ಯಲ್ಲಾಪುರ: ಶಿಕ್ಷಣ ವ್ಯಾಪಾರೀಕರಣಗೊಳ್ಳುತ್ತಿರುವ ಸಂದರ್ಭದಲ್ಲಿ ಬಡ ಮಕ್ಕಳ ಶಿಕ್ಷಣಕ್ಕಾಗಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿ, ಸಾವಿರಾರು ಮಕ್ಕಳ ಭವಿಷ್ಯಕ್ಕೆ ಬೆಳಕಾದ ಮಾಜಿ ಶಾಸಕ ದಿ. ಉಮೇಶ ಭಟ್ಟ ಅವರ ಸಾಮಾಜಿಕ ಕಾಳಜಿ ಹಾಗೂ ಸೇವೆ ಇಂದಿಗೂ ಮಾದರಿಯಾಗಿದೆ ಎಂದು ಉಮೇಶ ಭಟ್ಟ ಅಭಿಮಾನಿ ಬಳಗದ ಮುಖ್ಯಸ್ಥ ವೇಣುಗೋಪಾಲ ಮದ್ಗುಣಿ ಹೇಳಿದರು.
ಪಟ್ಟಣದ ನಾಯ್ಕನಕೆರೆಯ ರಾಘವೇಂದ್ರ ಹಿರಿಯ ನಾಗರಿಕರ ವಸತಿಗೃಹದಲ್ಲಿ ಗುರುವಾರ ದಿ. ಉಮೇಶ ಭಟ್ಟ ಅವರ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ಸಂಸ್ಮರಣೆ ಹಾಗೂ ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಕ್ಷಣದ ಮೂಲಕ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳ ಬದುಕಿಗೆ ದಾರಿ ತೋರಿಸಿದ ಉಮೇಶ ಭಟ್ಟ ಅವರ ಸೇವೆಯನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ದಿ. ಉಮೇಶ ಭಟ್ಟ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರ ಸೇವೆಯನ್ನು ಸ್ಮರಿಸಲಾಯಿತು. ಇದೇ ಸಂದರ್ಭದಲ್ಲಿ ರಾಘವೇಂದ್ರ ಹಿರಿಯ ನಾಗರಿಕರ ವಸತಿಗೃಹಕ್ಕೆ ಟೇಬಲ್ ಕೊಡುಗೆ ನೀಡಲಾಯಿತು.
ಟಿಎಂಎಸ್ನ ಮಾಜಿ ಮುಖ್ಯ ಕಾರ್ಯನಿರ್ವಾಹಕ ಸಿ.ಎಸ್. ಹೆಗಡೆ ಮಾತನಾಡಿ, ಉಮೇಶ ಭಟ್ಟ ಅವರ ಶಿಕ್ಷಣ ಹಾಗೂ ಸಮಾಜ ಸೇವೆ ಅನುಕರಣೀಯವಾಗಿತ್ತು. ಮಾರ್ಕೆಟಿಂಗ್ ಸೊಸೈಟಿಗೆ ಸ್ಥಳ ಮಂಜೂರಿ ಮಾಡುವುದರ ಜೊತೆಗೆ ಸೊಸೈಟಿಯ ಅಭಿವೃದ್ಧಿಗೂ ಅವರು ನೀಡಿದ ಕೊಡುಗೆ ಅಪಾರವಾಗಿದೆ ಎಂದು ಸ್ಮರಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಪ್ರಭಾವತಿ ಗೋವಿ ಮಾತನಾಡಿ, ಸಮಾಜದಲ್ಲಿನ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳ ಶಿಕ್ಷಣಕ್ಕೆ ಉಮೇಶ ಭಟ್ಟ ಅವರು ನೀಡಿದ ಕೊಡುಗೆ ಅವಿಸ್ಮರಣೀಯವಾಗಿದೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಾಯ ಬಿದ್ರೆಮನೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಮೇಶ ಭಟ್ಟ ಅವರಿಂದ ಸೇವೆ ಪಡೆದವರೇ ಅವರನ್ನು ಮರೆತಿರುವ ಸಂದರ್ಭದಲ್ಲಿ, ಅವರ ಅಭಿಮಾನಿ ಬಳಗ ಸಂಸ್ಮರಣೆ ಕಾರ್ಯಕ್ರಮದ ಮೂಲಕ ಹೊಸ ಪೀಳಿಗೆಗೆ ಉಮೇಶ ಭಟ್ಟ ಅವರ ಸೇವೆ ಹಾಗೂ ವ್ಯಕ್ತಿತ್ವವನ್ನು ಪರಿಚಯಿಸುತ್ತಿರುವುದು ಅನುಕರಣೀಯ ಕಾರ್ಯವಾಗಿದೆ ಎಂದರು.
ಅಂಕೋಲಾ ಅರ್ಬನ್ ಬ್ಯಾಂಕ್ ವ್ಯವಸ್ಥಾಪಕ ಶ್ರೀಪತಿ ಭಟ್, ರಾಘವೇಂದ್ರ ವೃದ್ಧಾಶ್ರಮದ ಮುಖ್ಯಸ್ಥ ಚಂದ್ರಪ್ಪ ಅಣ್ಣೇರ, ಪ್ರಮುಖರಾದ ಎನ್.ಡಿ. ಹೆಬ್ಬಾರ, ನಾಗೇಂದ್ರ ಯಲ್ಲಾಪುರ, ವಿನಾಯಕ ಹೆಬ್ಬಾರ್ ಹಾಗೂ ಜಯರಾಜ ಗೋವಿ ಉಪಸ್ಥಿತರಿದ್ದರು.
ಕಾನಿಪ ಸಂಘದ ಉಪಾಧ್ಯಕ್ಷ ಶ್ರೀಧರ ಅಣಲಗಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.