Monday, September 7, 2026
Join WhatsApp Group
HomeLocal Storyಡಿಜಿಟಲ್ ಇಂಡಿಯಾದೊಳ್ ಶಿಲಾಯುಗದ ಗ್ರಾಮ!

ಡಿಜಿಟಲ್ ಇಂಡಿಯಾದೊಳ್ ಶಿಲಾಯುಗದ ಗ್ರಾಮ!

ಬೈಲಂದೂರು ಗೌಳಿವಾಡಕ್ಕೆ ರಸ್ತೆ ಯಾವಾಗ?

ಯಲ್ಲಾಪುರ: ಒಂದು ಕಡೆ ಭಾರತ ಚಂದ್ರನ ಅಂಗಳಕ್ಕೆ ಕಾಲಿಟ್ಟು ವಿಶ್ವದ ಗಮನ ಸೆಳೆಯುತ್ತಿದೆ. ಡಿಜಿಟಲ್ ಇಂಡಿಯಾ, ಸ್ಮಾರ್ಟ್‌ ವಿಲೇಜ್‌, ಆಧುನಿಕ ಮೂಲಸೌಕರ್ಯ ಎಂಬ ಮಾತುಗಳು ಪ್ರತಿದಿನ ಕೇಳಿಬರುತ್ತಿವೆ. ಆದರೆ ಯಲ್ಲಾಪುರ ತಾಲೂಕಿನ ಕಿರವತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈಲಂದೂರು ಗೌಳಿವಾಡಕ್ಕೆ ಬಂದರೆ ಈ ಎಲ್ಲ ಮಾತುಗಳೂ ಅರ್ಥ ಕಳೆದುಕೊಳ್ಳುತ್ತವೆ.

ಸ್ವಾತಂತ್ರ್ಯ ಬಂದು ಎಂಟು ದಶಕಗಳು ಕಳೆದರೂ 500ಕ್ಕೂ ಅಧಿಕ ಜನರು, 80ಕ್ಕೂ ಹೆಚ್ಚು ಕುಟುಂಬಗಳು ವಾಸಿಸುವ ಈ ಗ್ರಾಮಕ್ಕೆ ಇಂದಿಗೂ ಸಮರ್ಪಕ ರಸ್ತೆ ಇಲ್ಲ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ದಾರಿ ಮಳೆಗಾಲದಲ್ಲಿ ರಸ್ತೆಯಾಗಿ ಉಳಿಯುವುದಿಲ್ಲ. ಕೆಸರು, ಹೊಂಡ ಮತ್ತು ಮಳೆನೀರು ತುಂಬಿದ ಅಪಾಯಕಾರಿ ದಾರಿಯಾಗಿ ಮಾರ್ಪಡುತ್ತದೆ. ಜೊತೆಯಲ್ಲಿರುವ ಚಿತ್ರವೇ ಇಲ್ಲಿನ ಪರಿಸ್ಥಿತಿಗೆ ಸಾಕ್ಷಿ.

ಪ್ರತಿದಿನದ ಪರೀಕ್ಷೆ!

ಬೈಲಂದೂರು ಗೌಳಿವಾಡದ ಮಕ್ಕಳು ಪ್ರತಿದಿನ ಇದೇ ದಾರಿಯಲ್ಲಿ ಶಾಲೆ–ಕಾಲೇಜಿಗೆ ತೆರಳಬೇಕು. ಸುಮಾರು 70–80 ವಿದ್ಯಾರ್ಥಿಗಳು ಮಳೆಗಾಲದಲ್ಲಿ ಕಾಲು ಜಾರುವ, ಕೆಸರಿನಲ್ಲಿ ಸಿಲುಕುವ ಅಪಾಯದ ನಡುವೆಯೇ ಸಂಚರಿಸುತ್ತಿದ್ದಾರೆ. ಮಳೆ ಜೋರಾದರೆ ಶಾಲೆಗೆ ಹೋಗುವುದೇ ಕಷ್ಟವಾಗುತ್ತದೆ ಎಂಬುದು ಗ್ರಾಮಸ್ಥರ ಅಳಲು.

ರಸ್ತೆಯ ದುಸ್ಥಿತಿಯ ಪರಿಣಾಮ ಶಿಕ್ಷಣಕ್ಕಷ್ಟೇ ಸೀಮಿತವಾಗಿಲ್ಲ. ಗ್ರಾಮದಲ್ಲಿ ಯಾರಿಗಾದರೂ ರಾತ್ರಿ ವೇಳೆ ತುರ್ತು ಆರೋಗ್ಯ ಸಮಸ್ಯೆ ಎದುರಾದರೆ ಆಂಬ್ಯುಲೆನ್ಸ್ ಗ್ರಾಮಕ್ಕೆ ತಲುಪುವುದೇ ದೊಡ್ಡ ಸವಾಲು. ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಚಾಪೆಯಲ್ಲಿ ಹೊತ್ತುಕೊಂಡು ಹೋಗಬೇಕಾದ ಪರಿಸ್ಥಿತಿಯೂ ಇದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ರೈತರ ಸಂಕಷ್ಟವೂ ಅಷ್ಟೇ. ಬೆವರು ಸುರಿಸಿ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸುವುದೇ ಕಷ್ಟ. ನಾಲ್ಕು ಚಕ್ರದ ವಾಹನಗಳು ಗ್ರಾಮಕ್ಕೆ ಬಂದರೆ, ಮತ್ತೆ ಅದೇ ಕೆಸರಿನ ದಾರಿಯಲ್ಲಿ ಹೊರಬರಲು ಪರದಾಡಬೇಕಾದ ಸ್ಥಿತಿ.

ಮರೆತುಹೋದ ಬೈಲಂದೂರು

ಗ್ರಾಮಸ್ಥರ ಅಸಮಾಧಾನ ಇಲ್ಲಿಗೆ ಮುಗಿಯುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಜನಪ್ರತಿನಿಧಿಗಳು ಗ್ರಾಮಕ್ಕೆ ಬಂದು ʻರಸ್ತೆ ಮಾಡಿಸುತ್ತೇವೆ, ಅಭಿವೃದ್ಧಿ ಮಾಡುತ್ತೇವೆʼ ಎಂಬ ಭರವಸೆ ನೀಡುತ್ತಾರೆ. ಆದರೆ ಚುನಾವಣೆ ಮುಗಿದ ಬಳಿಕ ತಮ್ಮ ಗ್ರಾಮವನ್ನು ಮರೆತುಬಿಡುತ್ತಾರೆ ಎಂಬುದು ಗ್ರಾಮಸ್ಥರ ಆರೋಪ.

ʻನಾವು ಕೂಡ ಇದೇ ಕ್ಷೇತ್ರದ ಮತದಾರರು. ನಮ್ಮ ಮಕ್ಕಳೂ ಇದೇ ರಾಜ್ಯದ ಪ್ರಜೆಗಳು. ಹಾಗಿದ್ದರೆ ನಮಗೆ ಮಾತ್ರ ಈ ಮೂಲಭೂತ ಸೌಲಭ್ಯ ಏಕೆ ಇಲ್ಲ?ʼ ಎಂಬ ಪ್ರಶ್ನೆಯನ್ನು ಮುಂದಿಡುತ್ತಾರೆ ಗ್ರಾಮಸ್ಥರು.

ಸ್ವಾತಂತ್ರ್ಯದ 80ನೇ ವರ್ಷವನ್ನು ಆಚರಿಸುತ್ತಿರುವ ಹೊತ್ತಿನಲ್ಲಿ, ಒಂದು ಗ್ರಾಮಕ್ಕೆ ಕನಿಷ್ಠ ಸಂಚಾರಯೋಗ್ಯ ರಸ್ತೆ ಕಲ್ಪಿಸಲು ಸಾಧ್ಯವಾಗದಿರುವುದು ಅಭಿವೃದ್ಧಿಯ ಅಂಕಿಅಂಶಗಳ ನಡುವಿನ ದೊಡ್ಡ ವೈರುಧ್ಯವಲ್ಲವೇ?

ಚಂದ್ರನತ್ತ ರಾಕೆಟ್‌ ಕಳುಹಿಸುವ ದೇಶದಲ್ಲಿ, ಒಂದು ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ರಸ್ತೆ ಹುಡುಕಬೇಕಾದ ಪರಿಸ್ಥಿತಿ ಇರಬೇಕೇ? ಡಿಜಿಟಲ್ ಸೇವೆಗಳ ಬಗ್ಗೆ ಮಾತನಾಡುವ ಕಾಲದಲ್ಲಿ, ಶಾಲಾ ಮಕ್ಕಳಿಗೆ ಸುರಕ್ಷಿತವಾಗಿ ಶಾಲೆಗೆ ಹೋಗಲು ಸಾಧ್ಯವಾಗದಿರುವುದು ಯಾರ ವೈಫಲ್ಯ?

ಭರವಸೆ ಬೇಡ, ರಸ್ತೆ ಬೇಕು

 ತಕ್ಷಣ ಗ್ರಾಮಕ್ಕೆ ಸಮರ್ಪಕ ಡಾಂಬರ್ ಅಥವಾ ಸಿಸಿ ರಸ್ತೆ ನಿರ್ಮಿಸಬೇಕು. ಇಲ್ಲವಾದರೆ ತಾಲೂಕು ಆಡಳಿತದ ಗಮನ ಸೆಳೆಯಲು ಯಲ್ಲಾಪುರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ʻಜನಪ್ರತಿನಿಧಿಗಳನ್ನು ಆಯ್ಕೆ ಮಾಡಿರುವುದು ಫೋಟೋ ತೆಗೆಸಿಕೊಳ್ಳಲು ಅಲ್ಲ, ಜನರ ಸಮಸ್ಯೆ ಪರಿಹರಿಸಲು. ಟಿವಿ ಮುಂದೆ ಅಭಿವೃದ್ಧಿಯ ದೊಡ್ಡ ದೊಡ್ಡ ಮಾತುಗಳನ್ನಾಡುವವರು ಈ ಗ್ರಾಮದ ಕಷ್ಟವನ್ನೂ ಒಮ್ಮೆ ನೋಡಲಿ. ಇನ್ನೆಷ್ಟು ವರ್ಷ ಕಾಯಬೇಕು?ʼ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share