಕು ಎಂಬುದರಲ್ಲೇ ಕೆಲ ಮನೆಗಳಲ್ಲಿ ಮಿನಿ ಯುದ್ಧ ಶುರುವಾಗುತ್ತದೆ! ಅಡುಗೆಮನೆಯಲ್ಲಿ ಸೀಟಿಯಿಡುವ ಕುಕ್ಕರ್‌, ಹಾಲ್‌ನಲ್ಲಿ ಓಡಾಡುವ ಮಕ್ಕಳು, ಹೊರಗಡೆ ಆಟವಾಡಿ ಬರುವವರು… ಇವೆಲ್ಲದರ ಮಧ್ಯೆ ಟಿವಿಯಲ್ಲಿ ಧಾರಾವಾಹಿಯ ಹೊಸ ಟ್ವಿಸ್ಟ್‌ಗೆ ಮನೆಯವರ ಕಣ್ಣುಗಳು ಟಿವಿಯಲ್ಲೇ ಅಂಟಿಬಿಡುತ್ತವೆ. ಕೆಲ ಮನೆಗಳಲ್ಲಿ ಧಾರಾವಾಹಿ ಸಮಯದಲ್ಲಿ ಫೋನ್‌ ಕೂಡ ಎತ್ತುವುದಿಲ್ಲ. ಇಷ್ಟು ದೊಡ್ಡ ಮಟ್ಟಿಗೆ ನಮ್ಮ ಬದುಕಿನೊಳಗೆ ನುಗ್ಗಿಬಿಟ್ಟಿವೆ ಧಾರಾವಾಹಿಗಳು.

ಒಮ್ಮೆ ಯೋಚಿಸಿ ನೋಡಿ, ಮೊದಲು ಊರಿನಲ್ಲಿ ದೇವಸ್ಥಾನದ ಜಾತ್ರೆ, ಹರಿಕಥೆ, ಯಕ್ಷಗಾನ, ಮನೆ ಮಾತುಕತೆ, ನೆರೆಹೊರೆಯ ಒಡನಾಟ ಇವೆಲ್ಲ ಮನರಂಜನೆಯ ಭಾಗವಾಗಿದ್ದವು. ಈಗ ಬಹುತೇಕ ಮನೆಗಳಲ್ಲಿ ಸಂಜೆಯ ಕುಟುಂಬ ಸಂಭಾಷಣೆಯನ್ನೇ ಟಿವಿ ಧಾರಾವಾಹಿಗಳು ನುಂಗಿಬಿಟ್ಟಂತಾಗಿದೆ.

ಧಾರಾವಾಹಿಗಳು ಮನರಂಜನೆಯ ಸಾಧನ. ದಿನಪೂರ್ತಿ ಕೆಲಸ ಮಾಡಿ ದಣಿದ ಮನಸ್ಸಿಗೆ ಸ್ವಲ್ಪ ವಿಶ್ರಾಂತಿ ಕೊಡಬಲ್ಲವು. ಕೆಲವು ಧಾರಾವಾಹಿಗಳು ಕುಟುಂಬ ಮೌಲ್ಯ, ತಾಯಿತನ, ಮಹಿಳಾ ಶಿಕ್ಷಣ, ಸಾಮಾಜಿಕ ಅನ್ಯಾಯ, ವೃದ್ಧರ ಸಮಸ್ಯೆ, ಮಕ್ಕಳ ಭಾವನೆಗಳಂತಹ ವಿಷಯಗಳನ್ನು ಚೆನ್ನಾಗಿ ತೋರಿಸುತ್ತವೆ. ಕೆಲವೊಮ್ಮೆ ಸಮಾಜದಲ್ಲಿ ಚರ್ಚೆಯಾಗದ ವಿಷಯಗಳನ್ನೂ ಮನೆಮನೆಗೆ ತಲುಪಿಸುತ್ತವೆ. ಹಳ್ಳಿಗಳಲ್ಲಿ ಮಹಿಳೆಯರು ಧಾರಾವಾಹಿಗಳ ಮೂಲಕ ಭಾಷೆ, ಉಡುಗೆ, ಬದುಕಿನ ಹೊಸ ಆಯಾಮಗಳನ್ನು ನೋಡುತ್ತಾರೆ. ಹಿರಿಯರಿಗೆ ಸಮಯ ಕಳೆಯಲು ಸಹ ಧಾರಾವಾಹಿಗಳು ಜೊತೆಗಾರರಾಗಿವೆ.

ಆದರೆ ಸಮಸ್ಯೆ ಶುರುವಾಗುವುದು “ಮನರಂಜನೆ” ನಿಧಾನವಾಗಿ “ಅಭ್ಯಾಸ”ವಾಗುವಾಗ. ಒಂದು ಎಪಿಸೋಡ್‌ ಮಿಸ್‌ ಆದರೆ ಊಟವೇ ಇಳಿಯದ ಸ್ಥಿತಿ ಕೆಲವರದು! ಕೆಲ ಮನೆಗಳಲ್ಲಿ ಧಾರಾವಾಹಿ ಸಮಯದಲ್ಲಿ ಮಕ್ಕಳ ಓದು ಅಡ್ಡಿಯಾಗುತ್ತದೆ. ಕೆಲವರು ತಮ್ಮ ಮನೆಯ ಬದುಕನ್ನೇ ಟಿವಿಯ ಕಥೆಗಳೊಂದಿಗೆ ಹೋಲಿಸಿಕೊಳ್ಳಲು ಆರಂಭಿಸುತ್ತಾರೆ. ಇವು ನಿಧಾನವಾಗಿ ಕುಟುಂಬದೊಳಗೆ ಅಸಮಾಧಾನ ಹುಟ್ಟಿಸುತ್ತವೆ.

ಇನ್ನೊಂದು ದೊಡ್ಡ ಸಮಸ್ಯೆ ಎಂದರೆ ಧಾರಾವಾಹಿಗಳಲ್ಲಿನ ಅತಿಯಾದ ನಾಟಕೀಯತೆ. ಸಾಮಾನ್ಯ ವಿಷಯವನ್ನೂ ಕೆಲವೊಮ್ಮೆ ಐದು ಎಪಿಸೋಡ್‌ ಎಳೆದು ತೋರಿಸಲಾಗುತ್ತದೆ. ಒಂದು ಮದುವೆ, ಒಂದು ರಹಸ್ಯ, ಒಂದು ಜಗಳ – ತಿಂಗಳಗಟ್ಟಲೆ ಸಾಗುತ್ತದೆ. ಕೆಲ ಕಥೆಗಳಲ್ಲಿ ಅಸೂಯೆ, ಕುತಂತ್ರ, ದ್ವೇಷ, ಪ್ರತೀಕಾರ ಇವೆಲ್ಲವನ್ನೇ “ಎಂಟರ್‌ಟೈನ್‌ಮೆಂಟ್‌” ಹೆಸರಿನಲ್ಲಿ ಮರುಮರು ತೋರಿಸಲಾಗುತ್ತದೆ.

ವಿಶೇಷವಾಗಿ ಮಕ್ಕಳ ಮತ್ತು ಯುವಕರ ಮೇಲೆ ಇದರ ಪ್ರಭಾವ ಬೇಗ ಬೀಳುತ್ತದೆ. ಈಗಾಗಲೇ ಮೊಬೈಲ್‌, ರೀಲ್ಸ್‌, ಗೇಮ್‌ಗಳ ಮಧ್ಯೆ ಬದುಕುತ್ತಿರುವ ಮಕ್ಕಳಿಗೆ ಸಮಯದ ಮೌಲ್ಯ ತಿಳಿಸುವುದು ಸವಾಲಾಗಿದೆ. ಇತ್ತೀಚೆಗೆ ಮತ್ತೊಂದು ವಿಚಿತ್ರ ಟ್ರೆಂಡ್‌ ಶುರುವಾಗಿದೆ. ಕೆಲವರು ಧಾರಾವಾಹಿ ಪಾತ್ರಗಳನ್ನೇ ನಿಜ ಜೀವನದ “ಐಡಲ್‌”ಗಳನ್ನಾಗಿ ನೋಡುತ್ತಾರೆ. ನಟ-ನಟಿಯರ ಉಡುಗೆ, ಮಾತು, ಜೀವನಶೈಲಿ ಎಲ್ಲವನ್ನೂ ಅನುಕರಿಸಲು ಯತ್ನಿಸುತ್ತಾರೆ.

ಆದರೂ, ಎಲ್ಲ ತಪ್ಪನ್ನೂ ಧಾರಾವಾಹಿಗಳ ಮೇಲೆ ಹಾಕಲು ಸಾಧ್ಯವಿಲ್ಲ. ಸಮಸ್ಯೆ ಸಾಧನದಲ್ಲಿಲ್ಲ, ಅದರ ಬಳಕೆಯಲ್ಲಿದೆ. ಚಾಕು ಒಂದನ್ನು ತರಕಾರಿ ಕತ್ತರಿಸಲೂ ಬಳಸಬಹುದು, ಗಾಯಗೊಳಿಸಲೂ ಬಳಸಬಹುದು. ಹಾಗೇ ಧಾರಾವಾಹಿಗಳೂ. ಮಿತಿಯಲ್ಲಿ ನೋಡಿದರೆ ಮನರಂಜನೆ. ಅದೇ ಜೀವನವಾದರೆ ಸಮಸ್ಯೆ. ಮನರಂಜನೆ ಬೇಕು. ಆದರೆ ಬದುಕನ್ನೇ ಮರೆಸುವ ಮಟ್ಟಿಗೆ ಬೇಡ.

– ಉಷಾ ಭಟ್.

ಎಂ.ಜಿ.ಎಂ ಕಾಲೇಜು, ಉಡುಪಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share