ನರೇಂದ್ರ ಶಿಶು ಮಂದಿರದಲ್ಲಿ ಗುರುಪೂರ್ಣಿಮೆ ಸಂಭ್ರಮ
ಯಲ್ಲಾಪುರ: ʻಗುರು ಎಂದರೆ ಕೇವಲ ಜ್ಞಾನ ನೀಡುವವರಲ್ಲ; ಜೀವನಕ್ಕೆ ದಾರಿದೀಪವಾಗುವವರುʼ ಎಂಬ ಸಂದೇಶದೊಂದಿಗೆ ಪಟ್ಟಣದ ನರೇಂದ್ರ ಶಿಶು ಮಂದಿರದಲ್ಲಿ ಗುರುಪೂರ್ಣಿಮೆಯನ್ನು ಭಕ್ತಿ, ಗೌರವ ಹಾಗೂ ಭಾರತೀಯ ಸಂಸ್ಕಾರದ ಸೊಬಗಿನೊಂದಿಗೆ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಮೊದಲು ಭಗವಾ ಧ್ವಜಾರೋಹಣ ನೆರವೇರಿಸಿ, ಧ್ವಜವಂದನೆ ಹಾಗೂ ಧ್ವಜಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಬಳಿಕ ಶಿಶು ಮಂದಿರದ ವಿದ್ಯಾರ್ಥಿನಿ ದುವಿಕ್ಷಾ ವೈಯಕ್ತಿಕ ಗೀತೆ ಹಾಡಿ ಕಾರ್ಯಕ್ರಮಕ್ಕೆ ಭಾವಪೂರ್ಣ ಮೆರುಗು ನೀಡಿದರು.
ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಪಾದಪೂಜೆ, ಮಾತೃಪಾದಪೂಜೆ ನೆರವೇರಿಸಿ, ಶ್ಲೋಕ ಪಠಣದ ಮೂಲಕ ಗುರುವಿನ ಮಹತ್ವವನ್ನು ಸಾರಿದರು. ಈ ಧಾರ್ಮಿಕ ಹಾಗೂ ಸಂಸ್ಕಾರಪೂರ್ಣ ಕಾರ್ಯಕ್ರಮವನ್ನು ಗಣಪತಿ ಭಟ್ಟ ಕೋಲಿಬೇಣ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಗಣಪತಿ ಭಟ್ಟ ಕೋಲಿಬೇಣ, ಗುರುಪೂರ್ಣಿಮೆಯ ಮಹತ್ವ, ಆಚರಣೆಯ ಉದ್ದೇಶ ಹಾಗೂ ಭಾರತೀಯ ಸಂಸ್ಕೃತಿಯಲ್ಲಿ ಗುರುವಿನ ಸ್ಥಾನ ಕುರಿತು ವಿವರವಾಗಿ ಉಪನ್ಯಾಸ ನೀಡಿದರು. ಇದೇ ವೇಳೆ ರಾಷ್ಟ್ರ ಸೇವಿಕಾ ಸಮಿತಿಯ ಪರಿಚಯ ಮಾಡಿಕೊಡಲಾಯಿತು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಮುಖ್ಯಸ್ಥ ಸಂತೋಷ ಗುಡಿಗಾರ, ಮಹೇಶ್ ಗೌಳಿ, ಮಹಾದೇವಚಂದ್ರ ಪಂಡರಾಪುರ, ಸುಧೀರ ಕೋಡ್ಕಣಿ, ಕಿರಣ ಶೆಟ್ಟಿ, ನಂದನ ಬಾಳಗಿ, ಈಶ್ವರದಾಸ ಕೊಪ್ಪೆಸರ, ಅನಿತಾ ದೇಸಾಯಿ, ರಾಮಕೃಷ್ಣ ಕವಡಿಕೆರೆ, ಕೇಶವ ಗಾಂವ್ಕರ್ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಮಾತೆಯರು, ವಿದ್ಯಾರ್ಥಿಗಳು ಹಾಗೂ ಪಾಲಕರು ಭಾಗವಹಿಸಿದ್ದರು.