ಯಲ್ಲಾಪುರ: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ವೇಳೆ ಯಲ್ಲಾಪುರದ ಕೆಲವು ಮಸೀದಿಗಳು ಹಾಗೂ ಶಾದಿ ಮಹಲ್‌ಗಳಲ್ಲಿ ಅರ್ಜಿ ಸ್ವೀಕಾರ ಮತ್ತು ಪ್ರಕ್ರಿಯೆ ನಡೆಯುತ್ತಿದೆ ಎಂಬ ಮಾಹಿತಿ ಬಿಜೆಪಿ ಬಿಎಲ್‌ಎ-2 ಸದಸ್ಯರು ಹಾಗೂ ಸ್ಥಳೀಯ ಪ್ರಮುಖರಿಂದ ಲಭಿಸಿದೆ ಎಂದು ಯಲ್ಲಾಪುರ ಬಿಜೆಪಿ ಮಂಡಲ ಅಧ್ಯಕ್ಷ ಪ್ರಸಾದ ಹೆಗಡೆ ಆರೋಪಿಸಿದ್ದಾರೆ.
ಈ ಸಂಬಂಧ ಈಗಾಗಲೇ ಬಿಜೆಪಿ ಬಿಎಲ್‌ಎ-1 ರಾಘವೇಂದ್ರ ಭಟ್ಟ ಹಾಸಣಗಿ ಅವರು ಜಿಲ್ಲಾ ಚುನಾವಣಾ ಆಡಳಿತಕ್ಕೆ ಲಿಖಿತ ದೂರು ಸಲ್ಲಿಸಿದ್ದಾರೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ರೀತಿಯ ಬೆಳವಣಿಗೆ ದುಃಖಕರವಾಗಿದ್ದು, ಚುನಾವಣಾ ಪ್ರಕ್ರಿಯೆಯಲ್ಲಿ ಅಧಿಕಾರದ ದುರ್ಬಳಕೆ ನಡೆಯಬಾರದು. ಕೆಲ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಬಗ್ಗೆ ಗೌರವವಿದೆ. ಆದರೆ, ಇನ್ನೂ ಕೆಲವರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಕಚೇರಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.
ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕಿದ್ದು, ಎಲ್ಲರೂ ವ್ಯವಸ್ಥೆಯನ್ನು ಸರಿಪಡಿಸಲು ಒಟ್ಟಾಗಿ ಕೆಲಸ ಮಾಡಬೇಕು. ಈ ಪ್ರಕ್ರಿಯೆಯಲ್ಲಿ ರಾಜಕೀಯ ಬೆರೆಸುವುದು ದೇಶಕ್ಕೆ ಮಾಡುವ ದ್ರೋಹ ಎಂದು ಪ್ರಸಾದ ಹೆಗಡೆ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.