Friday, July 24, 2026
Join WhatsApp Group
HomeCrimeದನಗನಹಳ್ಳಿ ದೇವರ ದುಡ್ಡು; ಸುತ್ತಿ ಸುತ್ತಿ ಸೇರಿದ್ದೆಲ್ಲಿಗೆ?!

ದನಗನಹಳ್ಳಿ ದೇವರ ದುಡ್ಡು; ಸುತ್ತಿ ಸುತ್ತಿ ಸೇರಿದ್ದೆಲ್ಲಿಗೆ?!

ಸಹಕಾರ ಸಂಘದ ಉಪಾಧ್ಯಕ್ಷನ ವಿರುದ್ಧ ₹3.20 ಲಕ್ಷ ದುರ್ಬಳಕೆ ಆರೋಪ!

ಶಿರಸಿ: ದೇವಸ್ಥಾನದ ಜೀರ್ಣೋದ್ಧಾರಕ್ಕೆಂದು ಗ್ರಾಮಸ್ಥರು ಭಕ್ತಿಯಿಂದ ಕೊಟ್ಟ ದೇಣಿಗೆಯ ಹಣ… ಜಂಟಿ ಬ್ಯಾಂಕ್ ಖಾತೆಯಿಂದ ಹೊರಟು ಒಂದರ ಹಿಂದೆ ಮತ್ತೊಂದು ಖಾತೆ ಸುತ್ತಿ, ಕೊನೆಗೆ ಸಹಕಾರ ಸಂಘದ ಉಪಾಧ್ಯಕ್ಷರ ವೈಯಕ್ತಿಕ ಖಾತೆ ಸೇರಿತೇ? ಇಂತಹ ಗಂಭೀರ ಆರೋಪದಡಿ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದನಗನಹಳ್ಳಿಯ ಜಗದೀಶ ಚನ್ನಬಸಪ್ಪ ಮುರಿಗಣ್ಣನವರ ನೀಡಿದ ದೂರಿನ ಮೇರೆಗೆ, ಕಾಳಂಗಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ, ದಾಸನಕೊಪ್ಪದ ಉಪಾಧ್ಯಕ್ಷ ನಟರಾಜ ಭೀಮಪ್ಪ ಹೊಸೂರ, ರಾಜೇಂದ್ರ ಪುಟ್ಟಪ್ಪ ಗೌಡ, ಸುನೀಲ್ ಬಸವರಾಜಗೌಡ (ಕರ್ಡೇರ) ಹಾಗೂ ಹೆಸರು-ವಿಳಾಸ ತಿಳಿಯದ ಇನ್ನೂ 6-7 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ದೂರುದಾರ ಸೇರಿದಂತೆ ಐವರು ದನಗನಹಳ್ಳಿಯ ಶ್ರೀ ಈಶ್ವರ ದೇವಸ್ಥಾನದ ಕಾರ್ಯಕಾರಿ ಸಮಿತಿ ಸದಸ್ಯರು. ದೇವಸ್ಥಾನದ ಜೀರ್ಣೋದ್ಧಾರ ಹಾಗೂ ದುರಸ್ತಿಗಾಗಿ ಗ್ರಾಮಸ್ಥರಿಂದ ಸಂಗ್ರಹಿಸಲಾದ ದೇಣಿಗೆಯ ಹಣವನ್ನು 2015ರ ಮಾರ್ಚ್ 31ರಂದು ₹1,81,814 ಮೊತ್ತದೊಂದಿಗೆ ಕಾಳಂಗಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಜಂಟಿ ಉಳಿತಾಯ ಖಾತೆಯಲ್ಲಿ ಠೇವಣಿ ಇಡಲಾಗಿತ್ತು. ನಂತರ ವಿವಿಧ ವ್ಯವಹಾರಗಳೊಂದಿಗೆ 2025ರ ಮಾರ್ಚ್ 31ರಂದು ಖಾತೆಯಲ್ಲಿ ₹3,23,795 ಇತ್ತು ಎನ್ನಲಾಗಿದೆ.

ಆದರೆ, 2025ರ ಮೇ 14ರಂದು ₹3.20 ಲಕ್ಷವನ್ನು ಖರ್ಚು ಮಾಡಿದಂತೆ ದಾಖಲೆ ಕಾಣಿಸಿಕೊಂಡಿದ್ದು, ಸಮಿತಿಯ ಸದಸ್ಯರಾದ ತಾವು ಸೇರಿದಂತೆ ಯಾರೂ ಆ ಹಣವನ್ನು ಪಡೆದಿಲ್ಲ, ಯಾವುದೇ ವೋಚರ್ ನೀಡಿಲ್ಲ ಹಾಗೂ ಆ ಹಣವನ್ನು ಬೇರೆಡೆ ವರ್ಗಾಯಿಸಲು ಅನುಮತಿಯನ್ನೂ ನೀಡಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ತನಿಖೆ ವೇಳೆ ಪಾವತಿ ಸಂಖ್ಯೆ 2187 ಆಧರಿಸಿ ಈ ಹಣ ಬಸವೇಶ್ವರ ಯುವಕ ಸಂಘ, ದನಗನಹಳ್ಳಿ ಖಾತೆಗೆ ವರ್ಗಾವಣೆಯಾಗಿರುವುದು ಕಂಡುಬಂದಿದೆ. ಅಲ್ಲಿಂದ 2025ರ ಅಕ್ಟೋಬರ್ 10ರಂದು ಅದೇ ಹಣವನ್ನು ಶ್ರೀ ದುರ್ಗಾದೇವಿ ದೇವಸ್ಥಾನ ಟ್ರಸ್ಟ್ ಖಾತೆಗೆ RTGS ಮೂಲಕ ಜಮಾ ಮಾಡಲಾಗಿದ್ದು, ನಂತರ 2025ರ ಅಕ್ಟೋಬರ್ 13ರಂದು ಟ್ರಸ್ಟ್ ಖಾತೆಯಲ್ಲಿದ್ದ ಹಣದೊಂದಿಗೆ ಸೇರಿ ಒಟ್ಟು ₹3.50 ಲಕ್ಷವನ್ನು ಮೊದಲನೇ ಆರೋಪಿ ನಟರಾಜ ಭೀಮಪ್ಪ ಹೊಸೂರರ ಪಂಜಾಬ್ ನ್ಯಾಷನಲ್ ಬ್ಯಾಂಕ್, ಶಿರಸಿ ಶಾಖೆಯ ವೈಯಕ್ತಿಕ ಖಾತೆಗೆ RTGS ಮೂಲಕ ವರ್ಗಾವಣೆ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಶ್ರೀ ಈಶ್ವರ ದೇವಸ್ಥಾನದ ಅಭಿವೃದ್ಧಿಗಾಗಿ ಗ್ರಾಮಸ್ಥರು ನೀಡಿದ್ದ ದೇಣಿಗೆಯ ಹಣವನ್ನು ಬ್ಯಾಂಕಿನ ದಾಖಲೆಗಳನ್ನು ಸೃಷ್ಟಿಸಿ ವೈಯಕ್ತಿಕ ಲಾಭಕ್ಕಾಗಿ ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಕೃತ್ಯಕ್ಕೆ ಉಳಿದ ಆರೋಪಿತರಾದ ರಾಜೇಂದ್ರ, ಸುನೀಲ್ ಹಾಗೂ ಇನ್ನೂ 6-7 ಮಂದಿ ಸಹಕರಿಸಿದ್ದಾರೆ ಎಂದೂ ದೂರುದಾರರು ಆರೋಪಿಸಿದ್ದಾರೆ.

ಸದ್ಯ ಬನವಾಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ದೇವರ ಕೆಲಸಕ್ಕೆಂದು ಜಮೆಯಾದ ಹಣ ನಿಜಕ್ಕೂ ಅಭಿವೃದ್ಧಿಗೆ ಬಳಕೆಯಾಯಿತೇ, ಅಥವಾ ಡಿಜಿಟಲ್ ಖಾತೆಗಳ ಸುತ್ತಾಟದಲ್ಲಿ ದಾರಿ ಬದಲಿಸಿತೇ? ಎಂಬ ಪ್ರಶ್ನೆಗೆ ತನಿಖೆಯೇ ಉತ್ತರಿಸಬೇಕಿದೆ.

[ಮೇಲಿನ ಎಲ್ಲಾ ಆರೋಪಗಳು ದಾಖಲಾದ ದೂರಿನ ಆಧಾರದ ಮೇಲೆ ವರದಿಯಾಗಿವೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗುವವರೆಗೆ ಸಂಬಂಧಪಟ್ಟವರನ್ನು ಅಪರಾಧಿಗಳೆಂದು ಪರಿಗಣಿಸಲಾಗುವುದಿಲ್ಲ]

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share