Friday, July 24, 2026
Join WhatsApp Group
HomeLocal Newsಆಸ್ಪತ್ರೆಯ ಅವ್ಯವಸ್ಥೆ ಕುರಿತು ಬಿಜೆಪಿ ಧ್ವನಿ

ಆಸ್ಪತ್ರೆಯ ಅವ್ಯವಸ್ಥೆ ಕುರಿತು ಬಿಜೆಪಿ ಧ್ವನಿ

ಪಂಡಿತ ಆಸ್ಪತ್ರೆಯಲ್ಲಿ 24×7 ತುರ್ತು ಚಿಕಿತ್ಸಾ ವ್ಯವಸ್ಥೆ ಆರಂಭಿಸಲು ಒತ್ತಾಯ

ಶಿರಸಿ: ಹಾವು ಕಡಿತದಿಂದ ಮೃತಪಟ್ಟ ಬನವಾಸಿ ಸಮೀಪದ ಸಹಸ್ರಳ್ಳಿಯ ಬಾಲಕ ಮಿಥುನ್ ಪುಟ್ಟಪ್ಪ ನಾಯ್ಕ ಸಾವಿನ ಪ್ರಕರಣಕ್ಕೆ ಸಂಬಂಧಿಸಿ, ಮೃತನ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು ಹಾಗೂ ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ 24×7 ತುರ್ತು ಚಿಕಿತ್ಸಾ (Emergency Care) ವ್ಯವಸ್ಥೆ ತಕ್ಷಣ ಆರಂಭಿಸಬೇಕು ಎಂದು ಬಿಜೆಪಿ ಮುಖಂಡರು ಆಗ್ರಹಿಸಿದರು.

ಬಿಜೆಪಿ ಬನವಾಸಿ ಮಂಡಲ ಹಾಗೂ ಬಿಜೆಪಿ ರೈತ ಮೋರ್ಚಾ ಉತ್ತರ ಕನ್ನಡ ಘಟಕದ ವತಿಯಿಂದ ಸಹಾಯಕ ಆಯುಕ್ತರ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಬನವಾಸಿ ಬಿಜೆಪಿ ಮಂಡಲಾಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ, ವೈದ್ಯರ ನಿರ್ಲಕ್ಷ್ಯದಿಂದ ಬಾಲಕ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಪರಿಹಾರದ ಹಣ ಘೋಷಿಸುವುದರಿಂದ ಮಗುವಿನ ಜೀವ ಮರಳಿ ಬರುವುದಿಲ್ಲ. ಆಸ್ಪತ್ರೆಯಲ್ಲಿ ಸಮರ್ಪಕ ಚಿಕಿತ್ಸೆ ದೊರೆತಿದ್ದರೆ ಈ ದುರಂತ ತಪ್ಪಿಸಬಹುದಾಗಿತ್ತು ಎಂದು ಹೇಳಿದರು.

ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಮಾತನಾಡಿ, ಶಿರಸಿ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಈ ಘಟನೆಯ ಬಳಿಕ ಕುಟುಂಬಕ್ಕೆ ಸಾಂತ್ವನ ಹೇಳಿಲ್ಲ, ಆಸ್ಪತ್ರೆಯ ಅವ್ಯವಸ್ಥೆ ಕುರಿತು ಧ್ವನಿ ಎತ್ತಿಲ್ಲ. ಪಂಡಿತ ಸಾರ್ವಜನಿಕ ಆಸ್ಪತ್ರೆಯ ಮೇಲ್ದರ್ಜೆ ಕಟ್ಟಡ ನಿರ್ಮಾಣ ಪೂರ್ಣಗೊಂಡಿದ್ದರೂ ಅಗತ್ಯ ಯಂತ್ರೋಪಕರಣಗಳ ಖರೀದಿ ಹಾಗೂ 197 ವೈದ್ಯರು ಮತ್ತು ಸಿಬ್ಬಂದಿ ನೇಮಕ ಇನ್ನೂ ಆಗಿಲ್ಲ. ತಕ್ಷಣ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಆಸ್ಪತ್ರೆಯನ್ನು ಸಂಪೂರ್ಣ ಕಾರ್ಯನಿರ್ವಹಣೆಗೆ ತರಬೇಕು ಎಂದು ಒತ್ತಾಯಿಸಿದರು.

ಹಾವು ಕಡಿತದಂತಹ ತುರ್ತು ಸಂದರ್ಭಗಳಲ್ಲಿ ‘ಗೋಲ್ಡನ್ ಅವರ್’ ಅತ್ಯಂತ ಮಹತ್ವದ್ದಾಗಿದೆ. ಆದರೆ ಬಾಲಕನಿಗೆ ಸೂಕ್ತ ಚಿಕಿತ್ಸೆ ನೀಡುವ ಬದಲು ಕಾರವಾರಕ್ಕೆ ಕರೆದೊಯ್ಯಲು ಸೂಚಿಸಿದ್ದೇ ಹಲವು ಅನುಮಾನಗಳಿಗೆ ಕಾರಣವಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ 24 ಗಂಟೆಯ ತುರ್ತು ಚಿಕಿತ್ಸಾ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಮೃತ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.

ಸಿದ್ದಾಪುರ ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ. ಮಾತನಾಡಿ, ಆಸ್ಪತ್ರೆಯಲ್ಲಿ ಅಗತ್ಯ ಔಷಧಿ ಅಥವಾ ಆ್ಯಂಟಿ ಸ್ನೇಕ್ ವೆನಮ್ ಲಭ್ಯವಿರಲಿಲ್ಲವೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದರು. ಬಿಜೆಪಿ ನಾಯಕಿ ಸತ್ಯವತಿ ನಾಯ್ಕ ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರ ಬಗ್ಗೆ ನಿರ್ಲಕ್ಷ್ಯ ಹೆಚ್ಚುತ್ತಿದೆ ಎಂದು ಆರೋಪಿಸಿದರು.

ಮೃತ ಬಾಲಕನ ತಂದೆ ಪುಟ್ಟಪ್ಪ ನಾಯ್ಕ ಮಾತನಾಡಿ, ರಾತ್ರಿ ಮಗ ಮತ್ತು ಮಗಳಿಗೆ ವಾಂತಿ ಕಾಣಿಸಿಕೊಂಡಿದ್ದು, ಬಳಿಕ ಮನೆಯ ಬಳಿ ಹಾವು ಕಂಡುಬಂದ ಹಿನ್ನೆಲೆಯಲ್ಲಿ ಬೆಳಗಿನ ಜಾವ ಆಸ್ಪತ್ರೆಗೆ ಕರೆದೊಯ್ದೆವು. ಹಾವು ಕಚ್ಚಿರುವ ಅನುಮಾನ ತಿಳಿಸಿದರೂ ವೈದ್ಯರು ತಡವಾಗಿ ಬಂದು ನಿರ್ಲಕ್ಷ್ಯ ವಹಿಸಿದರು ಎಂದು ಅಳಲು ತೋಡಿಕೊಂಡರು.

ಪ್ರತಿಭಟನೆಯಲ್ಲಿ ಬನವಾಸಿ ಮುಖಂಡ ಯುವರಾಜ ಗೌಡ, ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಬೋರ್ಕರ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರೇಮಕುಮಾರ ನಾಯ್ಕ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share