ಬೆಂಗಳೂರು: ಕಳೆದ ನಾಲ್ಕು ದಶಕಗಳಿಂದ ಕಲ್ಯಾಣ ಕರ್ನಾಟಕ ಭಾಗದ ಜನರ ಆಶೀರ್ವಾದದಿಂದ ಅಧಿಕಾರ ಅನುಭವಿಸಿದವರೇ ಅಭಿವೃದ್ಧಿಗೆ ಮಾತ್ರ “ನಾಳೆ ಬಾ” ಎಂಬ ಶಾಶ್ವತ ಫಲಕ ಹಾಕಿಕೊಂಡಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದ ಅವರು, ಈ ಭಾಗದ ಜನತೆಗೆ ನಂಬಿಕೆ ದ್ರೋಹ ಮಾಡುತ್ತಿರುವವರನ್ನು ಜನರು ಶೀಘ್ರದಲ್ಲೇ ತಿರಸ್ಕರಿಸುವ ದಿನ ದೂರವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅಶೋಕ್, ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಟೀಕಿಸುವ ಮೂಲಕ ಹೈಕಮಾಂಡ್ ಮೆಚ್ಚುಗೆ ಪಡೆಯಲು ಹಾಗೂ ಪಕ್ಷದಲ್ಲಿ ಹೆಚ್ಚಿನ ಸ್ಥಾನಮಾನ ಗಳಿಸಲು ಸಚಿವರು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನಿಂದಿಸುವುದು ಆಕಾಶಕ್ಕೆ ಉಗುಳಿದಂತೆ ಎಂದೂ ಅವರು ತಿರುಗೇಟು ನೀಡಿದ್ದಾರೆ.
ಇದೇ ವೇಳೆ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ಉಂಟಾಗಿರುವುದನ್ನು ಆಡಳಿತಾತ್ಮಕ ವೈಫಲ್ಯವೆಂದು ಅಭಿಪ್ರಾಯಪಟ್ಟ ಅಶೋಕ್, ಬಡರೋಗಿಗಳ ಹಿತದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ರಾಜೀನಾಮೆ ಪಡೆಯಬೇಕು ಮತ್ತು ಸಮರ್ಥ ವ್ಯಕ್ತಿಗೆ ಆರೋಗ್ಯ ಖಾತೆ ಹಸ್ತಾಂತರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅವರು ಆಗ್ರಹಿಸಿದ್ದಾರೆ.