Friday, July 24, 2026
Join WhatsApp Group
HomeInformationಈ ಹಾಲು ಫ್ರಿಡ್ಜ್‌ನಲ್ಲಿ ಇಡದಿದ್ದರೂ ಕೆಡುವುದಿಲ್ಲ!

ಈ ಹಾಲು ಫ್ರಿಡ್ಜ್‌ನಲ್ಲಿ ಇಡದಿದ್ದರೂ ಕೆಡುವುದಿಲ್ಲ!

ಟೋನ್ಡ್‌ ಮಿಲ್ಕ್!‌ ಬಿಸಿಲಿದ್ದರೂ ಚಿಂತೆ ಇಲ್ಲ, ಫ್ರಿಡ್ಜ್ ಇಲ್ಲದಿದ್ದರೂ ಪರವಾಗಿಲ್ಲ. ತಿಂಗಳಾದರೂ ಈ ಹಾಲು ಕೆಡುವುದೇ ಇಲ್ಲ! ಇದನ್ನು ನೋಡಿದ ಕೆಲವರಿಗೆ ಒಂದು ಅನುಮಾನ. ʻಇದರಲ್ಲಿ ಏನೋ ರಾಸಾಯನಿಕ ಬೆರೆಸಿರಬೇಕುಇಲ್ಲದಿದ್ದರೆ ಹಾಲು ಹೇಗೆ ಕೆಡದೇ ಇರುತ್ತದೆ

ಉತ್ತರ ಸ್ವಲ್ಪ ಅಚ್ಚರಿಯೇ. ಅದಕ್ಕೆ ಕಾರಣ ರಾಸಾಯನಿಕವಲ್ಲ, ವಿಜ್ಞಾನ! ಮೊದಲು ಒಂದು ವಿಷಯ ಸ್ಪಷ್ಟಪಡಿಸೋಣ. ಟೋನ್ಡ್ ಮಿಲ್ಕ್ ಎಂದರೆ ಕೆಡದೇ ಇರುವ ಹಾಲು ಅಲ್ಲ. ಟೋನ್ಡ್ ಮಿಲ್ಕ್ ಅಂದರೆ ಕೊಬ್ಬಿನ ಪ್ರಮಾಣವನ್ನು ಸುಮಾರು ಶೇ. 3ರಷ್ಟು ನಿಯಂತ್ರಿಸಿ ತಯಾರಿಸಿದ ಹಾಲು.

ಅಂಗಡಿಯಲ್ಲಿ ಹೊರಗಡೆ ಇಟ್ಟು ಮಾರುವ ಹಾಲು ಬಹುತೇಕ UHT (Ultra High Temperature) ಹಾಲು. ಟೋನ್ಡ್ ಮಿಲ್ಕ್‌ನ್ನೂ UHT ವಿಧಾನದಲ್ಲಿ ಸಂಸ್ಕರಿಸಿ ಪ್ಯಾಕ್ ಮಾಡಬಹುದು. ಆಗ ಅದರ ಪ್ಯಾಕೆಟ್ ತೆರೆಯುವವರೆಗೂ ಫ್ರಿಡ್ಜ್ ಇಲ್ಲದೇ ಉಳಿಯುತ್ತದೆ.

UHT ವಿಧಾನದಲ್ಲಿ ಹಾಲನ್ನು 135–150°C ತಾಪಮಾನದಲ್ಲಿ ಕೇವಲ 2–5 ಸೆಕೆಂಡುಗಳ ಕಾಲ ಬಿಸಿ ಮಾಡಲಾಗುತ್ತದೆ. ಇದರಿಂದ ಹಾಲನ್ನು ಕೆಡಿಸುವ ಬ್ಯಾಕ್ಟೀರಿಯಾಗಳು ಮತ್ತು ಇತರ ಸೂಕ್ಷ್ಮಜೀವಿಗಳು ನಾಶವಾಗುತ್ತವೆ. ನಂತರ ಗಾಳಿ ಮತ್ತು ಜೀವಾಣು ಪ್ರವೇಶಿಸದಂತೆ ಅಸೆಪ್ಟಿಕ್ (Aseptic) ಪ್ಯಾಕಿಂಗ್ ಮಾಡಲಾಗುತ್ತದೆ. ಹೀಗಾಗಿ ಪ್ಯಾಕ್ ತೆರೆಯದೇ ಇದ್ದರೆ ಅದು ಹಲವು ತಿಂಗಳು ಸುರಕ್ಷಿತವಾಗಿ ಉಳಿಯಬಹುದು.

ಹಾಗಾದರೆ ಇದರಲ್ಲಿ ಪ್ರಿಸರ್ವೇಟಿವ್‌ಗಳು ಇವೆಯೇ? ಸಾಮಾನ್ಯವಾಗಿ ಇಲ್ಲ. ಭಾರತದಲ್ಲಿ ಹಾಲಿನ ಗುಣಮಟ್ಟವನ್ನು ನಿಯಂತ್ರಿಸುವ FSSAI ನಿಯಮಗಳ ಪ್ರಕಾರ UHT ಹಾಲು ದೀರ್ಘಕಾಲ ಉಳಿಯುವುದಕ್ಕೆ ತೀವ್ರ ಶಾಖದ ಸಂಸ್ಕರಣೆ ಮತ್ತು ಜೀವಾಣುರಹಿತ ಪ್ಯಾಕಿಂಗ್  ಮುಖ್ಯ ಕಾರಣವೇ ಹೊರತು ಹೆಚ್ಚುವರಿ ರಾಸಾಯನಿಕ ಸಂರಕ್ಷಕಗಳನ್ನು ಸೇರಿಸುವುದಲ್ಲ.

ಆದರೆ ಪ್ಯಾಕ್ ತೆರೆದ ಮೇಲೆ ಕಥೆ ಬದಲಾಗುತ್ತದೆ. ಆಗ ಗಾಳಿ ಮತ್ತು ಸೂಕ್ಷ್ಮಜೀವಿಗಳು ಒಳಗೆ ಪ್ರವೇಶಿಸುತ್ತವೆ. ಆದ್ದರಿಂದ ತೆರೆದ ನಂತರ UHT ಹಾಲನ್ನೂ ಫ್ರಿಡ್ಜ್‌ನಲ್ಲಿ ಇಟ್ಟು 2–3 ದಿನಗಳೊಳಗೆ ಬಳಸುವುದು ಉತ್ತಮ.

ಆರೋಗ್ಯದ ದೃಷ್ಟಿಯಿಂದ ನೋಡಿದರೆ, UHT ಹಾಲು ಸಾಮಾನ್ಯವಾಗಿ ಸುರಕ್ಷಿತ ಎಂದು ಪರಿಗಣಿಸಲಾಗಿದೆ. ಹೆಚ್ಚಿನ ಪ್ರೋಟೀನ್, ಕ್ಯಾಲ್ಸಿಯಂ ಸೇರಿದಂತೆ ಬಹುತೇಕ ಪೋಷಕಾಂಶಗಳು ಉಳಿಯುತ್ತವೆ. ಕೆಲವು ಉಷ್ಣಸಂವೇದಿ ವಿಟಮಿನ್‌ಗಳಲ್ಲಿ (ಉದಾಹರಣೆಗೆ ವಿಟಮಿನ್ C ಮತ್ತು ಕೆಲವು B ವಿಟಮಿನ್‌ಗಳು) ಸ್ವಲ್ಪ ಪ್ರಮಾಣದ ಇಳಿಕೆ ಆಗಬಹುದು. ಆದರೆ ಹಾಲು ವಿಟಮಿನ್ Cಯ ಪ್ರಮುಖ ಮೂಲವೇ ಅಲ್ಲ. ಹೀಗಾಗಿ ಸಾಮಾನ್ಯ ಆಹಾರ ಪದ್ಧತಿಯಲ್ಲಿ ಇದು ದೊಡ್ಡ ಸಮಸ್ಯೆಯಾಗುವುದಿಲ್ಲ.

ಹೌದು, ಕೆಲವರಿಗೆ UHT ಹಾಲಿನ ರುಚಿ ಸ್ವಲ್ಪ ವಿಭಿನ್ನವಾಗಿ ಅನಿಸಬಹುದು. ಅದಕ್ಕೂ ಕಾರಣ ರಾಸಾಯನಿಕವಲ್ಲ. ಅಧಿಕ ತಾಪಮಾನದಿಂದ ಹಾಲಿನಲ್ಲಿರುವ ಕೆಲವು ಪ್ರೋಟೀನ್‌ಗಳು ಮತ್ತು ಸಕ್ಕರೆಯ ನಡುವಿನ ಸ್ವಾಭಾವಿಕ ಬದಲಾವಣೆ.

ಹೀಗಾಗಿ ಮುಂದಿನ ಸಲ ಅಂಗಡಿಯಲ್ಲಿ ಫ್ರಿಡ್ಜ್ ಹೊರಗೆ ಇಟ್ಟಿರುವ ಹಾಲಿನ ಪ್ಯಾಕ್ ನೋಡಿ ʻಇದರಲ್ಲಿ ಏನೋ ಮಿಶ್ರಣ ಮಾಡಿದ್ದಾರೆ!ʼ ಎಂದು ತೀರ್ಪು ಕೊಡಬೇಡಿ. ಅದರೊಳಗೆ ಮ್ಯಾಜಿಕ್ ಇಲ್ಲ… ವಿಜ್ಞಾನ ಮಾತ್ರ ಇದೆ! ಮನುಷ್ಯ ಚಂದ್ರನ ಮೇಲೆ ಕಾಲಿಟ್ಟಿದ್ದಾನೆ, ಆದರೆ ಹಾಲು ಮೂರು ತಿಂಗಳು ಕೆಡದೇ ಇರುವುದು ಮಾತ್ರ ಕೆಲವರಿಗೆ ಇನ್ನೂ ದೊಡ್ಡ ಅದ್ಭುತ!

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share