Saturday, September 19, 2026
Join WhatsApp Group
HomeInformationಈ ಊರಲ್ಲಿ ರಸ್ತೆಯ ಬದಿಗೆ ಕಸವೇ ಕಾಣದು!

ಈ ಊರಲ್ಲಿ ರಸ್ತೆಯ ಬದಿಗೆ ಕಸವೇ ಕಾಣದು!

ಉತ್ತರ ಕನ್ನಡಕ್ಕೆ ಹಳ್ಳಿ ಹೇಳುವ ಪಾಠವೇನು?

ಪ್ರವಾಸಿ ತಾಣ ಎಂದಾಕ್ಷಣ ನಮಗೆ ಮೊದಲು ನೆನಪಾಗುವುದು ಏನು? ಬೆಟ್ಟ, ಜಲಪಾತ, ನದಿ, ಸಮುದ್ರ, ಹಸಿರು ಕಾಡು… ಹೀಗೆ ಪ್ರಕೃತಿಯ ಒಂದೊಂದೇ ಸುಂದರ ಚಿತ್ರಗಳು ಕಣ್ಣ ಮುಂದೆ ಬರುತ್ತವೆ.

ಆದರೆ ಆ ತಾಣ ತಲುಪಿದ ಮೇಲೆ ಮತ್ತೊಂದು ದೃಶ್ಯವೂ ಕಾಣಿಸುತ್ತದೆ. ಪ್ಲಾಸ್ಟಿಕ್ ಬಾಟಲಿ, ಚಿಪ್ಸ್ ಪ್ಯಾಕೆಟ್, ಊಟದ ಕವರ್, ನೀರಿನ ಬಾಟಲಿ… ಪ್ರಕೃತಿಯ ಸೌಂದರ್ಯದ ನಡುವೆ ಮನುಷ್ಯ ಬಿಟ್ಟುಹೋದ ಕಸದ ಗುರುತುಗಳು!

ಇದಕ್ಕೆ ತದ್ವಿರುದ್ಧವಾಗಿ ಸಿಕ್ಕಿಂನ ಪದಮ್ಚೆನ್ ಎಂಬ ಹಳ್ಳಿ ಒಂದು ಸರಳ ಪ್ರಶ್ನೆ ಕೇಳುತ್ತದೆ. ಪ್ರವಾಸಿಗರು ಬಂದರೆ ಎಲ್ಲೆಂದರಲ್ಲಿ ಕಸ ಎಸೆಯಲೇಬೇಕೆ?

ಸಮುದ್ರಮಟ್ಟದಿಂದ 8,000 ಅಡಿಗೂ ಹೆಚ್ಚು ಎತ್ತರದಲ್ಲಿರುವ ಪದಮ್ಚೆನ್, ಸಿಕ್ಕಿಂನ ಹಳೆಯ ಸಿಲ್ಕ್ ರೂಟ್‌ನಲ್ಲಿ ಸಾಗುವ ಪ್ರವಾಸಿಗರನ್ನು ಸ್ವಾಗತಿಸುವ ಸುಂದರ ಹಳ್ಳಿ. ಪ್ರವಾಸಿಗರು ಬರುತ್ತಾರೆ, ಹೋಗುತ್ತಾರೆ. ಆದರೆ ರಸ್ತೆಯ ಬದಿಯಲ್ಲಿ ಕಸದ ರಾಶಿಗಳು ಕಾಣಿಸುವುದಿಲ್ಲ!

ಅದಕ್ಕೆ ಕಾರಣ ಕಸದ ಬುಟ್ಟಿಗಳ ಸಂಖ್ಯೆ ಮಾತ್ರವಲ್ಲ. ಅಲ್ಲಿನ ಜನರಿಗೆ ಬಾಲ್ಯದಿಂದಲೇ ಒಂದು ಸರಳ ಪಾಠ ಕಲಿಸಲಾಗುತ್ತದೆ, ʻರಸ್ತೆ ಬದಿಯೆಂದರೆ ಕಸ ಹಾಕುವ ಜಾಗವಲ್ಲ!ʼ ಇದು ಕೇಳಲು ತುಂಬಾ ಸಾಮಾನ್ಯವಾದ ಮಾತು. ಆದರೆ ಅದರ ಪರಿಣಾಮ ಮಾತ್ರ ದೊಡ್ಡದು.

2017ರಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿದ್ದ ದಾವಾ ಛೋಡೆನ್ ಭುಟಿಯಾ ಅವರ ನೇತೃತ್ವದಲ್ಲಿ 17 ಮಹಿಳೆಯರ Swachhata Sahayogi ತಂಡ ರೂಪುಗೊಂಡಿತು. ಸುಮಾರು 300 ಕುಟುಂಬಗಳನ್ನು ಈ ವ್ಯವಸ್ಥೆಯೊಳಗೆ ತರಲಾಯಿತು. ಮನೆಯಲ್ಲೇ ಕಸವನ್ನು ವಿಂಗಡಿಸುವ ಅಭ್ಯಾಸ ಬೆಳೆಸಲಾಯಿತು. ಪ್ಲಾಸ್ಟಿಕ್ ಸೇರಿದಂತೆ ಒಣ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಅದನ್ನು Material Recovery Facilityಗೆ ಕಳುಹಿಸಲಾಗುತ್ತದೆ. ಹಸಿ ಕಸವನ್ನು ಕಾಂಪೋಸ್ಟ್ ಮಾಡುವ ವ್ಯವಸ್ಥೆಯೂ ಇದೆ.

ಅಂದರೆ, “ಕಸವನ್ನು ಎಲ್ಲಾದರೂ ಹಾಕಿಬಿಡೋಣ” ಎನ್ನುವ ಪದ್ಧತಿಗೆ ಬದಲಾಗಿ, ಕಸ ಹುಟ್ಟಿದ ಜಾಗದಲ್ಲೇ ಅದರ ಜವಾಬ್ದಾರಿಯೂ ಹುಟ್ಟಬೇಕು ಎಂಬ ತತ್ವವನ್ನು ಗ್ರಾಮ ಅಳವಡಿಸಿಕೊಂಡಿದೆ.

ಇದರಲ್ಲೇ ಇನ್ನೊಂದು ಮುಖ್ಯ ಸಂಗತಿಯಿದೆ. ಸ್ವಚ್ಛತೆಯ ಹೊಣೆಗಾರಿಕೆಯನ್ನು ಮನೆಗಳಿಗೆ ಮಾತ್ರ ಸೀಮಿತಗೊಳಿಸಿಲ್ಲ. ಪ್ರವಾಸಿಗರೊಂದಿಗೆ ನೇರವಾಗಿ ಸಂಪರ್ಕ ಹೊಂದಿರುವ ಟ್ಯಾಕ್ಸಿ ಚಾಲಕರು, ಹೋಂಸ್ಟೇ ಮಾಲೀಕರು, ಹೋಟೆಲ್‌ಗಳವರಿಗೂ ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ವ್ಯವಸ್ಥಿತವಾಗಿ ನೀಡುವಂತೆ ಜಾಗೃತಿ ಮೂಡಿಸಲಾಗಿದೆ. ಹೀಗಾಗಿ ಪ್ರವಾಸಿಗ ಬಂದಾಗ ಅವರ ಕಸವೂ ಗ್ರಾಮದ ವ್ಯವಸ್ಥೆಯ ಭಾಗವಾಗುತ್ತದೆ.

ಈ ಕೆಲಸದ ಬೆನ್ನೆಲುಬಾಗಿರುವ 17 ಮಹಿಳೆಯರ ಪಾತ್ರವೂ ಗಮನಾರ್ಹ. ಕಸ ಸಂಗ್ರಹಿಸುವುದರಿಂದ ಹಿಡಿದು ವಿಂಗಡಿಸುವವರೆಗೆ ಅವರು ಕೆಲಸ ಮಾಡುತ್ತಾರೆ. ಗ್ರಾಮಸ್ಥರ ಸಹಕಾರದೊಂದಿಗೆ ಈ ಪ್ರಯತ್ನ ಮುಂದುವರಿಯುತ್ತಾ ಬಂದಿದ್ದು, 2023ರಲ್ಲಿ ಪದಮ್ಚೆನ್‌ಗೆ ‘ಸ್ವಚ್ಛ ಗ್ರಾಮ’ ಎಂಬ ಮಾನ್ಯತೆಯೂ ದೊರೆತಿದೆ.

ಈ ಮಾತನ್ನು ಉತ್ತರ ಕನ್ನಡದ ಪ್ರವಾಸಿ ತಾಣಗಳ ಮುಂದೆ ಇಟ್ಟು ನೋಡಿದರೆ ಸ್ವಲ್ಪ ಮುಜುಗರವಾಗಬಹುದು. ನಮ್ಮ ಜಿಲ್ಲೆಯಲ್ಲಿ ಪ್ರವಾಸಿ ತಾಣಗಳಿಗೆ ಕೊರತೆಯೇ ಇಲ್ಲ. ಜಲಪಾತಗಳಿವೆ, ನದಿಗಳಿವೆ, ಕಡಲ ತೀರಗಳಿವೆ, ಕಾಡುಗಳಿವೆ, ಬೆಟ್ಟಗಳಿವೆ. ವರ್ಷವಿಡೀ ಸಾವಿರಾರು ಪ್ರವಾಸಿಗರು ಬರುತ್ತಾರೆ. ಪ್ರಕೃತಿಯ ಸೌಂದರ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತೇವೆ.

ಆದರೆ ಅದೇ ಪ್ರಕೃತಿಯ ಪಕ್ಕದಲ್ಲಿ ನಾವು ಬಿಟ್ಟುಬರುವ ಪ್ಲಾಸ್ಟಿಕ್ ಬಾಟಲಿ, ತಿಂಡಿ ಪೊಟ್ಟಣ, ನೀರಿನ ಕವರ್‌ಗಳನ್ನು ಎಲ್ಲೆಂದರಲ್ಲಿ ಎಸೆದ ಫೋಟೋ ಮಾತ್ರ ತೆಗೆದುಕೊಳ್ಳುವುದಿಲ್ಲ!

ಪ್ರವಾಸಿ ತಾಣವನ್ನು ಸ್ವಚ್ಛವಾಗಿಡುವುದು ಕೇವಲ ಪಂಚಾಯಿತಿ, ನಗರಸಭೆ ಅಥವಾ ಪ್ರವಾಸೋದ್ಯಮ ಇಲಾಖೆಯ ಕೆಲಸ ಎಂದುಕೊಂಡರೆ ಸಮಸ್ಯೆ ಎಂದಿಗೂ ಮುಗಿಯುವುದಿಲ್ಲ. ಪ್ರತಿಯೊಂದು ತಾಣದಲ್ಲೂ ನೂರಾರು ಕಸದ ಬುಟ್ಟಿಗಳನ್ನು ಇಟ್ಟರೂ, ಕಸವನ್ನು ಎಲ್ಲೆಂದರಲ್ಲಿ ಎಸೆಯಬಾರದು ಎಂಬ ಮನಸ್ಸು ಬೆಳೆದಿಲ್ಲವಾದರೆ ಆ ಬುಟ್ಟಿಗಳಿಗೂ ಅರ್ಥವಿಲ್ಲ.

ಇನ್ನೊಂದು ಕಡೆ, ಪ್ರವಾಸಿಗರೂ ತಮ್ಮ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳಬೇಕು. ಮನೆಯಿಂದ ಹೊರಡುವಾಗ ನೀರಿನ ಬಾಟಲಿ ತೆಗೆದುಕೊಂಡು ಹೋಗುತ್ತೇವೆ. ಅದೇ ಬಾಟಲಿ ಖಾಲಿಯಾದ ಮೇಲೆ ಮನೆಗೆ ಹಿಂದಿರುಗುವಾಗ ನಮ್ಮ ಜೊತೆ ಬರಲು ಏಕೆ ಸಾಧ್ಯವಾಗುವುದಿಲ್ಲ?

ಪ್ರಕೃತಿಯನ್ನು ನೋಡಲು ಹೋಗುವ ಪ್ರವಾಸಿಗರು, ಪ್ರಕೃತಿಯ ಮೇಲೆ ತಮ್ಮ ಹೆಜ್ಜೆ ಗುರುತು ಮಾತ್ರ ಬಿಟ್ಟು ಬರಬೇಕು, ಕಸದ ಗುರುತನ್ನಲ್ಲ. ಪದಮ್ಚೆನ್‌ನ ಪಾಠ ದೊಡ್ಡದೇನಲ್ಲ. ಆದರೆ ನಾವು ಅದನ್ನು ಕಲಿತರೆ ಸಾಕು.

ಪ್ರವಾಸಿ ತಾಣಗಳಲ್ಲಿ ಕಸದ ಬುಟ್ಟಿ ಬೇಕು. ಅದಕ್ಕಿಂತ ಮೊದಲು, ಕಸವನ್ನು ಕಸದ ಬುಟ್ಟಿಯಲ್ಲಿಯೇ ಹಾಕುವ ಮನಸ್ಸು ಬೇಕು.

ಉತ್ತರ ಕನ್ನಡದ ಪ್ರಕೃತಿ ನಮ್ಮ ಹೆಮ್ಮೆ. ಆ ಹೆಮ್ಮೆಯನ್ನು ಕೇವಲ ಫೋಟೋಗಳಲ್ಲಿ ಉಳಿಸದೆ, ನಮ್ಮ ಪ್ರವಾಸಿ ತಾಣಗಳಲ್ಲೂ ಉಳಿಸುವ ಪ್ರಯತ್ನಕ್ಕೆ ನಾವೇ ನಾಂದಿ ಹಾಡಬೇಕಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad

Most Popular

error: Content is protected !!
Share