ಕೆನರಾ ನೆಕ್ಸ್ಟ್ ನ್ಯೂಸ್ ಡೆಸ್ಕ್
ಯಲ್ಲಾಪುರ: ಸಾರ್ವಜನಿಕ ಸ್ಥಳದಲ್ಲಿ ಓಸಿ ಮಟಕಾ ಜೂಜಾಟ ನಡೆಸುತ್ತಿದ್ದ ಆರೋಪದ ಮೇಲೆ ಯಲ್ಲಾಪುರ ಪೊಲೀಸರು ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯಲ್ಲಾಪುರ ತಾಲೂಕಿನ ತೇಲಂಗಾರ ಮಾರ್ಕೆಜಡ್ಡಿ ನಿವಾಸಿ ವಿಘ್ನೇಶ್ವರ ವೆಂಕಟ್ರಮಣ ನಾಯ್ಕ (39) ಪ್ರಕರಣದ ಆರೋಪಿಯಾಗಿದ್ದಾನೆ. ಆಗಸ್ಟ್ 28ರಂದು ಮಧ್ಯಾಹ್ನ ಸುಮಾರು 1.45ರ ವೇಳೆಗೆ ಇಡಗುಂದಿ ಗ್ರಾಮದ ಶ್ರೇಯಸ್ ಚಿಕನ್ ಸ್ಟಾಲ್ ಎದುರು ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು, ಒಂದು ರೂಪಾಯಿಗೆ 80 ರೂಪಾಯಿ ನೀಡುವುದಾಗಿ ಜನರಿಗೆ ಆಮಿಷವೊಡ್ಡಿ ಅಂಕಿ–ಸಂಖ್ಯೆಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಓಸಿ ಮಟಕಾ ಜೂಜಾಟ ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಯಲ್ಲಾಪುರ ಪೊಲೀಸ್ ಠಾಣೆಯ ಪಿಎಸ್ಐ ರಾಜಶೇಖರ ವಂದಲಿ ಅವರು ಪಂಚರು ಹಾಗೂ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದಾಗ ಆರೋಪಿಯ ಬಳಿಯಲ್ಲಿ 270 ರೂ ನಗದು, ಓಸಿ ಮಟಕಾ ಅಂಕಿ–ಸಂಖ್ಯೆಗಳನ್ನು ಬರೆದ ಒಂದು ಚೀಟಿ ಹಾಗೂ ಒಂದು ಬಾಲ್ಪೆನ್ ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.