Sunday, September 6, 2026
Join WhatsApp Group
HomeLocal Storyಮೂತ್ರಾಲಯ ಉಚಿತ, ಶೌಚಾಲಯ ಬಳಕೆಗೆ ಟೋಪಿ!

ಮೂತ್ರಾಲಯ ಉಚಿತ, ಶೌಚಾಲಯ ಬಳಕೆಗೆ ಟೋಪಿ!

ಕೆಎಸ್ಆರ್ಟಿಸಿ ಬಸ್ನಿಲ್ದಾಣಗಳ ಶೌಚಾಲಯಗಳಲ್ಲಿ ನಿಯಮ ಮೀರಿ ಅಧಿಕ ಹಣ ವಸೂಲಿ ಆರೋಪ

ಕಾರವಾರ: ಬಸ್ ಪ್ರಯಾಣದ ನಡುವೆ ಶೌಚಾಲಯ ಬಳಸಬೇಕಾದರೆ ಎಷ್ಟು ಹಣ ಕೊಡಬೇಕು? ಬಹುತೇಕ ಪ್ರಯಾಣಿಕರ ಉತ್ತರ 5 ರೂ. ಏಕೆಂದರೆ, ರಾಜ್ಯದ ಬಹುತೇಕ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳ ಶೌಚಾಲಯದ ಹೊರಭಾಗದಲ್ಲೇ ʻಮೂತ್ರಾಲಯ – ಉಚಿತ, ಶೌಚಾಲಯ –5 ರೂʼ ಎಂದು ಸ್ಪಷ್ಟವಾಗಿ ಫಲಕ ಅಳವಡಿಸಲಾಗಿದೆ.

ಆದರೆ, ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಯಲ್ಲಾಪುರ, ಗೋಕರ್ಣ, ಅಂಕೋಲಾ ಸೇರಿದಂತೆ ಹಲವು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಫಲಕದಲ್ಲಿ 5 ರೂ ಎಂದು ಬರೆದಿದ್ದರೂ, ಬಳಕೆದಾರರಿಂದ 10 ರೂ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

‘ಕೆನರಾ ನೆಕ್ಸ್ಟ್’ಗೆ ಮಾಹಿತಿ ನೀಡಿರುವ ಗೋಕರ್ಣದ ಮಹಿಳಾ ಪ್ರಯಾಣಿಕರೊಬ್ಬರು, ʻಶೌಚಾಲಯಕ್ಕೆ ಹೋದರೆ 10 ರೂ ಕೇಳುತ್ತಾರೆ. ಫಲಕದಲ್ಲಿ 5 ರೂ ಎಂದು ಬರೆದಿದೆಯಲ್ಲ ಎಂದು ಪ್ರಶ್ನಿಸಿದರೆ ಮೊದಲು ವಾದ ಮಾಡುತ್ತಾರೆ. ಒತ್ತಾಯ ಮಾಡಿದರೆ ಮಾತ್ರ 5 ರೂ ಪಡೆದುಕೊಳ್ಳುತ್ತಾರೆ. ಪ್ರಶ್ನಿಸದವರು 10 ರೂ ಕೊಟ್ಟು ಹೋಗುತ್ತಾರೆʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಅನುಭವ ಒಂದೇ ಬಸ್ ನಿಲ್ದಾಣಕ್ಕೆ ಸೀಮಿತವಾಗಿಲ್ಲ. ಜಿಲ್ಲೆಯ ಹಲವು ಬಸ್ ನಿಲ್ದಾಣಗಳಲ್ಲಿ ಇದೇ ರೀತಿಯ ವಸೂಲಿ ನಡೆಯುತ್ತಿದೆ ಎಂದು ಹಲವು ಪ್ರಯಾಣಿಕರು ಆರೋಪಿಸಿದ್ದಾರೆ.

ಪ್ರಯಾಣದ ಸಂದರ್ಭದಲ್ಲಿ ಬಸ್‌ ನಿಲ್ದಾಣಗಳಲ್ಲಿನ ಶೌಚಾಲಯ ಬಳಕೆ ಅನಿವಾರ್ಯ. ದೂರದ ಪ್ರಯಾಣ ಮಾಡುವ ಮಹಿಳೆಯರಿಗಂತೂ ಅತ್ಯಗತ್ಯ. ಮರಳಿ ಬಸ್‌ ಏರುವ ಗಡಿಬಿಡಿಯಲ್ಲಿ ಅದೆಷ್ಟೋ ಜನ ಅವರು ಕೇಳಿದಷ್ಟು ಹಣ ಕೊಟ್ಟು ಹೊರಡುತ್ತಾರೆ. ಆದರೆ ಈ ರೀತಿ ಹಗಲು ದರೋಡೆಗೆ ಲಗಾಮು ಹಾಕುವವರು ಯಾರೂ ಇಲ್ಲವೇ ಎಂದೂ ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳ ಶೌಚಾಲಯಗಳ ನಿರ್ವಹಣೆಯನ್ನು ಹೆಚ್ಚಿನ ಕಡೆ ಖಾಸಗಿ ಗುತ್ತಿಗೆದಾರರಿಗೆ ನೀಡಲಾಗಿದ್ದು, ಟೆಂಡರ್ ಷರತ್ತುಗಳ ಪ್ರಕಾರ ಸಾರ್ವಜನಿಕರಿಗೆ ಪ್ರದರ್ಶಿಸಿರುವ ಅಧಿಕೃತ ದರಪಟ್ಟಿಯನ್ನೇ ಪಾಲಿಸಬೇಕು. ನಿಗದಿತ ದರಕ್ಕಿಂತ ಹೆಚ್ಚಿನ ಮೊತ್ತ ವಸೂಲಿ ಮಾಡುವಂತಿಲ್ಲ. ಆದರೂ, ಫಲಕದಲ್ಲಿ ಒಂದು ದರ ಪ್ರದರ್ಶಿಸಿ, ವಾಸ್ತವದಲ್ಲಿ ಇನ್ನೊಂದು ದರ ಪಡೆಯುತ್ತಿರುವುದು ಯಾವ ನಿಯಮದಡಿ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗುತ್ತಿಲ್ಲ.

ಪ್ರಯಾಣಿಕರ ಮತ್ತೊಂದು ಆರೋಪವೂ ಗಮನಾರ್ಹವಾಗಿದೆ. ಅನೇಕ ಕಡೆಗಳಲ್ಲಿ ಹೊರರಾಜ್ಯದ ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಲಾಗಿದ್ದು, ಕೆಲವರಿಗೆ ಕನ್ನಡ ಭಾಷೆಯೂ ತಿಳಿದಿಲ್ಲ. ದರದ ಬಗ್ಗೆ ಪ್ರಶ್ನಿಸಿದರೆ ʻಸ್ವಚ್ಛತೆ ಮಾಡಬೇಕು, ನೀರಿನ ವ್ಯವಸ್ಥೆ ಮಾಡಬೇಕು, ಆದ್ದರಿಂದ 10 ರೂ ಕೊಟ್ಟು ಹೋಗಿʼ ಎಂಬ ಉತ್ತರ ನೀಡಲಾಗುತ್ತಿದೆ ಎನ್ನಲಾಗಿದೆ. ಆದರೆ ಹೆಚ್ಚುವರಿ ವೆಚ್ಚವೇ ಅಧಿಕೃತವಾಗಿದ್ದರೆ, ಸಾರ್ವಜನಿಕ ಫಲಕದಲ್ಲಿಯೂ ಹೊಸ ಅಧಿಕೃತ ದರವನ್ನು ಪ್ರಕಟಿಸಬೇಕಲ್ಲವೇ ಎಂಬ ಪ್ರಶ್ನೆ ಪ್ರಯಾಣಿಕರದ್ದು.

ದಿನಕ್ಕೆ ನೂರಾರು ಪ್ರಯಾಣಿಕರು ಶೌಚಾಲಯ ಬಳಸುವ ಬಸ್ ನಿಲ್ದಾಣಗಳಲ್ಲಿ ಪ್ರತಿಯೊಬ್ಬರಿಂದ 5 ರೂ ಹೆಚ್ಚುವರಿಯಾಗಿ ಪಡೆದರೆ, ದಿನದ ಕೊನೆಯಲ್ಲಿ ಎಷ್ಟು ಹಣ ಅಕ್ರಮವಾಗಿ ಸಂಗ್ರಹವಾಗಬಹುದು? ಆ ಹಣದ ಲೆಕ್ಕ ಯಾರ ಬಳಿ ಇರುತ್ತದೆ? ಸರ್ಕಾರದ ಖಾತೆಗೆ ಸೇರುತ್ತದೆಯೇ ಅಥವಾ ಗುತ್ತಿಗೆದಾರರ ಬಳಿ ಉಳಿಯುತ್ತದೆಯೇ ಎಂಬ ಪ್ರಶ್ನೆಯೂ ಸಾರ್ವಜನಿಕರಲ್ಲಿ ಮೂಡಿದೆ.

ಇದರ ಬಗ್ಗೆ ಬಸ್‌ ನಿಲ್ದಾಣದ ಸಾರಿಗೆ ನಿಯಂತ್ರಕರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಮೊದಲಿನಂತೆಯೇ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಎಲ್ಲ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳ ಶೌಚಾಲಯಗಳಲ್ಲಿ ವಸೂಲಾಗುತ್ತಿರುವ ದರವನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ, ಫಲಕದಲ್ಲಿ ಪ್ರದರ್ಶಿಸಿರುವ ದರಕ್ಕಿಂತ ಹೆಚ್ಚು ಹಣ ಪಡೆಯಲಾಗುತ್ತಿದ್ದರೆ ಅದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಪ್ರಯಾಣಿಕರಿಗೆ ಸಮಸ್ಯೆಯಾಗಿರುವುದು ಹೆಚ್ಚುವರಿ ಹಣದ ವಿಚಾರವಲ್ಲ. ಸರ್ಕಾರ ನಿಗದಿಪಡಿಸಿರುವ ನಿಯಮವನ್ನು ಗಾಳಿಗೆ ತೂರಿ ಹೆಚ್ಚು ಹಣ ಸಂಗ್ರಹಿಸುತ್ತ ಸಾರ್ವಜನಿಕರ ಜೀವ ಹಿಂಡುವ ಈ ಪದ್ಧತಿಗೆ ಮುಕ್ತಿ ಯಾವಾಗ…‌

ನಿಮಗೂ ಇಂತಹ ಅನುಭವವಾಗಿದ್ದರೆ ನಮಗೆ ಮಾಹಿತಿ ನೀಡಿ

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share