ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮಘಟ್ಟ, ಅರಣ್ಯ ಪ್ರದೇಶ, ನದಿಗಳು ಹಾಗೂ ಜೀವವೈವಿಧ್ಯದ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತಾಪಿತ ಬೇಡ್ತಿ–ಅಘನಾಶಿನಿ ನದಿ ಜೋಡಣೆ ಯೋಜನೆಗಳನ್ನು ಕೈಬಿಡಬೇಕು ಎಂದು ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ ಹಾಗೂ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಪತ್ರ ಬರೆದಿರುವ ಅವರು, ಎರಡೂ ನದಿಗಳು ಕೇವಲ ಜಲಮೂಲಗಳಲ್ಲ. ಜಿಲ್ಲೆಯ ಕೃಷಿ, ಮೀನುಗಾರಿಕೆ, ಕುಡಿಯುವ ನೀರು, ಅಂತರ್ಜಲ ಮರುಪೂರಣ ಹಾಗೂ ಅರಣ್ಯಾಧಾರಿತ ಜೀವನೋಪಾಯಕ್ಕೆ ಅವು ಪ್ರಮುಖ ಆಧಾರವಾಗಿವೆ ಎಂದು ತಿಳಿಸಿದ್ದಾರೆ.
ಪಶ್ಚಿಮಘಟ್ಟದಂತಹ ಸೂಕ್ಷ್ಮ ಪರಿಸರ ಪ್ರದೇಶದಲ್ಲಿ ಯೋಜನೆಗಾಗಿ ಅಣೆಕಟ್ಟುಗಳು, ಕಾಲುವೆಗಳು, ಸುರಂಗಗಳು, ಪೈಪ್ಲೈನ್ಗಳು, ಪಂಪ್ಹೌಸ್ಗಳು ಹಾಗೂ ಸಂಪರ್ಕ ರಸ್ತೆಗಳ ನಿರ್ಮಾಣ ಕೈಗೊಂಡರೆ ಪರಿಸರ ವ್ಯವಸ್ಥೆ ಮತ್ತು ಜೀವವೈವಿಧ್ಯತೆಗೆ ದೀರ್ಘಕಾಲೀನ ಹಾನಿಯಾಗುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಉತ್ತರ ಕನ್ನಡದಲ್ಲಿ ಮಳೆಗಾಲದ ಕೆಲವೇ ತಿಂಗಳುಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುತ್ತದೆ. ಇಂತಹ ಪ್ರದೇಶದಲ್ಲಿ ನದಿಗಳ ನೈಸರ್ಗಿಕ ಹರಿವು ಹಾಗೂ ಪರಿಸರದ ಕನಿಷ್ಠ ಹರಿವಿನ ಮೇಲೆ ಪರಿಣಾಮ ಬೀರಿದರೆ ಕೃಷಿ, ಕುಡಿಯುವ ನೀರು, ಅಂತರ್ಜಲ ಮರುಪೂರಣ ಮತ್ತು ಮೀನುಗಾರಿಕೆಯ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗಬಹುದು. ವಿಶೇಷವಾಗಿ ನದಿಗಳ ಸಿಹಿನೀರಿನ ಹರಿವು ಕಡಿಮೆಯಾದರೆ ಕರಾವಳಿ ಭಾಗಕ್ಕೆ ಸಮುದ್ರದ ಉಪ್ಪುನೀರು ನುಗ್ಗುವ ಅಪಾಯವೂ ಇದೆ ಎಂದು ದೇಶಪಾಂಡೆ ಹೇಳಿದ್ದಾರೆ.
ಬೇಡ್ತಿ ಮತ್ತು ಅಘನಾಶಿನಿ ನದಿ ಕಣಿವೆಗಳ ರೈತರು, ಮೀನುಗಾರರು ಹಾಗೂ ಸ್ಥಳೀಯ ಸಮುದಾಯಗಳ ಜೀವನೋಪಾಯ ನದಿ ಮತ್ತು ಅರಣ್ಯ ಸಂಪನ್ಮೂಲಗಳೊಂದಿಗೆ ನಿಕಟವಾಗಿ ಬೆಸೆದುಕೊಂಡಿದೆ. ಹೀಗಾಗಿ ಅಭಿವೃದ್ಧಿಯ ಹೆಸರಿನಲ್ಲಿ ಈ ನೈಸರ್ಗಿಕ ಸಂಪನ್ಮೂಲಗಳಿಗೆ ಧಕ್ಕೆಯಾಗುವ ಯಾವುದೇ ಯೋಜನೆಯನ್ನು ಅತ್ಯಂತ ಎಚ್ಚರಿಕೆಯಿಂದ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಜಿಲ್ಲೆಯ ಜನರ ಹಿತಾಸಕ್ತಿ, ಪರಿಸರ ಸಂರಕ್ಷಣೆ ಹಾಗೂ ಮುಂದಿನ ಪೀಳಿಗೆಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಬೇಡ್ತಿ–ಅಘನಾಶಿನಿ ಎರಡೂ ನದಿ ಜೋಡಣೆ ಯೋಜನೆಗಳನ್ನು ಕೈಬಿಡಬೇಕು. ಜೊತೆಗೆ, ಡಿಪಿಆರ್ ಸಿದ್ಧತೆ ಸೇರಿದಂತೆ ಮುಂದಿನ ಎಲ್ಲಾ ಸಮೀಕ್ಷೆ ಮತ್ತು ಅಧ್ಯಯನ ಕಾರ್ಯಗಳನ್ನು ಸ್ಥಗಿತಗೊಳಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆರ್.ವಿ. ದೇಶಪಾಂಡೆ ಆಗ್ರಹಿಸಿದ್ದಾರೆ.