ಹುಲೇಕಲ್‌ನಲ್ಲಿ ದನಗಳ್ಳತನ; ಅಂತರ ಜಿಲ್ಲಾ ಗ್ಯಾಂಗ್‌ನ ಮೂವರ ಬಂಧನ
ಶಿರಸಿ: ರಾತ್ರಿ ವೇಳೆ ಮನೆಗಳ ಸುತ್ತಮುತ್ತ ಕಟ್ಟಿಹಾಕಿದ್ದ ಜಾನುವಾರುಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದರು ಎನ್ನಲಾದ ಅಂತರ ಜಿಲ್ಲಾ ಗ್ಯಾಂಗ್‌ವೊಂದನ್ನು ಶಿರಸಿ ಗ್ರಾಮೀಣ ಪೊಲೀಸರು ಪತ್ತೆಹಚ್ಚಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಸುಮಾರು 3 ಲಕ್ಷ ರೂ ಮೌಲ್ಯದ ಮಹೀಂದ್ರಾ ಎಕ್ಸ್‌ಯುವಿ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎಕ್ಸ್‌ಯುವಿಯಲ್ಲಿ ಬರ್ತಾರೆ!
ಶಿರಸಿ ತಾಲೂಕಿನ ಹುಲೇಕಲ್‌ನಲ್ಲಿ ಆಗಸ್ಟ್ 12ರ ರಾತ್ರಿ ಅಪರಿಚಿತ ಇಬ್ಬರು ಕಾರಿನಲ್ಲಿ ಬಂದು ಆಕಳು ಹಾಗೂ ಹೋರಿ ಕರುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು ಎನ್ನಲಾಗಿದ್ದು, ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಆರೋಪಿಗಳ ಪತ್ತೆ ಹಾಗೂ ಜಾನುವಾರುಗಳ ರಕ್ಷಣೆಗೆ ಪೊಲೀಸ್ ಅಧೀಕ್ಷಕರ ಸೂಚನೆಯಂತೆ ಎರಡು ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದ್ದರು. ತನಿಖೆಯ ವೇಳೆ ಜಾನುವಾರು ಕಳ್ಳತನ ಮಾಡುತ್ತಿದ್ದ ಗ್ಯಾಂಗ್‌ನ ಸುಳಿವು ಪತ್ತೆಯಾಗಿದ್ದು, ಆಗಸ್ಟ್ 29ರಂದು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಶಿವಮೊಗ್ಗದ ಆರೋಪಿಗಳು
ಬಂಧಿತರನ್ನು ಶಿವಮೊಗ್ಗದ ಟಿಪ್ಪುನಗರದ ಮೊಹಮ್ಮದ್ ಅಯಾಜ್ ಅಲಿಯಾಸ್ ಅಂಡು (23), ಸೂಳೆಬೈಲು ನಿವಾಸಿ ಮೊಹಮ್ಮದ್ ಇಸ್ಮಾಯಿಲ್ (36) ಹಾಗೂ ಈದ್ಗಾ ನಗರದ ಅಬ್ದುಲ್ ಅಜೀಜ್ (35) ಎಂದು ಗುರುತಿಸಲಾಗಿದೆ. ಇವರಲ್ಲಿ ಅಯಾಜ್ ವೆಲ್ಡಿಂಗ್ ಕೆಲಸ, ಇಸ್ಮಾಯಿಲ್ ಲಾರಿ ಚಾಲಕ ಹಾಗೂ ಅಬ್ದುಲ್ ಅಜೀಜ್ ಫಿಶ್ ಪ್ಲಾಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಸುಮಾರು 3 ಲಕ್ಷ ರೂ ಮೌಲ್ಯದ ಮಹೀಂದ್ರಾ ಎಕ್ಸ್‌ಯುವಿ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳು ಭಾಗಿಯಾಗಿರುವ ಶಂಕೆ ಇದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ. ಉಳಿದ ಆರೋಪಿಗಳನ್ನು ಶೀಘ್ರ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ತಂಡಕ್ಕೆ ಎಸ್ಪಿ ಪ್ರಶಂಸೆ
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಐಪಿಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಿ. ಕೃಷ್ಣಮೂರ್ತಿ, ಕೆಎಸ್‌ಪಿಎಸ್ ಮತ್ತು ಗೀತಾ ಪಾಟೀಲ್, ಡಿವೈಎಸ್ಪಿ ಶಿರಸಿ ಉಪವಿಭಾಗ ಅವರ ಮಾರ್ಗದರ್ಶನದಲ್ಲಿ, ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ರಮೇಶ ಹೂಗಾರ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಕಾರ್ಯಾಚರಣೆಯಲ್ಲಿ ಪಿಎಸ್‌ಐಗಳಾದ ಸಂತೋಷಕುಮಾರ ಎಂ. ಮತ್ತು ಅಶೋಕ ಆರ್. ರಾಠೋಡ, ಎಎಸ್‌ಐ ಪ್ರದೀಪ ಟಿ. ರೇವಣಕರ ಹಾಗೂ ಸಿಬ್ಬಂದಿಗಳಾದ ಮಹಾಂತೇಶ್ ಬಾರಕೇರ್, ಬಸವರಾಜ ಹಗರಿ, ಕೋಟೇಶ ನಾಗರವಳ್ಳಿ, ಸಂದೀಪ್ ನಿಂಬಾಯಿ, ಅರುಣಕುಮಾರ ವಿ., ವೆಂಕಟ್ರಮಣ ನಾಯ್ಕ, ದಾವಲ್ ಸಾಬ್ ಕುಂದಿ, ಮಾರುತಿ ಗೌಡ, ಗಣಪತಿ ನಾಯ್ಕ ಹಾಗೂ ಭರತ್ ಎನ್.ಜೆ. ಅವರು ಪಾಲ್ಗೊಂಡಿದ್ದರು.
ಆರೋಪಿಗಳ ಕುರಿತು ಮಾಹಿತಿ ಸಂಗ್ರಹಿಸಿ ಪ್ರಕರಣವನ್ನು ಪತ್ತೆಹಚ್ಚಿದ ತಂಡದ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.