Monday, September 7, 2026
Join WhatsApp Group
HomeCrimeಮರಕ್ಕೆ ಡಿಕ್ಕಿ ಹೊಡೆದ ಗೂಡ್ಸ್ ವಾಹನದ ತುಂಬ ಪ್ರಯಾಣಿಕರು!

ಮರಕ್ಕೆ ಡಿಕ್ಕಿ ಹೊಡೆದ ಗೂಡ್ಸ್ ವಾಹನದ ತುಂಬ ಪ್ರಯಾಣಿಕರು!

 17 ಕೂಲಿ ಕಾರ್ಮಿಕರಿಗೆ ಗಾಯ – ಚಾಲಕನ ವಿರುದ್ಧ ಪ್ರಕರಣ

ಹಳಿಯಾಳ: ಸರಕು ಸಾಗಿಸಲು ಮೀಸಲಾಗಿರುವ ಗೂಡ್ಸ್ ವಾಹನದಲ್ಲೇ ಕೂಲಿ ಕಾರ್ಮಿಕರನ್ನು ತುಂಬಿಕೊಂಡು ಹೋಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ವಾಹನ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು 17 ಮಂದಿ ಗಾಯಗೊಂಡ ಘಟನೆ ಹಳಿಯಾಳ ತಾಲೂಕಿನ ಶಿವಪುರ ಸಮೀಪ ನಡೆದಿದೆ. ಈ ಅಪಘಾತದೊಂದಿಗೆ ಗೂಡ್ಸ್ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವ ಅಪಾಯಕಾರಿ ಹಾಗೂ ಕಾನೂನುಬಾಹಿರ ಪದ್ಧತಿ ಮತ್ತೊಮ್ಮೆ ಬೆಳಕಿಗೆ ಬಂದಿದೆ.

ಜುಲೈ 25ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಹಳಿಯಾಳ–ಶಿವಪುರ ರಸ್ತೆಯಲ್ಲಿ ಕೆಎ-25 ಎಸಿ-2184 ಸಂಖ್ಯೆಯ ಅಶೋಕ ಲೇಲ್ಯಾಂಡ್ ಗೂಡ್ಸ್ ವಾಹನವನ್ನು ಚಾಲಕ ಪ್ರವೀಣ ಬಸವರಾಜ ರುದ್ರಾಕ್ಷಿ (ಕಲಘಟಗಿ) ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ್ದಾನೆ. ವೇಗ ನಿಯಂತ್ರಣ ತಪ್ಪಿದ ವಾಹನ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಾಹನದಲ್ಲಿದ್ದ 17 ಮಂದಿ ಕೂಲಿ ಕಾರ್ಮಿಕರು ಗಾಯಗೊಂಡಿದ್ದಾರೆ.

ಅಪಘಾತದಲ್ಲಿ 12 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, 5 ಮಂದಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಿಗೆ ಹಳಿಯಾಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗೆ ಧಾರವಾಡ ಆಸ್ಪತ್ರೆಗೆ ರವಾನಿಸಲಾಗಿದೆ.

ಸರಕು ಸಾಗಾಟಕ್ಕೆ ಮಾತ್ರ ಅನುಮತಿ ಇರುವ ಗೂಡ್ಸ್ ವಾಹನದಲ್ಲಿ ಪ್ರಯಾಣಿಕರನ್ನು ಸಾಗಿಸುವುದು ಕಾನೂನುಬಾಹಿರವಾಗಿದೆ. ಆದರೂ ಅನೇಕ ಕಡೆಗಳಲ್ಲಿ ಕೂಲಿ ಕಾರ್ಮಿಕರನ್ನು ಇಂತಹ ವಾಹನಗಳಲ್ಲಿ ಸಾಗಿಸುವ ಪದ್ಧತಿ ಮುಂದುವರಿದಿದ್ದು, ಇದೇ ನಿರ್ಲಕ್ಷ್ಯ ಈ ಬಾರಿ 17 ಮಂದಿಯ ಜೀವವನ್ನು ಅಪಾಯಕ್ಕೆ ತಳ್ಳಿದೆ.

ಗಾಯಗೊಂಡ ನಾಗಪ್ಪ ಭೀಮಪ್ಪ ಮೇತ್ರಿ ನೀಡಿದ ದೂರಿನ ಆಧಾರದ ಮೇಲೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಅಪಘಾತ ಗೂಡ್ಸ್ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವ ಅಪಾಯಕಾರಿ ಪ್ರವೃತ್ತಿಯ ವಿರುದ್ಧ ಮತ್ತೊಮ್ಮೆ ಎಚ್ಚರಿಕೆಯ ಗಂಟೆ ಮೊಳಗಿಸಿದ್ದು, ಇಂತಹ ವಾಹನಗಳಲ್ಲಿ ಪ್ರಯಾಣಿಸುವುದೂ, ಪ್ರಯಾಣಿಕರನ್ನು ಸಾಗಿಸುವುದೂ ಜೀವಕ್ಕೆ ಅಪಾಯ ತರುವುದರ ಜೊತೆಗೆ ಕಾನೂನು ಕ್ರಮಕ್ಕೂ ಕಾರಣವಾಗಬಹುದು ಎಂಬುದನ್ನು ನೆನಪಿಸಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share