ನಿಮ್ಮ ಬ್ಯಾಂಕ್ ಖಾತೆಯನ್ನು ಎರಡು ದಿನ ಬಳಸಲು ಕೊಡಿ, ₹10,000 ಕಮಿಷನ್ ಕೊಡುತ್ತೇವೆ…, ನಿಮ್ಮ ಹೆಸರಿನಲ್ಲಿ ಒಂದು ಖಾತೆ ತೆರೆಸಿ ಕೊಡಿ, ಉಳಿದ ಕೆಲಸವನ್ನು ನಾವು ನೋಡಿಕೊಳ್ಳುತ್ತೇವೆ…, ನಿಮ್ಮ ATM ಕಾರ್ಡ್ ಮತ್ತು UPI ಬೇಕು, ಹಣ ಮಾತ್ರ ನಿಮ್ಮ ಖಾತೆಗೆ ಬರುತ್ತದೆ, ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ…
ಇಂತಹ ಮಾತುಗಳನ್ನು ಕೇಳಿದರೆ ಬಹುತೇಕ ಜನರಿಗೆ ಇದು ಸುಲಭದ ಆದಾಯದ ಅವಕಾಶವೆಂದು ಅನಿಸಬಹುದು. ಆದರೆ ಇದೇ ಒಂದು ನಿರ್ಧಾರ ನಿಮ್ಮನ್ನು ಅರಿವಿಲ್ಲದೆ ಸೈಬರ್ ಅಪರಾಧದ ಜಾಲಕ್ಕೆ ತಳ್ಳಬಹುದು. ಕೆಲವೇ ದಿನಗಳಲ್ಲಿ ಪೊಲೀಸರು ವಿಚಾರಣೆಗೆ ಕರೆಯಬಹುದು, ನೀವು ಮಾಡದ ಅಪರಾಧಕ್ಕೆ ನ್ಯಾಯಾಲಯದ ಮೆಟ್ಟಿಲೇರುವ ಪರಿಸ್ಥಿತಿ ಎದುರಾಗಬಹುದು.
ಇಂತಹ ಅಪಾಯಕಾರಿ ಸೈಬರ್ ವಂಚನೆಯನ್ನೇ ‘ಮನಿ ಮ್ಯೂಲ್ (Money Mule) ಸ್ಕ್ಯಾಮ್’ ಎಂದು ಕರೆಯಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲೂ ಈ ವಂಚನೆ ವೇಗವಾಗಿ ಹೆಚ್ಚುತ್ತಿದ್ದು, ಸಾವಿರಾರು ಜನರು ತಾವು ಅಪರಾಧ ಮಾಡುತ್ತಿದ್ದೇವೆ ಎಂಬ ಅರಿವೇ ಇಲ್ಲದೆ ಅಪರಾಧಿಗಳ ಕೈಯಲ್ಲಿ ಸಾಧನಗಳಾಗಿ ಬಳಸಲ್ಪಡುತ್ತಿದ್ದಾರೆ.
‘ಮ್ಯೂಲ್’ ಎಂದರೆ ಕತ್ತೆ ಮತ್ತು ಕುದುರೆಯ ಮಿಶ್ರ ತಳಿ. ಅದು ತನ್ನ ಬೆನ್ನಿನ ಮೇಲೆ ಏನಿದೆ ಎಂಬುದನ್ನು ಅರಿಯದೆ, ತನ್ನ ಮೇಲೆ ಹಾಕಿದ ಭಾರವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುತ್ತದೆ. ಇದೇ ತತ್ವವನ್ನು ಸೈಬರ್ ಅಪರಾಧಿಗಳು ಹಣ ವರ್ಗಾವಣೆಯಲ್ಲೂ ಬಳಸುತ್ತಿದ್ದಾರೆ. ಅವರು ಕದ್ದ ಅಥವಾ ವಂಚನೆಯ ಮೂಲಕ ಪಡೆದ ಹಣವನ್ನು ತಮ್ಮ ಖಾತೆಗೆ ನೇರವಾಗಿ ಹಾಕಿಸಿಕೊಳ್ಳುವುದಿಲ್ಲ. ಬದಲಿಗೆ ಸಾಮಾನ್ಯ ಜನರ ಬ್ಯಾಂಕ್ ಖಾತೆಗಳನ್ನು ಮಧ್ಯಂತರವಾಗಿ ಬಳಸುತ್ತಾರೆ.
ಹೀಗೆ ಅಪರಾಧದಿಂದ ಬಂದ ಹಣವನ್ನು ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಸಾಗಿಸಲು ಬಳಸುವ ವ್ಯಕ್ತಿಯನ್ನು ಮನಿ ಮ್ಯೂಲ್ ಎಂದು ಕರೆಯಲಾಗುತ್ತದೆ. ಆತ ತಿಳಿದು ಮಾಡಿರಬಹುದು, ಗೊತ್ತಿಲ್ಲದೆ ಮಾಡಿರಬಹುದು ಅಥವಾ ಮೋಸಕ್ಕೆ ಒಳಗಾಗಿರಬಹುದು. ಆದರೆ ಕಾನೂನಿನ ದೃಷ್ಟಿಯಲ್ಲಿ ಅವನ ಬ್ಯಾಂಕ್ ಖಾತೆಯೇ ತನಿಖೆಯ ಮೊದಲ ಕೊಂಡಿಯಾಗುತ್ತದೆ.
ಈ ವಂಚನೆ ಸಾಮಾನ್ಯವಾಗಿ ಬಹಳ ಯೋಜಿತವಾಗಿ ನಡೆಯುತ್ತದೆ. ಮೊದಲಿಗೆ ಸೈಬರ್ ಅಪರಾಧಿಗಳು ಕಾಲೇಜು ವಿದ್ಯಾರ್ಥಿಗಳು, ನಿರುದ್ಯೋಗಿಗಳು, ಹಿರಿಯ ನಾಗರಿಕರು, ಕಡಿಮೆ ಆದಾಯದವರು ಅಥವಾ ತುರ್ತು ಹಣದ ಅಗತ್ಯವಿರುವವರನ್ನು ಗುರುತಿಸುತ್ತಾರೆ. ನಂತರ “ಮನೆ ಕುಳಿತೇ ಹಣ ಸಂಪಾದಿಸಿ”, “ಪಾರ್ಟ್‌ಟೈಮ್ ಕೆಲಸ”, “ಪ್ರತಿ ತಿಂಗಳು ₹20,000 ಆದಾಯ”, “ಬ್ಯಾಂಕ್ ಖಾತೆ ಬಳಸಲು ಕೊಟ್ಟರೆ ಕಮಿಷನ್” ಎಂಬ ಆಮಿಷಗಳನ್ನು WhatsApp, Telegram, Facebook, Instagram, ನಕಲಿ ಉದ್ಯೋಗ ಜಾಹೀರಾತುಗಳು ಅಥವಾ ಪರಿಚಯಸ್ಥರ ಮೂಲಕ ನೀಡುತ್ತಾರೆ.
ಒಮ್ಮೆ ವ್ಯಕ್ತಿ ಒಪ್ಪಿದರೆ, ಅವನಿಂದ ಬ್ಯಾಂಕ್ ಖಾತೆ ಸಂಖ್ಯೆ, ATM ಕಾರ್ಡ್, ಚೆಕ್ ಬುಕ್, ಪಾಸ್‌ಬುಕ್, UPI, ನೆಟ್ ಬ್ಯಾಂಕಿಂಗ್ ವಿವರಗಳು, PIN, OTP ಅಥವಾ ಹೊಸ ಬ್ಯಾಂಕ್ ಖಾತೆಯನ್ನೇ ತೆರೆಸಿಕೊಳ್ಳುತ್ತಾರೆ.
ಇದಾದ ಬಳಿಕ ನಿಜವಾದ ಆಟ ಆರಂಭವಾಗುತ್ತದೆ. ಆನ್‌ಲೈನ್ ವಂಚನೆ, ಫಿಶಿಂಗ್, ಹೂಡಿಕೆ ವಂಚನೆ, ನಕಲಿ ಉದ್ಯೋಗ, ಲಾಟರಿ, ಡಿಜಿಟಲ್ ಬಂಧನ ಅಥವಾ ಇತರ ಸೈಬರ್ ಅಪರಾಧಗಳಿಂದ ಕದ್ದ ಹಣವನ್ನು ಮೊದಲು ಮನಿ ಮ್ಯೂಲ್‌ನ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಹಣ ಖಾತೆಗೆ ಬಂದ ಕೆಲವೇ ನಿಮಿಷಗಳಲ್ಲಿ ಅದನ್ನು ಮತ್ತೊಂದು ಖಾತೆಗೆ ವರ್ಗಾಯಿಸಲಾಗುತ್ತದೆ ಅಥವಾ ATM ಮೂಲಕ ನಗದಾಗಿ ತೆಗೆಯಲಾಗುತ್ತದೆ. ಕೆಲವೊಮ್ಮೆ ಅದನ್ನು ಕ್ರಿಪ್ಟೋಕರೆನ್ಸಿಗೆ ಪರಿವರ್ತಿಸಿ ವಿದೇಶಗಳಿಗೂ ಕಳುಹಿಸಲಾಗುತ್ತದೆ.
ವಂಚನೆಗೆ ಒಳಗಾದ ವ್ಯಕ್ತಿ ಸೈಬರ್ ಪೊಲೀಸರಿಗೆ ದೂರು ನೀಡಿದಾಗ ತನಿಖೆ ಆರಂಭವಾಗುತ್ತದೆ. ಕದ್ದ ಹಣ ಮೊದಲು ಯಾವ ಖಾತೆಗೆ ಹೋಗಿದೆ ಎಂಬುದನ್ನು ಪೊಲೀಸರು ಪತ್ತೆಹಚ್ಚುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಅದು ಮನಿ ಮ್ಯೂಲ್‌ನ ಬ್ಯಾಂಕ್ ಖಾತೆಯಾಗಿರುತ್ತದೆ. ಹೀಗಾಗಿ ಮೊದಲಿಗೆ ಆ ಖಾತೆಯನ್ನು ಫ್ರೀಜ್ ಮಾಡಲಾಗುತ್ತದೆ.
ನಂತರ ಖಾತೆದಾರನನ್ನು ವಿಚಾರಣೆಗೆ ಕರೆಯಲಾಗುತ್ತದೆ. ಕೆಲವೊಮ್ಮೆ ಬಂಧನವೂ ಆಗಬಹುದು. “ನನಗೆ ಗೊತ್ತಿರಲಿಲ್ಲ” ಎಂದು ಹೇಳುವುದು ಮಾತ್ರ ಸಾಕಾಗುವುದಿಲ್ಲ. ಆತ ನಿಜವಾಗಿಯೂ ಮೋಸಕ್ಕೊಳಗಾಗಿದ್ದಾನೆಯೇ ಅಥವಾ ಉದ್ದೇಶಪೂರ್ವಕವಾಗಿ ಸಹಕರಿಸಿದ್ದಾನೆಯೇ ಎಂಬುದನ್ನು ತನಿಖೆಯ ಮೂಲಕ ನಿರ್ಧರಿಸಲಾಗುತ್ತದೆ. ಆದ್ದರಿಂದ ನಿರಪರಾಧಿಗಳೂ ಸಾಕಷ್ಟು ಕಾನೂನು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ಮನಿ ಮ್ಯೂಲ್‌ಗಳಲ್ಲಿ ಸಾಮಾನ್ಯವಾಗಿ ಮೂರು ವಿಧಗಳಿರುತ್ತಾರೆ. ಕೆಲವರು ಹಣ ಅಪರಾಧದ್ದೇ ಎಂದು ತಿಳಿದಿದ್ದರೂ ಕಮಿಷನ್‌ಗಾಗಿ ಸಹಕರಿಸುತ್ತಾರೆ. ಇನ್ನು ಕೆಲವರು ಇದು ಸಾಮಾನ್ಯ ಪಾರ್ಟ್‌ಟೈಮ್ ಕೆಲಸವೆಂದು ನಂಬಿ ಅರಿವಿಲ್ಲದೆ ತಮ್ಮ ಖಾತೆ ಬಳಸಲು ಕೊಡುತ್ತಾರೆ. ಮತ್ತೆ ಕೆಲವರು ಬ್ಲ್ಯಾಕ್‌ಮೇಲ್, ಬೆದರಿಕೆ ಅಥವಾ ಒತ್ತಡದಿಂದ ಸಹಕರಿಸುವ ಪರಿಸ್ಥಿತಿಗೆ ತಳ್ಳಲ್ಪಡುತ್ತಾರೆ. ಕಾರಣ ಏನೇ ಇರಲಿ, ಅಪರಾಧದ ಹಣ ಅವರ ಖಾತೆಯ ಮೂಲಕ ಹರಿದಿರುವುದು ತನಿಖೆಯಲ್ಲಿ ಪ್ರಮುಖ ಸಾಕ್ಷಿಯಾಗುತ್ತದೆ.
ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳು ಮತ್ತು ಹೊಸದಾಗಿ ಉದ್ಯೋಗ ಹುಡುಕುತ್ತಿರುವ ಯುವಕರೇ ಇಂತಹ ವಂಚಕರ ಪ್ರಮುಖ ಗುರಿಯಾಗುತ್ತಿದ್ದಾರೆ.
ಈ ವಂಚನೆಯನ್ನು ಗುರುತಿಸುವುದು ಕಷ್ಟವೇನಲ್ಲ. “ಕೆಲಸ ಏನೂ ಇಲ್ಲ, ಹಣ ಮಾತ್ರ ಸಿಗುತ್ತದೆ”, “ನಿಮ್ಮ ಬ್ಯಾಂಕ್ ಖಾತೆ ಬೇಕು”, “ATM ಕಾರ್ಡ್ ಕೊಡಿ”, “UPI PIN ಹೇಳಿ”, “OTP ಕಳುಹಿಸಿ”, “ನಿಮ್ಮ ಖಾತೆಗೆ ಹಣ ಬರುತ್ತದೆ, ಅದನ್ನು ಮುಂದೆ ಕಳುಹಿಸಿದರೆ ಸಾಕು”, “ಇದು ಸಂಪೂರ್ಣ ಕಾನೂನುಬದ್ಧ” ಎಂಬ ಮಾತುಗಳನ್ನು ಯಾರಾದರೂ ಹೇಳಿದರೆ ಅದು ಅಪಾಯದ ಮೊದಲ ಎಚ್ಚರಿಕೆ ಎಂದು ಅರ್ಥ ಮಾಡಿಕೊಳ್ಳಬೇಕು.
ಈ ವಂಚನೆಯಿಂದ ಉಂಟಾಗುವ ಪರಿಣಾಮಗಳು ಬಹಳ ಗಂಭೀರವಾಗಿರುತ್ತವೆ. ಬ್ಯಾಂಕ್ ಖಾತೆ ಸ್ಥಗಿತವಾಗಬಹುದು. ನಿಮ್ಮ ಹೆಸರಿನಲ್ಲಿ ಸೈಬರ್ ಅಪರಾಧ ಪ್ರಕರಣ ದಾಖಲಾಗುವ ಸಾಧ್ಯತೆ ಇರುತ್ತದೆ. ಆದಾಯ ತೆರಿಗೆ, ಬ್ಯಾಂಕ್ ಮತ್ತು ತನಿಖಾ ಸಂಸ್ಥೆಗಳ ಪರಿಶೀಲನೆಗೆ ಒಳಗಾಗಬಹುದು. ಭವಿಷ್ಯದಲ್ಲಿ ಸಾಲ, ಕ್ರೆಡಿಟ್ ಕಾರ್ಡ್ ಅಥವಾ ಇತರ ಬ್ಯಾಂಕಿಂಗ್ ಸೇವೆಗಳನ್ನು ಪಡೆಯುವುದಕ್ಕೂ ತೊಂದರೆ ಉಂಟಾಗಬಹುದು. ಅತ್ಯಂತ ಮುಖ್ಯವಾಗಿ, ನೀವು ಅಪರಾಧ ಮಾಡದಿದ್ದರೂ ನಿಮ್ಮ ಹೆಸರು ಅಪರಾಧ ಪ್ರಕರಣದ ದಾಖಲೆಗಳಲ್ಲಿ ಕಾಣಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಹುದು.
ಹಾಗಾದರೆ ಈ ಬಲೆಯಿಂದ ತಪ್ಪಿಸಿಕೊಳ್ಳುವುದು ಹೇಗೆ? ಉತ್ತರ ತುಂಬಾ ಸರಳ. ನಿಮ್ಮ ಬ್ಯಾಂಕ್ ಖಾತೆಯನ್ನು ಯಾರಿಗೂ ಬಳಸಲು ಕೊಡಬೇಡಿ. ATM ಕಾರ್ಡ್, PIN, UPI PIN, OTP, ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್ ಅಥವಾ ಚೆಕ್ ಬುಕ್‌ಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಅಪರಿಚಿತ ವ್ಯಕ್ತಿಯಿಂದ ಬಂದ ಹಣವನ್ನು ಮುಂದಕ್ಕೆ ವರ್ಗಾಯಿಸುವ ಕೆಲಸವನ್ನು ಎಂದಿಗೂ ಮಾಡಬೇಡಿ.
ನಿಮ್ಮ ಬ್ಯಾಂಕ್ ಖಾತೆಯಲ್ಲಿ ನಿಮಗೆ ಗೊತ್ತಿಲ್ಲದ ವ್ಯವಹಾರ ಕಂಡುಬಂದರೆ ತಕ್ಷಣ ಬ್ಯಾಂಕ್‌ಗೆ ಮಾಹಿತಿ ನೀಡಿ. ಸೈಬರ್ ವಂಚನೆಯ ಅನುಮಾನ ಬಂದರೆ ತಡ ಮಾಡದೆ 1930 ಸಹಾಯವಾಣಿಗೆ ಕರೆ ಮಾಡಿ ಅಥವಾ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ ನಲ್ಲಿ ದೂರು ದಾಖಲಿಸಿ.