ಕೋಟಿ ಕೋಟಿ ಹಣ ಹೊಂಡಕ್ಕೆ?!
ಶಿರಸಿ: ಅರಣ್ಯ ಪ್ರದೇಶ ವಿಸ್ತರಣೆ ಹಾಗೂ ಪರಿಸರ ಸಂರಕ್ಷಣೆ ಹೆಸರಿನಲ್ಲಿ ಅರಣ್ಯ ಇಲಾಖೆ ಕೈಗೊಳ್ಳುತ್ತಿರುವ ನಡುತೋಪು ಕಾಮಗಾರಿಗಳ ವಿರುದ್ಧ ಅರಣ್ಯವಾಸಿಗಳಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
“ಕೋಟಿ ಕೋಟಿ ಹಣ ಖರ್ಚು ಮಾಡಲಾಗಿದೆ ಎನ್ನುತ್ತಾರೆ, ಆದರೆ ಹೊಂಡಗಳು ಎಲ್ಲಿ? ನೆಟ್ಟ ಗಿಡಗಳು ಎಷ್ಟು? ಬದುಕಿರುವುದು ಎಷ್ಟು?” ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಶ್ನಿಸಿದ್ದಾರೆ.
ಪ್ರಸಕ್ತ ಮಳೆಗಾಲದಲ್ಲಿ ಅರಣ್ಯವಾಸಿಗಳ ದಶಲಕ್ಷ ಗಿಡ ನೆಡುವ ಅಭಿಯಾನದ ಪೂರ್ವಭಾವಿಯಾಗಿ ಗ್ರೀನ್ ಕಾರ್ಡ್ ಪ್ರಮುಖರೊಂದಿಗೆ ದೂರವಾಣಿ ಮೂಲಕ ಸಂವಾದ ನಡೆಸಿದ ವೇಳೆ ಜಿಲ್ಲೆಯ ವಿವಿಧ ಭಾಗಗಳಿಂದ ಅರಣ್ಯ ಇಲಾಖೆಯ ಕಾರ್ಯ ವೈಖರಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಡುತೋಪಿನಲ್ಲಿ ಬದುಕಿರುವ ಗಿಡಗಳಿಗಿಂತ ಸತ್ತ ಗಿಡಗಳೇ ಹೆಚ್ಚು ಕಂಡು ಬರುತ್ತಿವೆ. ಕೆಲವೆಡೆ ಜೀವಂತ ಗಿಡಗಳನ್ನು ಸರಿಯಾಗಿ ನೆಡದೇ ಹತ್ತಿರದ ನೀರಿನ ಹರಿವಿನಲ್ಲಿ ತೇಲಿ ಬಿಡುವ ಸ್ಥಿತಿಯನ್ನೇ ಕಂಡಿದ್ದೇವೆ. ಗಿಡ ನೆಟ್ಟ ಸ್ಥಳಗಳಲ್ಲಿ ಹೊಂಡಗಳಿಗೂ ಸರಿಯಾದ ಮಾನದಂಡ ಕಾಣುತ್ತಿಲ್ಲ ಎಂದು ದೂರಿದ್ದಾರೆ.
ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಅರಣ್ಯ ಇಲಾಖೆ, ಗಿಡಗಳ ಪ್ಲಾಸ್ಟಿಕ್ ಕವರ್‌ಗಳನ್ನು ಅರಣ್ಯ ಪ್ರದೇಶದಲ್ಲೇ ರಾಶಿರಾಶಿಯಾಗಿ ಬಿಸಾಡಿರುವುದು ಇಲಾಖೆಯ ಬೇಜವಾಬ್ದಾರಿತನವನ್ನು ತೋರಿಸುತ್ತದೆ. ಅಲ್ಲದೆ, ಇಲಾಖೆ ನೆಟ್ಟ ಗಿಡಗಳಿಗಿಂತ ಸಹಜ ಬೀಜ ಪ್ರಸರಣದಿಂದ ಬೆಳೆದ ಗಿಡಗಳೇ ಹೆಚ್ಚು ಬದುಕುತ್ತಿವೆ ಎಂದು ವ್ಯಂಗ್ಯವಾಡಿದ್ದಾರೆ.
ಪದೇ ಪದೇ ಅಕೆಶಿಯಾ ಗಿಡಗಳನ್ನು ನೆಟ್ಟು ಬಳಿಕ ಕಡಿಯುವ ಕ್ರಮ ಪರಿಸರ ವಿರೋಧಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದ್ದು, ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಅರಣ್ಯವಾಸಿಗಳು ಮನೆ ದುರಸ್ತಿ ಮಾಡುವಾಗ ಕಾನೂನು ಹೇಳುವ ಇಲಾಖೆ, ಅರಣ್ಯ ಪ್ರದೇಶದಲ್ಲೇ ವಾಣಿಜ್ಯ ಕಟ್ಟಡ ನಿರ್ಮಾಣವಾಗುವಾಗ ಯಾವ ಮಾನದಂಡ ಅನುಸರಿಸುತ್ತದೆ ಎಂದು ಸಂವಾದದಲ್ಲಿ ಪ್ರಶ್ನಿಸಲಾಗಿದೆ. ಹಳೆಯ ತೋಪುಗಳ ಮುಂದೆ ಹೊಸ ಕಾಮಗಾರಿಗಳ ನಾಮಫಲಕ ಹಾಕಿರುವುದೂ ಸಂಶಯಕ್ಕೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಭಯಾರಣ್ಯ ಪ್ರದೇಶಗಳಲ್ಲಿ ಕೇಂದ್ರ ವನ್ಯಜೀವಿ ನಿರ್ವಹಣಾ ಯೋಜನೆಗೆ ವಿರುದ್ಧವಾಗಿ ಗಿಡ ನೆಡುವುದು, ತಂತಿಬೇಲಿ ಹಾಗೂ ಇಂಗುಗುಂಡಿ ಕಾಮಗಾರಿಗಳನ್ನು ಕೇಂದ್ರದ ಪೂರ್ವಾನುಮತಿ ಇಲ್ಲದೇ ನಡೆಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
ಮಾಹಿತಿ ಹಕ್ಕು ಅಧಿನಿಯಮ ಹಾಗೂ ಸಾರ್ವಜನಿಕ ಕಾಮಗಾರಿಗಳ ಪಾರದರ್ಶಕತಾ ನಿಯಮಗಳನ್ನು ಪಾಲಿಸದೇ ಕಾಮಗಾರಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ ಎಂದು ಆರೋಪಿಸಿರುವ ಹೋರಾಟಗಾರರು, ಪ್ರತಿ ವರ್ಷ ನೆಟ್ಟ ಗಿಡಗಳಲ್ಲಿ ಬದುಕಿರುವ ಗಿಡಗಳ ಸಂಖ್ಯೆ ಕುರಿತು ಪರಿಶೀಲನಾ ವರದಿ ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಆಗ್ರಹಿಸಿದ್ದಾರೆ.