ಕುಮಟಾ: ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಗೆ ಅಡ್ಡ ಬಂದಿದ್ದ ಆಕಳನ್ನು ತಪ್ಪಿಸಲು ಹೋಗಿ ಬೈಕ್ ಸ್ಕಿಡ್ ಆಗಿ ಗಂಭೀರವಾಗಿ ಗಾಯಗೊಂಡಿದ್ದ ಸವಾರ ಚಿಕಿತ್ಸೆ ಫಲಿಸದೆ ವಾರದ ಬಳಿಕ ಮೃತಪಟ್ಟಿದ್ದಾರೆ.
ಅಂಕೋಲಾ ತಾಲೂಕಿನ ಭಾವಿಕೇರಿ ನಿವಾಸಿ ಮಂಜುನಾಥ ಮಾರುತಿ ನಾಯ್ಕ (55) ನೀಡಿದ ದೂರಿನ ಮೇರೆಗೆ, ಹರೀಟಾ-ಕೊಡಂಬಳೆ ನಿವಾಸಿ ಮೋಹನ ಗಣೇಶ ದೇಶಭಂಡಾರಿ (63) ಅವರ ಮರಣಕ್ಕೆ ಸಂಬಂಧಿಸಿ ಪ್ರಕರಣ ದಾಖಲಾಗಿದೆ.
ಜುಲೈ 12ರಂದು ಸಂಜೆ ಸುಮಾರು 7.30ಕ್ಕೆ ಮೋಹನ ದೇಶಭಂಡಾರಿ ಅವರು ಕೆಎ-47-ಎಸ್-2766 ಸಂಖ್ಯೆಯ ಬಜಾಜ್ ಬೈಕ್‌ನಲ್ಲಿ ಕತಗಾಲ ಕಡೆಯಿಂದ ಹರೀಟಾ ಗ್ರಾಮದ ಕಡೆಗೆ ರಾಷ್ಟ್ರೀಯ ಹೆದ್ದಾರಿ 766(ಇ)ಯಲ್ಲಿ ತೆರಳುತ್ತಿದ್ದರು. ಈ ವೇಳೆ ಕ್ಯಾಕೋಡ ಕ್ರಾಸ್ ಸಮೀಪ ರಸ್ತೆಗೆ ಅಡ್ಡ ಬಂದಿದ್ದ ಆಕಳನ್ನು ತಪ್ಪಿಸಲು ಯತ್ನಿಸಿದಾಗ ಬೈಕ್ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದರು.
ಅಪಘಾತದಲ್ಲಿ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಮೂಗು ಹಾಗೂ ಕಿವಿಯಿಂದ ರಕ್ತಸ್ರಾವ ಉಂಟಾಗಿತ್ತು. ಅವರನ್ನು ಮೊದಲಿಗೆ ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜುಲೈ 13ರಂದು ಮಣಿಪಾಲದ ಕಸ್ತೂರಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆರೋಗ್ಯದಲ್ಲಿ ಚೇತರಿಕೆ ಕಂಡುಬರದ ಹಿನ್ನೆಲೆಯಲ್ಲಿ ಜುಲೈ 16ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಅದೇ ದಿನ ಮತ್ತೆ ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜುಲೈ 19ರಂದು ಬೆಳಿಗ್ಗೆ 9.45ಕ್ಕೆ ಅವರು ಮೃತಪಟ್ಟಿದ್ದಾರೆ.