ಶಿರಸಿ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಜಿಲ್ಲಾದ್ಯಂತ ದಶಲಕ್ಷ ಗಿಡ ನೆಡುವ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಜುಲೈ 21ರಂದು ಉತ್ತರ ಕನ್ನಡ ಜಿಲ್ಲೆಯ 137 ಗ್ರಾಮ ಪಂಚಾಯಿತಿ ವ್ಯಾಪ್ತಿಯ 500ಕ್ಕೂ ಅಧಿಕ ಸ್ಥಳಗಳಲ್ಲಿ ಏಕಕಾಲದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ನಗರದ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ದಶಲಕ್ಷ ಗಿಡ ನೆಡುವ ಅಭಿಯಾನದ ಲಾಂಛನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಅರಣ್ಯ ಭೂಮಿ ಹಕ್ಕಿಗಾಗಿ ಕಳೆದ 34 ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಿರುವ ಹಿನ್ನಲೆಯಲ್ಲಿ, ಅರಣ್ಯವಾಸಿಗಳಲ್ಲಿ ಪರಿಸರ ಸಂರಕ್ಷಣೆ, ರಕ್ಷಣೆ ಹಾಗೂ ಅಭಿವೃದ್ಧಿ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಮಳೆಗಾಲದಲ್ಲಿ ಗಿಡ ನೆಡುವ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಇದು ಹೋರಾಟಗಾರರ ವೇದಿಕೆಯ ವಿಶೇಷ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಅರಣ್ಯವಾಸಿಗಳು ಪರಿಸರವನ್ನು ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ಅರಣ್ಯ ಮತ್ತು ಪರಿಸರದೊಂದಿಗೆ ಜೀವನ ಅವಲಂಬಿತವಾಗಿರುವ ಸಮುದಾಯಗಳಲ್ಲಿ ಪರಿಸರ ಪ್ರಜ್ಞೆ ಬೆಳೆಸುವುದು ಅತ್ಯಂತ ಅಗತ್ಯವಾಗಿದೆ. ಅರಣ್ಯ ಭೂಮಿ ಹಕ್ಕಿನ ಹೋರಾಟದ ಜತೆಗೆ ಪರಿಸರ ಜಾಗೃತಿಯನ್ನೂ ಸಮಾನವಾಗಿ ಮುಂದುವರಿಸಿಕೊಂಡು ಹೋಗುತ್ತಿರುವುದು ವೇದಿಕೆಯ ಪ್ರಮುಖ ಕಾರ್ಯವಾಗಿದೆ ಎಂದು ತಿಳಿಸಿದರು.
ಮಾನವ ತನ್ನ ಅಗತ್ಯಗಳಿಗಾಗಿ ಅರಣ್ಯ ಸಂಪತ್ತನ್ನು ನಾಶಪಡಿಸಿರುವ ಪರಿಣಾಮವಾಗಿ ಪರಿಸರ ಸಮತೋಲನಕ್ಕೆ ಧಕ್ಕೆ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗುತ್ತಿರುವ ಅರಣ್ಯವಾಸಿಗಳ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಅರಣ್ಯವಾಸಿಗಳಿಂದ ಪ್ರತಿ ವರ್ಷ ಸಂಘಟಿತವಾಗಿ ನಡೆಯುತ್ತಿರುವ ದಶಲಕ್ಷ ಗಿಡ ನೆಡುವ ಅಭಿಯಾನ ಪ್ರಶಂಸನೀಯವಾಗಿದೆ. ಗಿಡಗಳನ್ನು ಕೇವಲ ನೆಡುವುದಷ್ಟೇ ಅಲ್ಲ, ಅವು ಬದುಕಿ ಬೆಳೆವಂತೆ ಆರೈಕೆ ಮಾಡಬೇಕು. ಅರಣ್ಯ ಇಲಾಖೆ ನೆಟ್ಟ ರೀತಿಯಲ್ಲಿ ಗಿಡ ನೆಟ್ಟು ಸಾಯಿಸುವ ಬದಲು, ಅವುಗಳ ಪೋಷಣೆ ಮತ್ತು ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ರವೀಂದ್ರ ನಾಯ್ಕ ಸಲಹೆ ನೀಡಿದರು.
ಸಭೆಯಲ್ಲಿ ವಿವಿಧ ತಾಲೂಕುಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು. ಅಂಕೋಲಾ ತಾಲೂಕು ಅಧ್ಯಕ್ಷ ರಮಾನಂದ ನಾಯ್ಕ, ಜಿಲ್ಲಾ ಸಂಚಾಲಕ ಇಬ್ರಾಹೀಂ ಗೌಡಳ್ಳಿ, ಮಹಾಬಲೇಶ್ವರ ನಾಯ್ಕ ಬೇಡ್ಕಣಿ, ಕುಮಟಾ ಅಧ್ಯಕ್ಷ ಮಂಜು ಮರಾಠಿ ನಾಗೂರು, ಮುಂಡಗೋಡ ಅಧ್ಯಕ್ಷ ಶಿವಾನಂದ ಜೋಗಿ, ಹೊನ್ನಾವರ ಅಧ್ಯಕ್ಷ ಮಹೇಶ ನಾಯ್ಕ ಕಾನಕ್ಕಿ, ಬಾಲಚಂದ್ರ ಶೆಟ್ಟಿ, ಶಂಕರ ಕೊಡಿಯಾ, ರಾಜು ಮುಕ್ರಿ ಸೇರಿದಂತೆ ಹಲವರು ಮಾತನಾಡಿದರು.
ಯಲ್ಲಾಪುರ ಅಧ್ಯಕ್ಷ ಚಂದ್ರು ಪೂಜಾರಿ ಮಂಚಿಕೇರಿ, ಸಂಚಾಲಕರಾದ ಶಂಕರ ಕೊಡಿಯಾ, ಎಂ.ಆರ್. ನಾಯ್ಕ ಕಂಡ್ರಾಜಿ, ಗಣಪತಿ ನಾಯ್ಕ ಬೆಡಸಗಾಂವ್, ದಿವಾಕರ ಮರಾಠಿ, ಅಬ್ದುಲ್ ಸುಭಾನ ಅರೆಂದೂರು, ರಾಮಚಂದ್ರ ನಾಯ್ಕ, ಅನಿತಾ ನಾಯ್ಕ ಕಾನಸೂರು ಸೇರಿದಂತೆ ಅನೇಕರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.