ಮುಂಡಗೋಡ: ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿದ ಲಾರಿಯೊಂದು ರಸ್ತೆಯ ಬದಿಯಲ್ಲಿ ಸಾಗುತ್ತಿದ್ದ ಜಾನುವಾರುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ಕರುಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಂದು ಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಳಗಿ ಗ್ರಾಮದ ಬಳಿ ನಡೆದಿದೆ.
ಮುಂಡಗೋಡ–ಶಿರಸಿ ರಾಜ್ಯ ಹೆದ್ದಾರಿ 69ರಲ್ಲಿ ಮಳಗಿ ಗ್ರಾಮದ ರೇಣುಕಾ ಫಾರ್ಮ್ಹೌಸ್ ಸಮೀಪ ಸೆ.1ರಂದು ಬೆಳಗ್ಗೆ ಸುಮಾರು 7.20ರ ವೇಳೆಗೆ ಘಟನೆ ನಡೆದಿದೆ.
ಮುಂಡಗೋಡ ಕಡೆಯಿಂದ ಮಳಗಿ ಮಾರ್ಗವಾಗಿ ಶಿರಸಿ ಕಡೆಗೆ ತೆರಳುತ್ತಿದ್ದ ಕಪ್ಪು-ಬಿಳಿ ಬಣ್ಣದ ಲಾರಿಯ ಚಾಲಕ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿಕೊಂಡು ಬಂದು, ಶಿರಸಿ ಕಡೆಯಿಂದ ಮಳಗಿ ಕಡೆಗೆ ರಸ್ತೆಯ ಪಕ್ಕದಲ್ಲಿ ಸಾಗುತ್ತಿದ್ದ ದನಕರುಗಳಿಗೆ ಏಕಾಏಕಿ ಡಿಕ್ಕಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಡಿಕ್ಕಿಯ ರಭಸಕ್ಕೆ ಒಂದು ಕೆಂಪು ಬಣ್ಣದ ಹೋರಿ ಕರು ಹಾಗೂ ಒಂದು ಬಿಳಿ ಬಣ್ಣದ ಹೋರಿ ಕರು ಸ್ಥಳದಲ್ಲೇ ಮೃತಪಟ್ಟಿವೆ. ಮತ್ತೊಂದು ಕೆಂಪು ಬಣ್ಣದ ಆಕಳು ಕರುವಿನ ಸೊಂಟ ಹಾಗೂ ಬೆನ್ನಿನ ಭಾಗಕ್ಕೆ ಗಂಭೀರ ಗಾಯಗಳಾಗಿವೆ.
ಅಪಘಾತದ ಬಳಿಕ ಲಾರಿ ನಿಲ್ಲಿಸದೆ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಳಗಿ ಗ್ರಾಮದ ರಾಧಾಕೃಷ್ಣ ಗೋ ಆಶ್ರಮದ ಮಾಲೀಕ ವಿನಾಯಕ ಕೃಷ್ಣಾ ಶೇಟ್ಟಿ ಅವರು ಘಟನೆ ಕುರಿತು ಮುಂಡಗೋಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.