ಚಹಾ ಕಪ್ನಲ್ಲಿ ಬೆರೆತ ‘ಹಿಂದೂಸ್ತಾನ್ ಕಿ ತಾಕತ್’!
ಒಂದು ಕಪ್ ಬಿಸಿ ಚಹಾ, ಅದರ ಪಕ್ಕದಲ್ಲಿ ಎರಡು ಪಾರ್ಲೆ-ಜಿ ಬಿಸ್ಕತ್ತು… ಈ ದೃಶ್ಯ ಭಾರತದ ಕೋಟ್ಯಂತರ ಮನೆಗಳಲ್ಲಿ ಇಂದಿಗೂ ಪ್ರತಿದಿನ ಮರುಕಳಿಸುತ್ತಲೇ ಇರುತ್ತದೆ. ಹಸಿವು ನೀಗಿಸುವ ಸಣ್ಣ ಸಂಗಾತಿ, ಬಾಲ್ಯದ ನೆನಪುಗಳ ಪೆಟ್ಟಿಗೆ, ಬಡವರಿಂದ ಶ್ರೀಮಂತರವರೆಗೆ ಎಲ್ಲರ ಕೈಗೆಟುಕುವ ಬಿಸ್ಕತ್ ಇವೆಲ್ಲವೂ ಒಂದೇ ಬ್ರ್ಯಾಂಡ್ಗೆ ಸಲ್ಲುವ ಪರಿಚಯ. ಅದು ಪಾರ್ಲೆ-ಜಿ.
ದೇಶದ ಯಾವುದೇ ಮೂಲೆಗೆ ಹೋದರೂ ಈ ಬಿಸ್ಕತ್ ಸಿಗದ ಅಂಗಡಿ ಹುಡುಕುವುದು ಕಷ್ಟ. ಆದರೆ ಇಂದು “ಹಿಂದೂಸ್ತಾನ್ ಕಿ ತಾಕತ್” ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಬ್ರ್ಯಾಂಡ್ನ ಹಿಂದೆ ನೂರು ವರ್ಷಗಳ ಪರಿಶ್ರಮ, ಸಂಕಷ್ಟ, ದೂರದೃಷ್ಟಿ ಮತ್ತು ಜನರ ವಿಶ್ವಾಸದ ಕಥೆಯಿದೆ.
1929ರಲ್ಲಿ ಮುಂಬೈನ ಉದ್ಯಮಿ ಮೋಹನ್ಲಾಲ್ ದಯಾಳ್ ಚೌಹಾಣ್ ಜರ್ಮನಿಗೆ ತೆರಳಿ ಮಿಠಾಯಿ ತಯಾರಿಕೆಯ ತರಬೇತಿ ಪಡೆದು, ಅಲ್ಲಿಂದ ಸುಮಾರು ₹60 ಸಾವಿರ ಮೌಲ್ಯದ ಯಂತ್ರೋಪಕರಣಗಳನ್ನು ಭಾರತಕ್ಕೆ ತಂದರು. ಮುಂಬೈನ ವಿಲೆ ಪಾರ್ಲೆ ಪ್ರದೇಶದಲ್ಲಿ ಕೇವಲ 12 ಕಾರ್ಮಿಕರೊಂದಿಗೆ ಆರಂಭವಾದ ಸಣ್ಣ ಕಾರ್ಖಾನೆಯೇ ಮುಂದೆ ದೇಶದ ಅತಿದೊಡ್ಡ ಬಿಸ್ಕತ್ ಬ್ರ್ಯಾಂಡ್ಗೆ ಅಡಿಪಾಯ ಹಾಕಿತು.
ಆರಂಭದಲ್ಲಿ ಕಿತ್ತಳೆ ಕ್ಯಾಂಡಿ ಸೇರಿದಂತೆ ಮಿಠಾಯಿಗಳನ್ನು ತಯಾರಿಸುತ್ತಿದ್ದ ಸಂಸ್ಥೆ, 1939ರಲ್ಲಿ ಎರಡನೇ ಮಹಾಯುದ್ಧ ಆರಂಭವಾಗುತ್ತಿದ್ದ ಸಂದರ್ಭದಲ್ಲಿ ಬಿಸ್ಕತ್ ಉತ್ಪಾದನೆಗೂ ಕಾಲಿಟ್ಟಿತು.
ಆಗ ಭಾರತದಲ್ಲಿ ಬಿಸ್ಕತ್ತುಗಳು ಹೆಚ್ಚಾಗಿ ವಿದೇಶಗಳಿಂದ ಆಮದು ಆಗುತ್ತಿದ್ದವು. ಬ್ರಿಟಾನಿಯಾ, ಯುನೈಟೆಡ್ ಬಿಸ್ಕಟ್ಸ್, ಹಂಟ್ಲಿ & ಪಾಮರ್ಸ್ ಹಾಗೂ ಗ್ಲಾಕ್ಸೊ ಮೊದಲಾದ ಬ್ರಿಟಿಷ್ ಬ್ರ್ಯಾಂಡ್ಗಳು ಮಾರುಕಟ್ಟೆಯನ್ನು ಆಳುತ್ತಿದ್ದವು. ದುಬಾರಿ ಬೆಲೆಯಿಂದಾಗಿ ಅವು ಶ್ರೀಮಂತರು ಹಾಗೂ ವ್ಯಾಪಾರಸ್ಥರಿಗಷ್ಟೇ ಸೀಮಿತವಾಗಿದ್ದವು.
ಈ ಪರಿಸ್ಥಿತಿಯನ್ನು ಬದಲಿಸಬೇಕೆಂಬ ಉದ್ದೇಶದಿಂದ ಪಾರ್ಲೆ ಕಡಿಮೆ ಬೆಲೆಯ ‘ಪಾರ್ಲೆ ಗ್ಲುಕೋ’ ಬಿಸ್ಕತ್ಗಳನ್ನು ಪರಿಚಯಿಸಿತು. ಭಾರತೀಯರ ರುಚಿಗೆ ತಕ್ಕಂತೆ ತಯಾರಿಸಿದ ಈ ಬಿಸ್ಕತ್ತುಗಳು ಅಲ್ಪಾವಧಿಯಲ್ಲೇ ಮನೆಮಾತಾದವು. ಎರಡನೇ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷ್-ಭಾರತೀಯ ಸೇನೆಯೂ ಈ ಬಿಸ್ಕತ್ಗಳನ್ನು ಬಳಸಿದ್ದರಿಂದ ಬ್ರ್ಯಾಂಡ್ಗೆ ಮತ್ತಷ್ಟು ಜನಪ್ರಿಯತೆ ಸಿಕ್ಕಿತು.
ಆದರೆ ಯಶಸ್ಸಿನ ಹಾದಿ ಸುಗಮವಾಗಿರಲಿಲ್ಲ. 1947ರಲ್ಲಿ ದೇಶ ವಿಭಜನೆಯ ನಂತರ ಗೋಧಿಯ ತೀವ್ರ ಕೊರತೆಯಿಂದ ಪಾರ್ಲೆ ಗ್ಲುಕೋ ಉತ್ಪಾದನೆಯನ್ನು ಕೆಲಕಾಲ ಸ್ಥಗಿತಗೊಳಿಸಬೇಕಾಯಿತು. ಆ ಸಂದರ್ಭದಲ್ಲಿ ಗ್ರಾಹಕರಿಗೆ ಬಾರ್ಲಿ ಬಿಸ್ಕತ್ ಸೇವಿಸುವಂತೆ ಮನವಿ ಮಾಡುವ ಮೂಲಕ ಕಂಪನಿ ತನ್ನ ಪ್ರಾಮಾಣಿಕತೆಯನ್ನು ತೋರಿಸಿತ್ತು. ಬಳಿಕ ಪರಿಸ್ಥಿತಿ ಸುಧಾರಿಸಿದಂತೆ ಮತ್ತೆ ಉತ್ಪಾದನೆ ಆರಂಭವಾಯಿತು.
1960ರ ದಶಕದಲ್ಲಿ ಗ್ಲೂಕೋಸ್ ಬಿಸ್ಕತ್ ಮಾರುಕಟ್ಟೆಗೆ ಅನೇಕ ಸ್ಪರ್ಧಿಗಳು ಬಂದರು. ಬ್ರಿಟಾನಿಯಾ ತನ್ನ ‘ಗ್ಲೂಕೋಸ್-ಡಿ’ ಬ್ರ್ಯಾಂಡ್ ಪರಿಚಯಿಸಿತು. ಅಂಗಡಿಗಳಲ್ಲಿ “ಗ್ಲೂಕೋಸ್ ಬಿಸ್ಕತ್ ಕೊಡಿ” ಎಂದು ಕೇಳಿದರೆ ಯಾವ ಬ್ರ್ಯಾಂಡ್ ಬೇಕು ಎಂಬ ಗೊಂದಲ ಶುರುವಾಯಿತು. ಇದರಿಂದ ವಿಭಿನ್ನ ಗುರುತು ಮೂಡಿಸಲು ಪಾರ್ಲೆ ಹಳದಿ ಬಣ್ಣದ ಪ್ಯಾಕೆಟ್ ಮೇಲೆ ಪುಟ್ಟ ಹುಡುಗಿಯ ಚಿತ್ರವನ್ನು ಮುದ್ರಿಸಿತು.
ನಂತರ 1982ರಲ್ಲಿ ‘ಪಾರ್ಲೆ ಗ್ಲುಕೋ’ ಹೆಸರು ಅಧಿಕೃತವಾಗಿ ‘ಪಾರ್ಲೆ-ಜಿ’ ಆಯಿತು. ಬಳಿಕ ನಕಲಿ ಉತ್ಪನ್ನಗಳ ಹಾವಳಿ ಹೆಚ್ಚಾಗುತ್ತಿದ್ದಂತೆ ಮೇಣದ ಕಾಗದದ ಬದಲು ಮುದ್ರಿತ ಪ್ಲಾಸ್ಟಿಕ್ ಪ್ಯಾಕಿಂಗ್ ಬಳಸಲಾಯಿತು.
ಪಾರ್ಲೆ-ಜಿಯ ಯಶಸ್ಸಿನಲ್ಲಿ ಜಾಹೀರಾತುಗಳ ಪಾತ್ರವೂ ಬಹಳ ದೊಡ್ಡದು. “ಸ್ವಾದ್ ಭರೆ, ಶಕ್ತಿ ಭರೆ”, “ಜಿ ಅಂದ್ರೆ ಜೀನಿಯಸ್” ಹಾಗೂ “ಹಿಂದೂಸ್ತಾನ್ ಕಿ ತಾಕತ್” ಎಂಬ ಜಾಹೀರಾತುಗಳು ಬ್ರ್ಯಾಂಡ್ ಅನ್ನು ದೇಶದ ಮನೆಮಾತಾಗಿಸಿದವು.
1998ರಲ್ಲಿ ಮಕ್ಕಳ ನೆಚ್ಚಿನ ಸೂಪರ್ ಹೀರೋ ಶಕ್ತಿಮಾನ್ ಧಾರಾವಾಹಿಯೊಂದಿಗೆ ಕೈಜೋಡಿಸಿದ್ದು ಪಾರ್ಲೆ-ಜಿಯ ಜನಪ್ರಿಯತೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿತು. ಇತ್ತೀಚಿನ “ವೋ ಪೆಹಲಿ ವಾಲಿ ಬಾತ್” ಅಭಿಯಾನವೂ ಜನರ ಹಳೆಯ ನೆನಪುಗಳನ್ನು ಮತ್ತೆ ಜೀವಂತಗೊಳಿಸಿತು.
ಪಾರ್ಲೆ-ಜಿಯ ಹಳದಿ ಪ್ಯಾಕೆಟ್ನಲ್ಲಿರುವ ಪುಟ್ಟ ಹುಡುಗಿ ಬಗ್ಗೆ ಹಲವು ವರ್ಷಗಳಿಂದ ಹಲವು ಕಥೆಗಳು ಹರಿದಾಡುತ್ತಿವೆ. ಆದರೆ ಅದು ನಿಜವಾದ ಮಗುವಿನ ಫೋಟೋ ಅಲ್ಲ. 1960ರ ದಶಕದಲ್ಲಿ ಕಲಾವಿದ ಮಗನ್ಲಾಲ್ ದೈಯಾ ರಚಿಸಿದ ಚಿತ್ರ ಎಂಬುದನ್ನು ಕಂಪನಿ ಸ್ಪಷ್ಟಪಡಿಸಿದೆ.
ಇಂದು ಪಾರ್ಲೆ ಭಾರತದಲ್ಲಷ್ಟೇ ಅಲ್ಲ, ಭಾರತೀಯರ ಬದುಕಿನ ಭಾಗವಾಗಿದೆ. ಪ್ರತಿದಿನ ಸುಮಾರು 400 ಮಿಲಿಯನ್ ಬಿಸ್ಕತ್ತುಗಳು ಉತ್ಪಾದನೆಯಾಗುತ್ತವೆ. ತಿಂಗಳಿಗೆ ಒಂದು ಬಿಲಿಯನ್ಗಿಂತಲೂ ಹೆಚ್ಚು ಪ್ಯಾಕೆಟ್ಗಳು ಮಾರಾಟವಾಗುತ್ತವೆ. ವರ್ಷಕ್ಕೆ ಮಾರಾಟವಾಗುವ ಬಿಸ್ಕತ್ತುಗಳನ್ನು ಒಂದರ ಹಿಂದೆ ಒಂದರಂತೆ ಜೋಡಿಸಿದರೆ ಭೂಮಿಯನ್ನು ಸುಮಾರು 192 ಬಾರಿ ಸುತ್ತುವಷ್ಟು ಉದ್ದವಾಗುತ್ತದೆ ಎನ್ನಲಾಗುತ್ತದೆ! 2013ರಲ್ಲಿ ₹5,000 ಕೋಟಿಗೂ ಅಧಿಕ ಚಿಲ್ಲರೆ ಮಾರಾಟ ದಾಖಲಿಸಿದ ಭಾರತದ ಮೊದಲ ಎಫ್ಎಂಸಿಜಿ ಬ್ರ್ಯಾಂಡ್ ಎಂಬ ಹೆಗ್ಗಳಿಕೆಯೂ ಪಾರ್ಲೆ-ಜಿಗೇ ಸಲ್ಲುತ್ತದೆ.
ರಾಜಸ್ಥಾನ, ಗುಜರಾತ್, ಹರಿಯಾಣ, ಕರ್ನಾಟಕ ಮತ್ತು ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿರುವ ಪಾರ್ಲೆ, ಇಂದಿಗೂ ದೇಶದ ಅತ್ಯಂತ ದೂರದ ಹಳ್ಳಿಗಳವರೆಗೂ ತನ್ನ ಉತ್ಪನ್ನ ತಲುಪಿಸುತ್ತಿದೆ. ಮಹಾನಗರದ ಕಚೇರಿಯಲ್ಲಿ ಕೆಲಸ ಮಾಡುವ ಉದ್ಯೋಗಿಯಿಂದ ಹಿಡಿದು ಗಡಿಯಂಚಿನ ಪುಟ್ಟ ಹಳ್ಳಿಯ ಮಗುವಿನವರೆಗೂ ಎಲ್ಲರ ಕೈಯಲ್ಲೂ ಕಾಣುವ ಬಿಸ್ಕತ್ ಇದೇ.
ಹೊಸಹೊಸ ಬ್ರ್ಯಾಂಡ್ಗಳು ಪ್ರತಿದಿನ ಮಾರುಕಟ್ಟೆಗೆ ಬರುತ್ತಿದ್ದರೂ, ಬೆಳಗಿನ ಚಹಾ, ಸಂಜೆ ಹಾಲು ಅಥವಾ ಪ್ರಯಾಣದ ಚೀಲದಲ್ಲಿ ಸ್ಥಾನ ಕಳೆದುಕೊಳ್ಳದ ಏಕೈಕ ಬಿಸ್ಕತ್ ಎಂದರೆ ಅದು ಪಾರ್ಲೆ-ಜಿ. ಬಹುಶಃ ಅದಕ್ಕೇ ಅದು ಕೇವಲ ಒಂದು ಬಿಸ್ಕತ್ ಅಲ್ಲ… ಭಾರತೀಯರ ಬಾಲ್ಯ, ಭಾವನೆ ಮತ್ತು ವಿಶ್ವಾಸದ ರುಚಿಯಾಗಿ “ಹಿಂದೂಸ್ತಾನ್ ಕಿ ತಾಕತ್” ಆಗಿ ಉಳಿದಿದೆ.