Monday, September 7, 2026
Join WhatsApp Group
HomeInformationSpecialಒಂದು ದಿನ ಹೀಗೂ ಬದುಕಿ ನೋಡಿ!

ಒಂದು ದಿನ ಹೀಗೂ ಬದುಕಿ ನೋಡಿ!

ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ಹುಡುಕುತ್ತೇವೆ. ಅಲಾರಾಂ ಮೊಬೈಲ್‌ನಲ್ಲೇ, ಸುದ್ದಿ ಮೊಬೈಲ್‌ನಲ್ಲೇ, ಕೆಲಸದ ಸೂಚನೆ ಮೊಬೈಲ್‌ನಲ್ಲೇ, ಸ್ನೇಹಿತರ ವಿಚಾರ ಮೊಬೈಲ್‌ನಲ್ಲೇ, ಮನರಂಜನೆಯೂ ಮೊಬೈಲ್‌ನಲ್ಲೇ. ರಾತ್ರಿ ಮಲಗುವ ಮುನ್ನವೂ ಕೊನೆಯದಾಗಿ ನೋಡುವುದು ಅದನ್ನೇ! ಒಂದು ದಿನ ನಮ್ಮ ಮೊಬೈಲ್‌ ನಮ್ಮನ್ನು ಹುಡುಕದೆ ಇದ್ದರೆ ಹೇಗಿರುತ್ತದೆ ಎಂಬುದನ್ನು ಊಹಿಸಿಕೊಳ್ಳಿ. ವಿಚಿತ್ರವೆನಿಸುತ್ತಿದೆಯಲ್ಲ? ಅಷ್ಟೇ ಅಲ್ಲ, ಒಂದು ದಿನ ಮೊಬೈಲ್ ಇಲ್ಲದೆ ಬದುಕುವುದೇ ಕಷ್ಟವೆನಿಸಿದರೆ, ಸಮಸ್ಯೆ ಮೊಬೈಲ್‌ನಲ್ಲಿಲ್ಲ… ನಮ್ಮ ಬದುಕಿನಲ್ಲಿದೆ!

‘ಅನಿವಾರ್ಯತೆಯೇ ಅಗತ್ಯತೆಯ ತಾಯಿ’ ಎಂಬ ಗಾದೆ ವಿಜ್ಞಾನ ಲೋಕಕ್ಕೆ ಹೇಳಿಮಾಡಿಸಿದಂತಿದೆ. ಮನುಷ್ಯನ ಅಗತ್ಯಗಳನ್ನು ಪೂರೈಸಲೆಂದು ವಿಜ್ಞಾನ ಹೊಸಹೊಸ ಯಂತ್ರಗಳನ್ನು ನೀಡುತ್ತಲೇ ಹೋಯಿತು. ಆದರೆ ಈಗ ಪರಿಸ್ಥಿತಿ ಏನಾಗಿದೆ ಎಂದರೆ, ಯಂತ್ರಗಳು ನಮ್ಮ ಕೆಲಸವನ್ನು ಕಡಿಮೆ ಮಾಡಿದ್ದಕ್ಕಿಂತ ನಮ್ಮ ಬದುಕನ್ನೇ ತಮ್ಮ ಸುತ್ತ ಸುತ್ತುವಂತೆ ಮಾಡಿಬಿಟ್ಟಿವೆ.

ಬೆಳಗ್ಗೆ ಹಕ್ಕಿಗಳ ಚಿಲಿಪಿಲಿ ಕೇಳುತ್ತ ಎಚ್ಚರಗೊಳ್ಳಬೇಕಿದ್ದ ನಾವು ಅಲಾರಾಂಗಾಗಿ ಕಾಯುತ್ತೇವೆ. ಮನೆಯವರೊಂದಿಗೆ ಮಾತನಾಡುವುದಕ್ಕಿಂತ ಮೊಬೈಲ್ ಪರದೆಯೊಂದಿಗೆ ಹೆಚ್ಚು ಸಮಯ ಕಳೆಯುತ್ತೇವೆ. ಮೈ ಬಗ್ಗಿಸಿ ಕೆಲಸ ಮಾಡುವುದಕ್ಕಿಂತ ಬೆರಳುಗಳನ್ನು ಸ್ಕ್ರೀನ್ ಮೇಲೆ ಓಡಿಸುವುದೇ ಹೆಚ್ಚು. ಪ್ರಕೃತಿಯೊಂದಿಗೆ ಬೆರೆಯಲು ಸಮಯವಿಲ್ಲ. ಬಂಧುಗಳ ಮನೆಗೆ ಹೋಗಲು ಸಮಯವಿಲ್ಲ. ಮಕ್ಕಳೊಂದಿಗೆ ಕುಳಿತು ಮಾತನಾಡಲು ಸಮಯವಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಅಪರಿಚಿತರ ಬದುಕನ್ನು ಗಂಟೆಗಟ್ಟಲೆ ನೋಡಲು ಮಾತ್ರ ಸಮಯವಿದೆ!

ಇದರ ಪರಿಣಾಮ ದೇಹಕ್ಕಷ್ಟೇ ಅಲ್ಲ, ಮನಸ್ಸಿಗೂ ಆಗುತ್ತಿದೆ. ಕೆಲಸದಲ್ಲಿ ಮನಸ್ಸು ನಿಲ್ಲುವುದಿಲ್ಲ. ಮನೆಯವರ ಮೇಲೆ ವಿನಾಕಾರಣ ಅಸಹನೆ. ಏನೇ ಮಾಡಿದರೂ ಇನ್ನೇನೋ ಬೇಕೆಂಬ ಅತೃಪ್ತಿ. ಊಟ ಮಾಡುವಾಗಲೂ ಕೈಯಲ್ಲಿ ಮೊಬೈಲ್. ಕುಟುಂಬದೊಂದಿಗೆ ಕುಳಿತರೂ ಕಣ್ಣು ಪರದೆಯ ಮೇಲೆಯೇ. ದಿನವಿಡೀ ಓಡಾಟ, ಕೆಲಸ, ಇಮೇಲ್, ಮೆಸೇಜ್, ನೋಟಿಫಿಕೇಶನ್‌ಗಳ ನಡುವೆ ನಮ್ಮದೇ ಜೀವನವನ್ನು ನಾವು ಎಲ್ಲೋ ಕಳೆದುಕೊಳ್ಳುತ್ತಿದ್ದೇವೆಯೇ ಎಂಬ ಪ್ರಶ್ನೆ ಎದುರಾಗುತ್ತದೆ.

ಹಾಗಾದರೆ ಇದಕ್ಕೆ ಪರಿಹಾರವೇನು? ಉಪವಾಸ! ಹೌದು, ಹೊಟ್ಟೆಗೆ ಅಲ್ಲ. ತಂತ್ರಜ್ಞಾನಕ್ಕೆ ಉಪವಾಸ, ಡಿಜಿಟಲ್ ಡಿಟಾಕ್ಸ್. ಅಂದರೆ, ನಿರಂತರವಾಗಿ ನಮ್ಮನ್ನು ಸುತ್ತಿಕೊಂಡಿರುವ ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಟಿವಿ ಸೇರಿದಂತೆ ಡಿಜಿಟಲ್ ಸಾಧನಗಳಿಂದ ಉದ್ದೇಶಪೂರ್ವಕವಾಗಿ ಸ್ವಲ್ಪ ಕಾಲ ದೂರವಿರುವುದು. ಇಡೀ ಜೀವನವನ್ನೇ ಅವುಗಳಿಂದ ಕಿತ್ತುಕೊಳ್ಳಬೇಕು ಎಂದಲ್ಲ. ವಾರಕ್ಕೊಮ್ಮೆಯಾದರೂ ಅವುಗಳಿಗೆ ‘ಇವತ್ತು ನಿನಗೆ ರಜೆ’ ಎಂದು ಹೇಳುವುದಷ್ಟೇ!

ಒಂದು ದಿನ ಆಯ್ಕೆ ಮಾಡಿಕೊಳ್ಳಿ. ಭಾನುವಾರವಾಗಿರಬಹುದು, ನಿಮ್ಮ ವಾರದ ರಜಾ ದಿನವಾಗಿರಬಹುದು. ಬೆಳಗ್ಗೆ ಎದ್ದ ಕ್ಷಣದಿಂದ ರಾತ್ರಿ ಮಲಗುವವರೆಗೂ ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಟಿವಿ—ಎಲ್ಲವನ್ನೂ ಬದಿಗಿಡಿ. ತುರ್ತು ಸಂಪರ್ಕದಲ್ಲಿರುವವರಿಗೆ ಮೊದಲೇ ತಿಳಿಸಿಬಿಡಿ. ಅಷ್ಟೇ. ದೊಡ್ಡ ಯೋಗಾಸನ, ಕಠಿಣ ನಿಯಮ ಯಾವುದೂ ಬೇಕಿಲ್ಲ.

ಆ ದಿನ ಏನು ಮಾಡಬೇಕು ಎಂದು ಯೋಚಿಸುತ್ತಿದ್ದೀರಾ? ಬಹಳಷ್ಟು ಕೆಲಸಗಳಿವೆ!

ಪ್ರತಿದಿನ ಮೊಬೈಲ್‌ನಲ್ಲಿ ಓದುವ ದಿನಪತ್ರಿಕೆಯನ್ನು ಅಂದು ಕೈಯಲ್ಲಿ ಹಿಡಿದು ಓದಿ. ಬೆಳಗಿನ ಜಾವ ಸಣ್ಣದೊಂದು ನಡಿಗೆ ಹೋಗಿ. ಬಹಳ ದಿನಗಳಿಂದ ಮಾತನಾಡದ ಮನೆಯವರೊಂದಿಗೆ ಕುಳಿತು ಮಾತನಾಡಿ. ಮಕ್ಕಳನ್ನು ಕರೆದುಕೊಂಡು ಹಳ್ಳಿಯ ಕಡೆ ಹೋಗಿ. ಸಾಧ್ಯವಾದರೆ ಕೃಷಿ ಜಮೀನು, ನದಿ, ಕಾಡು ಅಥವಾ ಪ್ರಕೃತಿಯ ನಡುವೆ ಒಂದಿಷ್ಟು ಸಮಯ ಕಳೆಯಿರಿ. ಪುಸ್ತಕ ಓದಿ. ತೋಟದಲ್ಲಿ ಕೆಲಸ ಮಾಡಿ. ಮನೆಯ ಅಜ್ಜ-ಅಜ್ಜಿಯರ ಹಳೆಯ ಕಥೆಗಳನ್ನು ಕೇಳಿ. ವರ್ಷಗಳಿಂದ ಭೇಟಿಯಾಗದ ನೆಂಟರ ಮನೆಗೆ ಹೋಗಿ.

ಮುಖ್ಯವಾಗಿ, ಆ ದಿನ ಯಾರ್ಯಾರು ಮೆಸೇಜ್ ಮಾಡಿದ್ದಾರೆ, ಫೇಸ್‌ಬುಕ್‌ನಲ್ಲಿ ಎಷ್ಟು ನೋಟಿಫಿಕೇಶನ್ ಬಂದಿದೆ, ಇನ್‌ಸ್ಟಾಗ್ರಾಂನಲ್ಲಿ ಏನಾಗಿದೆ, ಕಚೇರಿಯಿಂದ ಮೇಲ್ ಬಂದಿದೆಯೇ ಎಂಬ ಕುತೂಹಲಕ್ಕೆ ಬಲಿಯಾಗಬೇಡಿ. ಆ ದಿನ ನಿಮ್ಮದು. ಉಪವಾಸ ಇರುವುದು ನೀವು ಅಲ್ಲ. ನಿಮ್ಮ ಗ್ಯಾಜೆಟ್‌ಗಳು!

ಮೊದಲ ದಿನ ಕೈ ಖಾಲಿಯಾಗಿರುವಂತೆ ಅನಿಸಬಹುದು. ಪದೇಪದೇ ಮೊಬೈಲ್ ಹುಡುಕುವ ಕೈಗೆ ಕೆಲಸವೇ ಇಲ್ಲದಂತಾಗಬಹುದು. ಏನೋ ಮುಖ್ಯವಾದುದನ್ನು ಕಳೆದುಕೊಳ್ಳುತ್ತಿದ್ದೇನೆ ಎಂಬ ಆತಂಕವೂ ಬರಬಹುದು. ಆದರೆ ಕೆಲವು ಗಂಟೆಗಳ ನಂತರವೇ ಒಂದು ವಿಚಿತ್ರವಾದ ನೆಮ್ಮದಿ ನಿಮ್ಮನ್ನು ಆವರಿಸಬಹುದು. ಮನೆಯವರ ಮಾತು ಕೇಳಿಸಬಹುದು. ಗಾಳಿಯ ಸದ್ದು ಗಮನಕ್ಕೆ ಬರಬಹುದು. ಊಟದ ರುಚಿ ಗೊತ್ತಾಗಬಹುದು. ಮಕ್ಕಳ ನಗು ಮೊಬೈಲ್ ರಿಂಗ್‌ಟೋನ್‌ಗಿಂತ ಚೆನ್ನಾಗಿದೆ ಎನ್ನಿಸಬಹುದು.

ಆಗ ಬಹುಶಃ ನಿಮ್ಮೊಳಗೊಂದು ಪ್ರಶ್ನೆ ಹುಟ್ಟಬಹುದು. “ಅರೆ… ಹೀಗೂ ಬದುಕಬಹುದಲ್ಲ!” ಅದೇ ಡಿಜಿಟಲ್ ಡಿಟಾಕ್ಸ್‌ನ ಮೊದಲ ಗೆಲುವು. ತಂತ್ರಜ್ಞಾನ ನಮ್ಮ ಬದುಕನ್ನು ಸುಲಭಗೊಳಿಸಲಿ. ಆದರೆ ನಮ್ಮ ಬದುಕೇ ತಂತ್ರಜ್ಞಾನದ ಕೈಯಲ್ಲಿರುವಷ್ಟು ಅವಲಂಬಿತರಾಗಬಾರದು. ಯಂತ್ರಗಳು ನಮ್ಮ ಕೆಲಸ ಮಾಡಲಿ; ನಮ್ಮ ಪರವಾಗಿ ಬದುಕಬಾರದು.

ಹಾಗಾಗಿ ವಾರಕ್ಕೊಂದು ದಿನವಾದರೂ ಗ್ಯಾಜೆಟ್‌ಗಳಿಗೆ ಉಪವಾಸ ಮಾಡಿಸೋಣ. ಒಂದು ದಿನ ಬದುಕಿ ನೋಡೋಣ. ಮೊಬೈಲ್ ಇಲ್ಲದೆ, ನೋಟಿಫಿಕೇಶನ್ ಇಲ್ಲದೆ, ಸ್ಕ್ರೀನ್ ಇಲ್ಲದೆ… ನಮ್ಮೊಂದಿಗೆ, ನಮ್ಮವರೊಂದಿಗೆ, ಪ್ರಕೃತಿಯೊಂದಿಗೆ. ಹೀಗೂ ಬದುಕಬಹುದೆಂದು ನಾವೂ ತೋರಿಸಬಹುದು!

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share