ದನಗಳ್ಳರೆಂದು ಶಂಕಿಸಿ ಗ್ರಾಮಸ್ಥರಿಂದ ಥಳಿತ; ಠಾಣೆಯಲ್ಲಿ ಬಯಲಾಯಿತು ಅಸಲಿ ಕಥೆ
ಯಲ್ಲಾಪುರ: ಗಾಂಜಾ ಮತ್ತು ಮದ್ಯದ ಅಮಲಿನಲ್ಲಿ ತಾವೇನು ಮಾಡುತ್ತಿದ್ದೇವೆ ಎಂಬ ಅರಿವೇ ಇಲ್ಲದೆ ಮೇಯುತ್ತಿದ್ದ ಹಸುಗಳನ್ನು ಓಡಿಸುತ್ತಿದ್ದ ಇಬ್ಬರು ಅಪರಿಚಿತರು ಗ್ರಾಮಸ್ಥರ ಅನುಮಾನಕ್ಕೆ ಗುರಿಯಾಗಿ ಧರ್ಮದೇಟು ತಿಂದ ಘಟನೆ ತಾಲೂಕಿನ ಇಡಗುಂದಿ ಸಮೀಪದ ಕಣ್ಣಿಮನೆಯಲ್ಲಿ ನಡೆದಿದೆ.
ದತ್ತಾತ್ರೇಯ ಭಟ್ಟ ಕಣ್ಣಿಮನೆ ಅವರಿಗೆ ಸೇರಿದ ಬೆಟ್ಟದಲ್ಲಿ ಸಮೀಪದ ವಿಶ್ವನಾಥ ಗೇರಗದ್ದೆ ಅವರ ಹಸುಗಳು ಮೇಯುತ್ತಿದ್ದ ವೇಳೆ, ಅಪರಿಚಿತರಿಬ್ಬರು ಹಸುಗಳನ್ನು ಬೇರೆಡೆಗೆ ಓಡಿಸಿಕೊಂಡು ಹೋಗಲು ಯತ್ನಿಸುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಅನುಮಾನಗೊಂಡ ಅವರು, “ನೀವು ಯಾರು? ಹಸುಗಳನ್ನು ಯಾಕೆ ಓಡಿಸುತ್ತಿದ್ದೀರಿ?” ಎಂದು ಪ್ರಶ್ನಿಸಿದರೂ, ಇಬ್ಬರೂ ಅರ್ಥವಾಗದ ಭಾಷೆಯಲ್ಲಿ ಮಾತನಾಡುತ್ತ ತಮ್ಮ ವರ್ತನೆ ಮುಂದುವರಿಸಿದ್ದಾರೆ.
ಮೊದಲಿಗೆ ಇವರು ಹಸುಗಳ ಮಾಲೀಕರ ಪರಿಚಯದವರು ಅಥವಾ ಅವರಲ್ಲಿ ಕೆಲಸಕ್ಕೆ ಬಂದವರು ಇರಬಹುದೆಂದು ಭಾವಿಸಿ ವಿಶ್ವನಾಥ ಗೇರಗದ್ದೆ ಅವರನ್ನು ಸ್ಥಳಕ್ಕೆ ಕರೆಸಲಾಯಿತು. ಆದರೆ, “ಇವರು ನನಗೆ ಪರಿಚಯವಿಲ್ಲ. ನಮ್ಮ ಹಸುಗಳನ್ನು ಯಾಕೆ ಓಡಿಸುತ್ತಿದ್ದಾರೆ ಎಂಬುದು ಗೊತ್ತಿಲ್ಲ” ಎಂದು ಅವರು ಹೇಳುತ್ತಿದ್ದಂತೆಯೇ, ದನಗಳ್ಳರೇ ಇರಬಹುದು ಎಂಬ ಅನುಮಾನ ಮತ್ತಷ್ಟು ಬಲಗೊಂಡಿತು.
ಇಬ್ಬರ ಬಳಿಯೂ ಮೊಬೈಲ್ ಇರಲಿಲ್ಲ. ಅವರು ಹೇಳಿದ ಒಂದು ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ, ಅತ್ತಲಿಂದಲೂ ಅರ್ಥವಾಗದ ಭಾಷೆಯಲ್ಲೇ ಉತ್ತರ ಬಂದಿದ್ದರಿಂದ ಅನುಮಾನ ಇನ್ನಷ್ಟು ಗಾಢವಾಯಿತು. ಇದರಿಂದ ಕೋಪಗೊಂಡ ಕೆಲ ಗ್ರಾಮಸ್ಥರು ಧರ್ಮದೇಟು ನೀಡಿ ವಿಚಾರಿಸಲು ಮುಂದಾದರು.
ಬಳಿಕ ಮಾಹಿತಿ ಪಡೆದ ಯಲ್ಲಾಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ, ಇಬ್ಬರನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದರು. ಅವರ ಬಳಿ ಇದ್ದ ಆಧಾರ್ ಕಾರ್ಡ್ ಆಧರಿಸಿ, ಇಬ್ಬರೂ ಒಡಿಶಾ (ಒರಿಸ್ಸಾ) ಮೂಲದವರಾಗಿರುವುದು ಗೊತ್ತಾಯಿತು. ಆದರೆ, ಭಾಷೆಯ ಸಮಸ್ಯೆಯಿಂದ ಸ್ಥಳದಲ್ಲೇ ಸಮರ್ಪಕ ವಿಚಾರಣೆ ಸಾಧ್ಯವಾಗದ ಕಾರಣ ಅವರನ್ನು ಠಾಣೆಗೆ ಕರೆದೊಯ್ಯಲಾಯಿತು.
ಪೊಲೀಸ್ ವಿಚಾರಣೆಯಲ್ಲಿ ಅಸಲಿ ಸಂಗತಿ ಬೆಳಕಿಗೆ ಬಂದಿದೆ. ಇಬ್ಬರೂ ಒಡಿಶಾ ಮೂಲದ ಕಾರ್ಮಿಕರಾಗಿದ್ದು, ಬೆಳ್ಳಂಬಾರ ಪ್ರದೇಶದಲ್ಲಿ ಮೀನುಗಾರಿಕೆ ಕೆಲಸಕ್ಕೆ ತೆರಳುತ್ತಿದ್ದರು. ದಾರಿಮಧ್ಯೆ ಯಾವುದೋ ಕಾರಣಕ್ಕೆ ವಾಹನದಿಂದ ಇಳಿಸಲ್ಪಟ್ಟ ಬಳಿಕ ಅಮಲಿನ ಸ್ಥಿತಿಯಲ್ಲೇ ಅಡ್ಡಾದಿಡ್ಡಿ ಅಲೆದಾಡುತ್ತ ಹಸುಗಳನ್ನು ಓಡಿಸಲು ಮುಂದಾಗಿದ್ದರು ಎನ್ನಲಾಗಿದೆ.
ಪ್ರಸ್ತುತ ಇಬ್ಬರೂ ಪೊಲೀಸ್ ಠಾಣೆಯಲ್ಲಿದ್ದು, ಗಾಂಜಾ ಮತ್ತು ಮದ್ಯದ ಅಮಲು ಸಂಪೂರ್ಣ ಇಳಿದ ಬಳಿಕ ಮತ್ತೊಮ್ಮೆ ಸವಿಸ್ತಾರ ವಿಚಾರಣೆ ನಡೆಸಲಾಗುವುದು ಎಂದು ತಿಳಿದುಬಂದಿದೆ.
ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಜಾನುವಾರು ಕಳವು ಹಾಗೂ ಅಕ್ರಮ ಸಾಗಣೆ ಪ್ರಕರಣಗಳು ಆಗಾಗ ವರದಿಯಾಗುತ್ತಿರುವ ಹಿನ್ನೆಲೆ, ಗ್ರಾಮಸ್ಥರು ಸಹಜ ಅನುಮಾನದಿಂದ ಪ್ರತಿಕ್ರಿಯಿಸಿದ್ದಾರೆ. ಆದರೆ, ಈ ಪ್ರಕರಣದ ಎಲ್ಲ ಸತ್ಯಾಂಶಗಳು ಪೊಲೀಸ್ ತನಿಖೆಯ ನಂತರವೇ ಸ್ಪಷ್ಟವಾಗಲಿವೆ.