ಮಂಗಳೂರು: ಭಾರತದ ಸಾಂಸ್ಕೃತಿಕ ವೈಭವವನ್ನು ಮತ್ತೊಮ್ಮೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಅನಾವರಣಗೊಳಿಸಲು ಮಂಗಳೂರಿನ ಹವ್ಯಾಸಿ ಗಾಳಿಪಟ ತಂಡ ‘ಟೀಮ್ ಮಂಗಳೂರು’ ಶ್ರೀಲಂಕಾಕ್ಕೆ ಪಯಣ ಬೆಳೆಸಿದೆ.
ಶ್ರೀಲಂಕಾದ ಹೆರಿಟೇಜ್ ಕೈಟ್ಸ್ ಸಂಸ್ಥೆಯು ಪ್ರವಾಸೋದ್ಯಮ ಹಾಗೂ ಸಾಂಸ್ಕೃತಿಕ ಇಲಾಖೆಗಳ ಸಹಯೋಗದಲ್ಲಿ ಆಗಸ್ಟ್ 1 ಮತ್ತು 2ರಂದು ಮಾತಾರಾ ಬೀಚ್ನಲ್ಲಿ ಆಯೋಜಿಸಿದ್ದ ಪ್ರತಿಷ್ಠಿತ ‘ಸಿರಾಸಾ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ’ದಲ್ಲಿ ಭಾಗವಹಿಸಲು ತಂಡಕ್ಕೆ ಅಧಿಕೃತ ಆಹ್ವಾನ ಲಭಿಸಿತ್ತು.
ಸರ್ವೇಶ್ ರಾವ್ ನೇತೃತ್ವದ ತಂಡದಲ್ಲಿ ವಿ.ಕೆ. ಸನಿಲ್, ದಿನೇಶ್ ಹೊಳ್ಳ ಹಾಗೂ ಪ್ರಾಣೇಶ್ ಕುದ್ರೋಳಿ ಪಾಲ್ಗೊಂಡು, ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ವಿಶೇಷ ವಿನ್ಯಾಸದ ಗಾಳಿಪಟಗಳನ್ನು ಶ್ರೀಲಂಕಾದ ಆಕಾಶದಲ್ಲಿ ಹಾರಿಸಿದರು.
ವಿವಿಧ ದೇಶಗಳ ನಡುವೆ ಸಾಂಸ್ಕೃತಿಕ ವಿನಿಮಯ, ಸ್ನೇಹ ಮತ್ತು ಪರಸ್ಪರ ಬಾಂಧವ್ಯವನ್ನು ಬೆಳೆಸುವ ಉದ್ದೇಶದಿಂದ ಈ ಉತ್ಸವವನ್ನು ಆಯೋಜಿಸಲಾಗಿತ್ತು. ಸ್ಥಳೀಯ ಕಲಾವಿದರು ತಮ್ಮ ಸಾಂಪ್ರದಾಯಿಕ ಶೈಲಿಯ ಬೃಹತ್ ಗಾಳಿಪಟಗಳನ್ನು ನಿರ್ಮಿಸಿ, ವಿಭಿನ್ನ ತಂತ್ರಗಳ ಮೂಲಕ ಹಾರಿಸಿದ್ದು ಈ ಉತ್ಸವದ ಪ್ರಮುಖ ಆಕರ್ಷಣೆಯಾಗಿತ್ತು.
‘ಟೀಮ್ ಮಂಗಳೂರು’ ಈಗಾಗಲೇ ವಿಶ್ವದ 12 ದೇಶಗಳಲ್ಲಿ ನಡೆದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಗಳಲ್ಲಿ ಭಾಗವಹಿಸಿ, ಭಾರತೀಯ ಸಂಸ್ಕೃತಿ, ಕಲೆ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಗಾಳಿಪಟಗಳನ್ನು ಪ್ರದರ್ಶಿಸುವ ಮೂಲಕ ದೇಶದ ಹೆಸರನ್ನು ಜಾಗತಿಕ ವೇದಿಕೆಯಲ್ಲಿ ಎತ್ತಿಹಿಡಿದಿದೆ.
ಶ್ರೀಲಂಕಾದ ಈ ಉತ್ಸವದಲ್ಲೂ ಭಾರತೀಯ ಸಂಸ್ಕೃತಿಯ ವೈಭವವನ್ನು ಆಕಾಶದಲ್ಲಿ ಮೂಡಿಸುವ ಮೂಲಕ ಟೀಮ್ ಮಂಗಳೂರು ಮತ್ತೊಮ್ಮೆ ದೇಶದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ದಾಖಲಿಸಿದೆ.