Monday, September 7, 2026
Join WhatsApp Group
HomeInformationSpecialಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ನೋಡ್ತೀರಾ?!‌

ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ನೋಡ್ತೀರಾ?!‌

ಮಾರ್ನಿಂಗ್‌ ಬೈಟ್ಸ್

ಬೆಳಿಗ್ಗೆ ಕಣ್ಣು ಬಿಟ್ಟ ತಕ್ಷಣ ನೀವು ಮೊದಲು ಏನು ನೋಡ್ತೀರಾ? ಪಕ್ಕದಲ್ಲಿರುವವರ ಮುಖವನ್ನಾ? ಕಿಟಕಿಯಿಂದ ಹೊರಗೆ ಕಾಣಿಸುವ ಬೆಳಕಾ? ಇಲ್ಲ… ಮೊಬೈಲಾ?

ಹೆಚ್ಚಿನವರ ಕಥೆ ಒಂದೇ. ಅಲಾರಂ ಇಟ್ಟಿರ್ತೀವಿ. ಅದು ಹೊಡೆದ ತಕ್ಷಣ ಕೈ ಮೊದಲು ಹೋಗೋದು ಮೊಬೈಲ್ ಕಡೆಗೆ. ಅಲಾರಂ ನಿಲ್ಲಿಸ್ತೀವಿ. ಅಷ್ಟಕ್ಕೇ ಮೊಬೈಲ್ ಕೆಳಗಿಡೋಣ ಅಂದ್ರೆ ಆಗಲ್ಲ! ಒಂದು ಮೆಸೇಜ್ ಬಂದಿದೆ, ಅದನ್ನ ನೋಡೋಣ. ವಾಟ್ಸಪ್‌ನಲ್ಲಿ ಏನಿದೆ ಅಂತ ನೋಡೋಣ. ಫೇಸ್‌ಬುಕ್, ಇನ್‌ಸ್ಟಾಗ್ರಾಂನಲ್ಲಿ ಏನಿದೆ ಅಂತ ನೋಡೋಣ. ಯಾವುದೋ ಸುದ್ದಿ ಕಣ್ಣಿಗೆ ಬೀಳುತ್ತೆ. ಇನ್ನೊಂದು ವಿಡಿಯೋ ಬರುತ್ತೆ. ಹೀಗೆ ನೋಡ್ತಾ ನೋಡ್ತಾ ಬೆಳಿಗ್ಗೆಯ ಹತ್ತು ನಿಮಿಷ ಎಲ್ಲಿ ಹೋಯ್ತು ಅನ್ನೋದೇ ಗೊತ್ತಾಗಲ್ಲ ಅಲ್ವಾ?!

ಅದರಲ್ಲೂ ಬೆಳಿಗ್ಗೆ ಎದ್ದ ತಕ್ಷಣ ಯಾರೋ ಜಗಳ ಮಾಡಿಕೊಂಡ ಸುದ್ದಿ, ಯಾವುದೋ ಅಪಘಾತ, ರಾಜಕೀಯದ ಗಲಾಟೆ, ಯಾರೋ ಹಾಕಿದ ಕಿರಿಕಿರಿ ಪೋಸ್ಟ್… ಇಂಥದ್ದೇನಾದರೂ ಕಣ್ಣಿಗೆ ಬಿದ್ದರೆ ನಮ್ಮ ದಿನ ಶುರುವಾಗೋ ಮೊದಲೇ ಮನಸ್ಸು ಕೆಡಿಸಿಕೊಳ್ಳುತ್ತೇವೆ.

ಇನ್ನೊಂದು ಕಡೆ ಯಾರಾದರೂ ಪ್ರವಾಸಕ್ಕೆ ಹೋಗಿರೋ ಫೋಟೋ ಹಾಕಿರ್ತಾರೆ. ಯಾರಿಗೋ ಹೊಸ ಕಾರು ಬಂದಿದೆ. ಯಾರಿಗೋ ಪ್ರಮೋಷನ್ ಸಿಕ್ಕಿದೆ. ಯಾರದ್ದೋ ಮನೆ ಚೆನ್ನಾಗಿ ಕಾಣುತ್ತೆ. ಅದನ್ನೆಲ್ಲ ನೋಡಿದ ಮೇಲೆ ನಮಗೇ ಗೊತ್ತಿಲ್ಲದೆ, ‘ಅವರ ಜೀವನ ಎಷ್ಟು ಚೆನ್ನಾಗಿದೆ… ನನ್ನ ಜೀವನ ಯಾಕೆ ಹೀಗಿಲ್ಲ?’ ಅಂತ ಯೋಚನೆ ಶುರುವಾಗುತ್ತೆ.

ಆದ್ರೆ ಒಂದು ವಿಷಯ ಯೋಚಿಸಿ ನೋಡಿ. ಬೆಳಿಗ್ಗೆ ಎದ್ದ ತಕ್ಷಣ ನಾವು ನಮ್ಮ ಜೀವನವನ್ನು ನೋಡುವುದಕ್ಕಿಂತ ಬೇರೆಯವರ ಜೀವನ ನೋಡೋಕೆ ಶುರು ಮಾಡಿರ್ತೀವಿ. ಅದೇ ಸ್ವಲ್ಪ ವಿಚಿತ್ರ ಅಲ್ಲವಾ?

ಇವತ್ತಿನ ದಿನದಲ್ಲಿ ಮೊಬೈಲ್ ಬೇಕೇ ಬೇಕು. ಆದರೆ ಅದನ್ನ ಕೈಗೆತ್ತಿಕೊಳ್ಳುವ ಮೊದಲು ಒಂದು ಎರಡು ನಿಮಿಷ ನಮ್ಮ ಜೊತೆ ನಾವೇ ಇರೋಣ ಅನ್ನೋದು ಅಷ್ಟೇ. ಕಣ್ಣು ಬಿಟ್ಟ ತಕ್ಷಣ ಎದ್ದು ಓಡಬೇಕಿಲ್ಲ. ಸ್ವಲ್ಪ ಹೊತ್ತು ಹಾಗೇ ಇರಿ. ಚೆನ್ನಾಗಿ ಉಸಿರು ತೆಗೆದುಕೊಳ್ಳಿ. ‘ಇವತ್ತು ಇನ್ನೊಂದು ದಿನ ಸಿಕ್ಕಿದೆ’ ಅಂತ ಒಮ್ಮೆ ಯೋಚಿಸಿ.

ನಮ್ಮ ಹಿರಿಯರನ್ನೇ ನೋಡಿ. ಬೆಳಿಗ್ಗೆ ಎದ್ದ ತಕ್ಷಣ ದೇವರ ಹೆಸರು ಹೇಳೋರು. ಮನೆಯ ಮುಂದೆ ನೀರು ಹಾಕೋರು. ಅಂಗಳ ಗುಡಿಸೋರು. ಸೂರ್ಯನಿಗೆ ನಮಸ್ಕಾರ ಮಾಡೋರು. ಹಕ್ಕಿಗಳ ಸದ್ದು ಕೇಳ್ತಾ ಒಂದಿಷ್ಟು ಹೊತ್ತು ಕೂತಿರೋರು.

ಅದರಲ್ಲಿ ಏನೋ ಒಂದು ನೆಮ್ಮದಿ ಇತ್ತು. ಈಗ ನಮ್ಮ ಜೀವನದ ವೇಗವೇ ಬೇರೆ. ಕಣ್ಣು ಬಿಡೋದಕ್ಕೂ ಮುಂಚೆ ಕೆಲಸದ ಟೆನ್ಶನ್. ಮಕ್ಕಳ ಶಾಲೆ. ಆಫೀಸ್. ವ್ಯಾಪಾರ. ಫೋನ್ ಕಾಲ್. ಮೆಸೇಜ್. ಟ್ರಾಫಿಕ್. ಹೀಗೆ ದಿನ ಶುರುವಾಗೋದಕ್ಕೂ ಮುಂಚೆ ನಮ್ಮ ತಲೆ ಓಡೋಕೆ ಶುರುವಾಗಿರುತ್ತೆ.

ಅದಕ್ಕೇ ಬೆಳಿಗ್ಗೆಯ ಆ ಮೊದಲ ಹತ್ತು ನಿಮಿಷ ನಮ್ಮದಾಗಿರಲಿ. ಕಿಟಕಿಯಿಂದ ಹೊರಗೆ ಒಮ್ಮೆ ನೋಡಿ. ಬೆಳಕು ಹೇಗೆ ಬರುತ್ತಿದೆ ಅಂತ ನೋಡಿ. ಹಕ್ಕಿಯ ಸದ್ದು ಕೇಳಿ. ತಂಪಾದ ಗಾಳಿ ಮುಖಕ್ಕೆ ತಾಗಲಿ. ಅಷ್ಟೇ. ಇದಕ್ಕೆ ದೊಡ್ಡ ದುಡ್ಡೇನೂ ಬೇಕಾಗಿಲ್ಲ. ದೊಡ್ಡ ಸಾಧನೆಯೂ ಬೇಕಾಗಿಲ್ಲ. ಆದ್ರೆ ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಗುತ್ತೆ.

ಇನ್ನೊಂದು ಮುಖ್ಯವಾದ ವಿಷಯ. ಬೆಳಿಗ್ಗೆ ಎದ್ದ ತಕ್ಷಣ ಸೋಷಿಯಲ್‌ ಮೀಡಿಯಾದಲ್ಲಿ ಬೇರೆಯವರ ಜೀವನ ನೋಡಿ ನಮ್ಮ ಜೀವನದ ಜೊತೆ ಹೋಲಿಕೆ ಮಾಡಿಕೊಳ್ಳೋದು ಬೇಡ. ಯಾಕಂದ್ರೆ ಅಲ್ಲಿ ಕಾಣಿಸೋದು ಅವರ ಜೀವನದ ಒಳ್ಳೆಯ ಭಾಗ ಮಾತ್ರ.

ಯಾರೂ ಬೆಳಿಗ್ಗೆ ಎದ್ದು, ‘ನನ್ನ ಜೀವನದಲ್ಲಿ ಇವತ್ತು ಇಷ್ಟು ಸಮಸ್ಯೆ ಇದೆ’ ಅಂತ ಫೋಟೋ ಹಾಕಲ್ಲ. ನಗುತ್ತಾ ತೆಗೆದ ಫೋಟೋ ಹಾಕ್ತಾರೆ. ಪ್ರವಾಸಕ್ಕೆ ಹೋದಾಗ ಫೋಟೋ ಹಾಕ್ತಾರೆ. ಒಳ್ಳೆಯ ಸುದ್ದಿ ಹಂಚಿಕೊಳ್ಳುತ್ತಾರೆ. ಹಾಗಾಗಿ ಅವರ ಫೋಟೋ ನೋಡಿ ನಮ್ಮ ಜೀವನ ಕಡಿಮೆ ಅಂತ ಅಂದುಕೊಳ್ಳೋ ಅಗತ್ಯವೇ ಇಲ್ಲ.

ದಿನ ಚೆನ್ನಾಗಿರೋಕೆ ಯಾವಾಗಲೂ ದೊಡ್ಡ ಘಟನೆ ನಡೆಯಬೇಕಿಲ್ಲ. ಕೆಲವೊಮ್ಮೆ ಇಂಥ ಸಣ್ಣ ಸಣ್ಣ ವಿಷಯಗಳೇ ಸಾಕಾಗುತ್ತವೆ. ಹೌದು, ಬೆಳಿಗ್ಗೆ ಎಷ್ಟು ಚೆನ್ನಾಗಿ ಶುರು ಮಾಡಿದರೂ ದಿನವಿಡೀ ಎಲ್ಲವೂ ನಾವು ಅಂದುಕೊಂಡಂತೆ ನಡೆಯಲ್ಲ. ಯಾರಾದರೂ ನಮ್ಮನ್ನು ನೋಯಿಸಬಹುದು. ಕೆಲಸದಲ್ಲಿ ತೊಂದರೆ ಬರಬಹುದು. ನಾವು ಅಂದುಕೊಂಡಿದ್ದು ಆಗದೇ ಹೋಗಬಹುದು. ಆದ್ರೆ ಅದಕ್ಕಾಗಿ ಇಡೀ ದಿನ ಹಾಳು ಮಾಡಿಕೊಳ್ಳಬೇಕಾ?

ಒಂದು ಘಟನೆ ಕೆಟ್ಟದಾಗಿರಬಹುದು. ಅದರಿಂದ ಇಡೀ ದಿನ ಕೆಟ್ಟದಾಗಬೇಕಿಲ್ಲ. ಒಂದು ದಿನ ಕೆಟ್ಟದಾಗಿರಬಹುದು. ಅದರಿಂದ ಇಡೀ ಜೀವನ ಕೆಟ್ಟದಾಗುವುದಿಲ್ಲ. ನಾಳೆ ಬೆಳಿಗ್ಗೆ ಎದ್ದಾಗ ಒಂದು ಕೆಲಸ ಮಾಡಿ. ಮೊಬೈಲ್ ಕೈಗೆತ್ತಿಕೊಳ್ಳುವ ಮೊದಲು ನಿಮ್ಮನ್ನೇ ಒಮ್ಮೆ ಕೇಳಿಕೊಳ್ಳಿ…

‘ಇವತ್ತು ನನ್ನ ದಿನವನ್ನು ನಾನು ಹೇಗೆ ಚೆನ್ನಾಗಿ ಕಳೆಯಬಹುದು?’ ಬಹುಶಃ ಉತ್ತರ ಸಿಗದೇ ಇರಬಹುದು, ಪರವಾಗಿಲ್ಲ. ಆದ್ರೆ ಆ ಪ್ರಶ್ನೆಯನ್ನೇ ಕೇಳಿಕೊಂಡು ದಿನ ಶುರು ಮಾಡಿದರೆ ಸಾಕು. ಯಾಕಂದ್ರೆ ಬೆಳಿಗ್ಗೆ ಎದ್ದ ತಕ್ಷಣ ನಾವು ನೋಡುವ ಮೊದಲ ವ್ಯಕ್ತಿ ಬೇರೆಯವರಾಗಬೇಕಿಲ್ಲ… ಮೊದಲು ನಮ್ಮನ್ನೇ ನಾವು ನೋಡಿಕೊಳ್ಳೋಣ!

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share