ಕುಂಬ್ರಿ ಮರಾಠಿ ಸಮಾಜಕ್ಕೆ ಕಾರ್ಯಯೋಜನೆ ರೂಪಿಸಲು ನಿರ್ಧಾರ
ಶಿರಸಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಮಾಜಿಕ ಮೀಸಲಾತಿ ಪಟ್ಟಿಯಲ್ಲಿ ಸೇರ್ಪಡೆಯಾಗಿ 25 ವರ್ಷ ಕಳೆದರೂ, ಸ್ಥಳೀಯ ಸಂಸ್ಥೆಗಳ ರಾಜಕೀಯ ಮೀಸಲಾತಿ ಪಟ್ಟಿಯಲ್ಲಿ ಕುಂಬ್ರಿ ಮರಾಠಿ ಸಮಾಜಕ್ಕೆ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ, ರಾಜಕೀಯ ಮೀಸಲಾತಿ ಪಟ್ಟಿಗೆ ಸೇರ್ಪಡೆಗೊಳಿಸಲು ಕಾರ್ಯಯೋಜನೆ ರೂಪಿಸಲು ನಿರ್ಧರಿಸಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಭಟ್ಕಳ, ಹೊನ್ನಾವರ, ಕುಮಟಾ ಹಾಗೂ ಅಂಕೋಲಾ ತಾಲೂಕಿನ ಗುಡ್ಡಗಾಡು ಮತ್ತು ಅರಣ್ಯ ಪ್ರದೇಶಗಳಲ್ಲಿ ಸುಮಾರು 23 ಸಾವಿರ ಜನಸಂಖ್ಯೆ ಹೊಂದಿರುವ ಕುಂಬ್ರಿ ಮರಾಠಿ ಸಮಾಜವು ಗ್ರಾಮ್ಯ ಮರಾಠಿ ಭಾಷೆಯನ್ನು ಮಾತನಾಡುತ್ತಿದ್ದು, ಸಾಂಪ್ರದಾಯಿಕವಾಗಿ ಕುಂಬ್ರಿ ಬೇಸಾಯವನ್ನೇ ಜೀವನೋಪಾಯವಾಗಿ ನಡೆಸುತ್ತಿತ್ತು.
ಪ್ರಥಮ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಪ್ರೊ. ರವಿ ವರ್ಮಾ ಕುಮಾರ್ ಅವರ ಶಿಫಾರಸಿನ ಮೇರೆಗೆ 2000ರ ಸೆಪ್ಟೆಂಬರ್ 21ರಂದು ಕುಂಬ್ರಿ ಮರಾಠಿ ಸಮಾಜವನ್ನು ಕರ್ನಾಟಕ ಸರ್ಕಾರದ ಅತಿ ಹಿಂದುಳಿದ ‘ಎ’ ವರ್ಗದ ಮೀಸಲಾತಿ ಪಟ್ಟಿಗೆ ಸೇರಿಸಲಾಗಿತ್ತು.
ಆದರೆ, ಎರಡು ದಶಕಗಳಿಗೂ ಹೆಚ್ಚು ಕಾಲ ಕಳೆದರೂ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳ ರಾಜಕೀಯ ಮೀಸಲಾತಿ ಪಟ್ಟಿಯಲ್ಲಿ ಈ ಸಮುದಾಯಕ್ಕೆ ಸ್ಥಾನ ಸಿಕ್ಕಿಲ್ಲ.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಂವಿಧಾನಬದ್ಧ ಜನಪ್ರತಿನಿಧಿತ್ವದಿಂದ ವಂಚಿತರಾಗಿರುವ ಕುಂಬ್ರಿ ಮರಾಠಿ ಸಮಾಜವನ್ನು ರಾಜಕೀಯ ಮೀಸಲಾತಿ ಪಟ್ಟಿಗೆ ಸೇರಿಸಲು ಕಾರ್ಯಯೋಜನೆ ಪ್ರಗತಿಯಲ್ಲಿದೆ ಎಂದು ರವೀಂದ್ರ ನಾಯ್ಕ ಹೇಳಿದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕಿರಣ ಸೋಮ ಮರಾಠಿ ಮಾತನಾಡಿ, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯವಾಗಿದ್ದರೂ ರಾಜಕೀಯ ಮೀಸಲಾತಿಯಿಂದ ವಂಚಿತವಾಗಿರುವುದು ಸರ್ಕಾರದ ಗಮನಕ್ಕೆ ಬರಬೇಕಾದ ವಿಷಯ ಎಂದು ಹೇಳಿದರು.
ಜಿಲ್ಲಾ ಕುಂಬ್ರಿ ಮರಾಠಿ ಅಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥ ಮರಾಠಿ (ನಾಗೂರು) ಮಾತನಾಡಿ, ಹೋರಾಟದ ಫಲವಾಗಿ ಸಾಮಾಜಿಕ ಮೀಸಲಾತಿ ದೊರೆತಿದ್ದರೂ ರಾಜಕೀಯ ಮೀಸಲಾತಿ ಇನ್ನೂ ಜಾರಿಯಾಗಿಲ್ಲ. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳ ಮೀಸಲಾತಿ ಪಟ್ಟಿಯಲ್ಲಿ ಕುಂಬ್ರಿ ಮರಾಠಿ ಸಮಾಜವನ್ನು ಸೇರಿಸಲು ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.