ಯಲ್ಲಾಪುರ: ಇಂದಿನ ಮಕ್ಕಳ ಸಮಯದ ಬಹುಭಾಗ ಮೊಬೈಲ್ ಸುತ್ತಲೇ ಕಳೆಯುತ್ತಿದೆ. ಆದರೆ ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಯಲ್ಲೂ ಆಸಕ್ತಿ ಬೆಳೆಸಿಕೊಂಡು ಕ್ರೀಡಾಂಗಣದಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಸ್ನೇಹಿತರ ಬಳಗ ವಿಸ್ತರಿಸುವುದರ ಜತೆಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯವೂ ಉತ್ತಮವಾಗುತ್ತದೆ ಎಂದು ಯುವ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಬಾಲಕೃಷ್ಣ ನಾಯಕ ಹೇಳಿದರು.
ಯಲ್ಲಾಪುರ ತಾಲೂಕಿನ ಮಂಚಿಕೇರಿ ಪಿ.ಎಂ.ಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಕ್ರೀಡಾಸ್ಪೂರ್ತಿ ಹೆಚ್ಚಿಸುವ ಉದ್ದೇಶದಿಂದ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಎಲ್ಲ ವಿದ್ಯಾರ್ಥಿಗಳಿಗೆ ‘ಸ್ಪೋರ್ಟ್ಸ್ ಜೆರ್ಸಿ’ಗಳನ್ನು ದೇಣಿಗೆಯಾಗಿ ನೀಡಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಓದಿನ ಜತೆಗೆ ಕ್ರೀಡೆಗೂ ಸಮಾನ ಆದ್ಯತೆ ನೀಡಬೇಕು. ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ದೇಹ ಸದೃಢವಾಗುವುದರ ಜೊತೆಗೆ ಆತ್ಮವಿಶ್ವಾಸ, ಶಿಸ್ತು, ತಂಡದ ಮನೋಭಾವ ಹಾಗೂ ಸ್ನೇಹ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಮಕ್ಕಳು ಮೊಬೈಲ್ನಿಂದ ಸಾಧ್ಯವಾದಷ್ಟು ದೂರವಿದ್ದು ಕ್ರೀಡಾಂಗಣದತ್ತ ಹೆಚ್ಚು ಹೆಜ್ಜೆ ಹಾಕಬೇಕು ಎಂದು ಅವರು ಸಲಹೆ ನೀಡಿದರು.
ಯಾವುದೇ ವಿದ್ಯಾರ್ಥಿಗೆ ಕ್ರೀಡೆಯಲ್ಲಿ ಮುಂದುವರಿದು ಸಾಧನೆ ಮಾಡಬೇಕೆಂಬ ಆಸಕ್ತಿ ಇದ್ದರೆ, ಅಂತಹ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ದೊರೆಯುವಂತೆ ವ್ಯವಸ್ಥೆ ಮಾಡಿಕೊಡುವುದಾಗಿ ಬಾಲಕೃಷ್ಣ ನಾಯಕ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ರಾಘವೇಂದ್ರ ಭಟ್ಟ ಹಾಸಣಗಿ, ಎಸ್ಡಿಎಂಸಿ ಅಧ್ಯಕ್ಷ ಪವನಕುಮಾರ ಕೇಸರಕರ್, ಎಸ್ಡಿಎಂಸಿ ಸದಸ್ಯರು, ರಘುಪತಿ ಹೆಗಡೆ, ದಿವಾಕರ ಪೂಜಾರಿ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.
ಶಿಕ್ಷಕಿ ವಿಜಯಾ ನಾಯಕ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕಿ ದೇವಕಿ ಎಚ್. ಸ್ವಾಗತಿಸಿದರು. ದೇವಕಿ ಭಟ್ ವಂದನಾರ್ಪಣೆ ನೆರವೇರಿಸಿದರು.