ಮೂಗು ಮುಚ್ಚಿಯೇ ಸಾಗಬೇಕಾದ ಅನಿವಾರ್ಯತೆ | ಕಸ, ಕೆಸರು, ಸಗಣಿ ನಡುವೆ ಸಾರ್ವಜನಿಕರ ಓಡಾಟ
ಯಲ್ಲಾಪುರ: ಪಟ್ಟಣದ ಬಸ್ ನಿಲ್ದಾಣ ನೋಡಲು ಸುಸಜ್ಜಿತವಾಗಿದೆ. ಕಟ್ಟಡವಿದೆ, ಪ್ರಯಾಣಿಕರ ಓಡಾಟವಿದೆ, ಪ್ರತಿದಿನ ಸಾವಿರಾರು ಮಂದಿ ಇಲ್ಲಿಂದಲೇ ತಮ್ಮ ಪ್ರಯಾಣ ಆರಂಭಿಸುತ್ತಾರೆ. ಆದರೆ ನಿಲ್ದಾಣದ ಆವರಣದೊಳಗೆ ಹೆಜ್ಜೆ ಇಟ್ಟರೆ, ‘ಮಾದರಿ’ ಎಂಬ ಹೆಸರಿಗೆ ತದ್ವಿರುದ್ಧವಾದ ಚಿತ್ರಣ ಎದುರಾಗುತ್ತದೆ. ಕಸ, ಕೆಸರು, ಪ್ಲಾಸ್ಟಿಕ್, ಸಗಣಿ ಹಾಗೂ ದುರ್ವಾಸನೆ… ಇದು ಯಲ್ಲಾಪುರ ಬಸ್ ನಿಲ್ದಾಣದ ವಾಸ್ತವ ಚಿತ್ರಣ!
ಶಾಸಕ ಶಿವರಾಮ ಹೆಬ್ಬಾರರ ಅಭಿವೃದ್ಧಿ ಪರ್ವದಲ್ಲಿ ಯಲ್ಲಾಪುರದಲ್ಲಿ ನೂತನ, ಸುಸಜ್ಜಿತ ಬಸ್ ನಿಲ್ದಾಣವೇನೋ ನಿರ್ಮಾಣವಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ,ಇಲ್ಲಿ ಪ್ರಯಾಣಿಕರನ್ನು ಸ್ವಾಗತಿಸಬೇಕಾದ ಆವರಣದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಕಾಣಿಸುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯ ಸಮರ್ಪಕವಾಗಿ ವಿಲೇವಾರಿಯಾಗದೆ ಬಿದ್ದಿದ್ದರೆ, ಕೆಲವೆಡೆ ಸಗಣಿ ಹರಡಿಕೊಂಡಿದೆ. ಇದರ ನಡುವೆ ಬೀಡಾಡಿ ದನಗಳು, ಹಂದಿಗಳು ಹಾಗೂ ನಾಯಿಗಳು ಓಡಾಡುತ್ತಿದ್ದು, ಸ್ವಚ್ಛತೆಯ ನಿರ್ವಹಣೆ ಎಷ್ಟರ ಮಟ್ಟಿಗೆ ನಡೆಯುತ್ತಿದೆ ಎಂಬುದನ್ನು ಪ್ರಶ್ನಿಸುವಂತಿದೆ.
ಬೆಳಗಿನ ಹೊತ್ತಿನಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಇದೇ ಆವರಣದ ಮೂಲಕ ಸಾಗುತ್ತಾರೆ. ಸ್ವಚ್ಛ ವಾತಾವರಣದಲ್ಲಿ ದಿನ ಆರಂಭಿಸಬೇಕಾದವರಿಗೆ ದುರ್ವಾಸನೆ ಮತ್ತು ಕೊಳಚೆಯೇ ಎದುರಾಗುತ್ತಿರುವುದು ಸಹಜವಾಗಿಯೇ ಬೇಸರ ಮೂಡಿಸಿದೆ.
ಇದು ಒಂದೆರಡು ದಿನಗಳ ಸಮಸ್ಯೆಯಲ್ಲ ಎನ್ನುವುದು ಮತ್ತೊಂದು ಅಚ್ಚರಿ. ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸಭೆಗಳಲ್ಲಿ ಬಸ್ ನಿಲ್ದಾಣದ ಅವ್ಯವಸ್ಥೆ ಕುರಿತು ಹಲವು ಬಾರಿ ಚರ್ಚೆಯಾಗಿದೆ. ಸಮಿತಿಯ ನಿಯೋಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನೂ ನಡೆಸಿದೆ. ಹೀಗೆ ಮೂರು-ನಾಲ್ಕು ಬಾರಿ ಪರಿಶೀಲನೆ ನಡೆದಿದ್ದರೂ, ಪರಿಶೀಲನೆಯ ನಂತರ ಪರಿಸ್ಥಿತಿ ಬದಲಾಗದಿರುವುದು ಮಾತ್ರ ಪ್ರಶ್ನೆಯಾಗಿ ಉಳಿದಿದೆ.
ಬಸ್ ನಿಲ್ದಾಣದ ಎದುರಲ್ಲಿ ಕೊಳಗೇರಿ ಪ್ರದೇಶಕ್ಕಿಂತಲೂ ಕೆಟ್ಟ ಸ್ಥಿತಿಯಿದೆ. ಪಟ್ಟಣ ಪಂಚಾಯಿತಿ ಒಂದಿಷ್ಟು ಬ್ಲೀಚಿಂಗ್ ಪೌಡರ್ ಚೆಲ್ಲಿ ಸಮಾಧಾನಪಟ್ಟುಕೊಂಡಿದೆ. ಆದರೆ, ಈ ಗಬ್ಬೆದ್ದು ನಾರುವ ಕೊಳಚೆಯನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡುವತ್ತ ಮಾತ್ರ ಯಾರೂ ಗಮನ ಹರಿಸಿಲ್ಲ.
ಪ್ರತಿದಿನ ಸಾವಿರಾರು ಪ್ರಯಾಣಿಕರು ಬಳಸುವ ಸಾರ್ವಜನಿಕ ಸ್ಥಳವೊಂದರ ನಿರ್ವಹಣೆಯಲ್ಲಿ ಇಂತಹ ನಿರ್ಲಕ್ಷ್ಯ ಮುಂದುವರಿಯುತ್ತಿರುವುದು ಸಹಜವಾಗಿ ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ. ಬಸ್ ನಿಲ್ದಾಣದ ಆವರಣವನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು, ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಮಾಡುವುದು ಹಾಗೂ ಬೀಡಾಡಿ ಪ್ರಾಣಿಗಳ ಪ್ರವೇಶ ತಡೆಯುವುದು ತುರ್ತು ಅಗತ್ಯವಾಗಿದೆ.
‘ಮಾದರಿ ಬಸ್ ನಿಲ್ದಾಣ’ ಎಂಬ ಫಲಕ ಮಾತ್ರವಿದ್ದರೆ ಸಾಲದು, ಪ್ರಯಾಣಿಕರಿಗೆ ಅದರ ಅನುಭವವೂ ಮಾದರಿಯಾಗಬೇಕಲ್ಲ?!