ಯಲ್ಲಾಪುರ: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಬಹುದಿನಗಳ ಸಂಚಾರದ ಸಮಸ್ಯೆಗೆ ಸ್ಪಂದಿಸಿರುವ ಶಾಸಕ ಶಿವರಾಮ ಹೆಬ್ಬಾರ್ ಅವರ ಸೂಚನೆಯ ಮೇರೆಗೆ ಮುಂಡಗೋಡ ತಾಲೂಕಿನ ಟೆಂಕಲ್ ಉಮ್ಮಚಗಿ ಹಾಗೂ ಬನವಾಸಿ ಹೋಬಳಿಯ ನರೂರ ಗ್ರಾಮಕ್ಕೆ ಸೆ.4ರಿಂದ ನೂತನ ಬಸ್ ಸೇವೆ ಆರಂಭವಾಗಲಿದೆ.
ಇತ್ತೀಚೆಗೆ ಯಲ್ಲಾಪುರದಲ್ಲಿ ಕೆಎಸ್ಆರ್ಟಿಸಿ ಅಧಿಕಾರಿಗಳು ಹಾಗೂ ಸಾರ್ವಜನಿಕರೊಂದಿಗೆ ನಡೆದ ಸಭೆಯಲ್ಲಿ ಗ್ರಾಮಸ್ಥರು, ವಿದ್ಯಾರ್ಥಿಗಳ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಎರಡೂ ಗ್ರಾಮಗಳಿಗೆ ಬಸ್ ಸೇವೆ ಕಲ್ಪಿಸುವಂತೆ ಶಾಸಕರಿಗೆ ಮನವಿ ಮಾಡಿದ್ದರು. ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಶಾಸಕರು, ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿ ಬಸ್ ಸಂಚಾರ ಆರಂಭಿಸಲು ಕ್ರಮ ಕೈಗೊಂಡಿದ್ದಾರೆ.
ಮಳಗಿಯಿಂದ ಬೆಡಸಗಾಂವ್ ಮಾರ್ಗವಾಗಿ ಟೆಂಕಲ್ ಉಮ್ಮಚಗಿ, ಅಲ್ಲಿಂದ ಬಿಸ್ಲಕೊಪ್ಪ ಮಾರ್ಗದಲ್ಲಿ ನೂತನ ಬಸ್ ಸಂಚಾರ ಆರಂಭವಾಗಲಿದೆ. ಇದೇ ವೇಳೆ ಬನವಾಸಿ ಭಾಗದ ಬಾಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರೂರ ಗ್ರಾಮಕ್ಕೂ ಸೆ.4ರಿಂದ ಹೊಸ ಬಸ್ ಸೇವೆ ದೊರೆಯಲಿದೆ.
ಹೊಸ ಬಸ್ ಸೇವೆಯಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು ಅನುಕೂಲವಾಗುವುದರ ಜೊತೆಗೆ ಸಾರ್ವಜನಿಕರ ದೈನಂದಿನ ಸಂಚಾರಕ್ಕೂ ಹೆಚ್ಚಿನ ನೆರವಾಗಲಿದೆ. ಬಹುದಿನಗಳಿಂದ ಬಸ್ ಸಂಪರ್ಕದ ಅಗತ್ಯವಿದ್ದ ಪ್ರದೇಶಗಳಿಗೆ ಸೇವೆ ಕಲ್ಪಿಸಿರುವ ಕ್ರಮಕ್ಕೆ ಸ್ಥಳೀಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.