Monday, September 7, 2026
Join WhatsApp Group
HomeAgricultureಗುಟ್ಕಾ ನಿಷೇಧ: ಅಡಿಕೆ ಬೆಳೆಗಾರರು, ಸಕ್ರಮ ವ್ಯಾಪಾರಿಗಳ ಹಿತ ಕಾಪಾಡಲು ಆಗ್ರಹ

ಗುಟ್ಕಾ ನಿಷೇಧ: ಅಡಿಕೆ ಬೆಳೆಗಾರರು, ಸಕ್ರಮ ವ್ಯಾಪಾರಿಗಳ ಹಿತ ಕಾಪಾಡಲು ಆಗ್ರಹ

ಶಿರಸಿ: ಸಾರ್ವಜನಿಕರ ಆರೋಗ್ಯ ರಕ್ಷಣೆಯ ನೆಪದಲ್ಲಿ ಕರ್ನಾಟಕ ಸರ್ಕಾರ ಗುಟ್ಕಾ ಹಾಗೂ ಪಾನ್‌ ಮಸಾಲಾ ಉತ್ಪಾದನೆ, ಸಂಗ್ರಹಣೆ, ವಿತರಣೆ ಮತ್ತು ಮಾರಾಟದ ಮೇಲೆ ನಿಷೇಧ ಹೇರಿರುವ ಕ್ರಮವು ಲಕ್ಷಾಂತರ ಅಡಿಕೆ ಬೆಳೆಗಾರರು ಹಾಗೂ ಕಾನೂನುಬದ್ಧ ವ್ಯಾಪಾರಸ್ಥರ ಬದುಕಿನ ಮೇಲೆ ಪ್ರತಿಕೂಲ ಪರಿಣಾಮ ಬೀರುವ ನಿರ್ಧಾರವಾಗಿದೆ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಡಿಕೆಯು ಕರ್ನಾಟಕ ಸೇರಿದಂತೆ ದೇಶದ ಲಕ್ಷಾಂತರ ಕೃಷಿಕ ಕುಟುಂಬಗಳ ಜೀವನಾಧಾರವಾಗಿರುವ ಪ್ರಮುಖ ತೋಟಗಾರಿಕಾ ಬೆಳೆಯಾಗಿದೆ. ತಂಬಾಕು ಮತ್ತು ನಿಕೋಟಿನ್‌ನಂತಹ ಹಾನಿಕಾರಕ ಅಂಶಗಳನ್ನು ಒಳಗೊಂಡಿರುವ ನಿಷೇಧಿತ ಉತ್ಪನ್ನಗಳೊಂದಿಗೆ ಕೃಷಿ ಉತ್ಪನ್ನವಾದ ಅಡಿಕೆಯನ್ನು ಒಂದೇ ರೀತಿಯಲ್ಲಿ ಪರಿಗಣಿಸುವುದರಿಂದ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ. ಸರ್ಕಾರ ಈ ವಿಚಾರದಲ್ಲಿ ಸ್ಪಷ್ಟತೆಯನ್ನು ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈಗಾಗಲೇ ಹವಾಮಾನ ವೈಪರೀತ್ಯ ಹಾಗೂ ವಿವಿಧ ರೋಗಬಾಧೆಗಳಿಂದ ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಈ ಕ್ರಮವು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅಡಿಕೆ ಉತ್ಪನ್ನಗಳ ವ್ಯಾಪಾರವನ್ನೇ ನಂಬಿಕೊಂಡಿರುವ ಸಣ್ಣಪುಟ್ಟ ವ್ಯಾಪಾರಸ್ಥರ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಕಾಗೇರಿ ಹೇಳಿದ್ದಾರೆ.

ಈಗಾಗಲೇ ಗುಟ್ಕಾ ನಿಷೇಧ ಜಾರಿಯಲ್ಲಿರುವ ಸಂದರ್ಭದಲ್ಲಿ ಪಾನ್‌ ಮಸಾಲಾವನ್ನೂ ನಿಷೇಧಿಸಿರುವುದು ಅಡಿಕೆ ಬೆಳೆಗಾರರ ಮೇಲೆ ಮತ್ತೊಂದು ಹೊರೆ ಹೊರಿಸಿದಂತಾಗಿದೆ. ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಅಗತ್ಯವಾದ ನಿಯಮಗಳನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಅಡಿಕೆ ಬೆಳೆಯುವ ರೈತರು ಹಾಗೂ ಸಕ್ರಮವಾಗಿ ವ್ಯಾಪಾರ ನಡೆಸುವವರ ಹಿತಾಸಕ್ತಿಗೆ ಯಾವುದೇ ಧಕ್ಕೆಯಾಗದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕಿತ್ತು ಎಂದು ಅವರು ತಿಳಿಸಿದ್ದಾರೆ.

ತಂಬಾಕು ಉತ್ಪನ್ನಗಳು ಮತ್ತು ಸಕ್ರಮವಾಗಿ ಉತ್ಪಾದನೆ ಹಾಗೂ ಮಾರಾಟವಾಗುವ ಅಡಿಕೆಯ ನಡುವಿನ ವ್ಯತ್ಯಾಸವನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಅಡಿಕೆ ಬೆಳೆಗಾರರಿಗೆ, ಅಡಿಕೆ ಸಾಗಾಣಿಕೆಗೆ ಹಾಗೂ ಕಾನೂನುಬದ್ಧ ವ್ಯಾಪಾರಸ್ಥರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸ್ಪಷ್ಟವಾದ ನಿಯಮಾವಳಿಗಳನ್ನು ತಕ್ಷಣ ರೂಪಿಸಬೇಕು ಎಂದು ಸಂಸದರು ಒತ್ತಾಯಿಸಿದ್ದಾರೆ.

ರಾಜ್ಯದ ಲಕ್ಷಾಂತರ ರೈತ ಕುಟುಂಬಗಳ ಜೀವನಧಾರವಾಗಿರುವ ಅಡಿಕೆ ಬೆಳೆಯ ಹಾಗೂ ಸಕ್ರಮ ವ್ಯಾಪಾರಿಗಳ ಹಿತರಕ್ಷಣೆಗೆ ರಾಜ್ಯ ಸರ್ಕಾರ ತನ್ನ ಬದ್ಧತೆಯನ್ನು ಪ್ರದರ್ಶಿಸಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share