Friday, March 13, 2026
HomeStateನೀವು ನನಗೆ ಪಾಠ ಹೇಳಬೇಡಿ!

ನೀವು ನನಗೆ ಪಾಠ ಹೇಳಬೇಡಿ!

ಮೈಸೂರು: ಮೈಸೂರು ರಾಜಕೀಯದಲ್ಲಿ ವಾಗ್ವಾದ ತಾರಕಕ್ಕೇರಿದೆ. ಮಾಜಿ ಸಂಸದ ಪ್ರತಾಪ್‌ ಸಿಂಹ ಅವರು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

“ಯತೀಂದ್ರ ಅವರೇ, ಯಾರೋ ಚೇಲಾಗಳ ಕೈಯಲ್ಲಿ ಪ್ರತಾಪ್ ಸಿಂಹ ವರುಣಾದಿಂದ ಸ್ಪರ್ಧೆ ಮಾಡಲಿ ಅಂತ ಹೇಳಿಸುತ್ತಿದ್ದೀರಾ? ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ ಮೈಸೂರು ನಗರದಿಂದಲೇ ಸ್ಪರ್ಧೆ ಮಾಡಲು ಹೇಳಿ ನೋಡೋಣ” ಎಂದು ಅವರು ಸವಾಲು ಹಾಕಿದ್ದಾರೆ.

ʻಮಾಡಲು ಕೆಲಸ ಇಲ್ಲದವರ ಆರೋಪಕ್ಕೆ ಉತ್ತರ ಕೊಡುವುದಿಲ್ಲʼ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಪ್ರತಾಪ್ ಸಿಂಹ, “ಕೆಲಸ ಅಂದ್ರೆ ಬರೀ ವರ್ಗಾವಣೆ ಮಾಡಿಸುವುದಷ್ಟೇನಾ? ವರ್ಗಾವಣೆ ಲಿಸ್ಟ್ ಕೊಟ್ಟು ಅಪ್ಪ ಕೊಟ್ಟ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳೋದೇ ಕೆಲಸನಾ? ಮ್ಯಾಟ್ರಿಕ್ಸ್ ಲ್ಯಾಬ್ ಹೆಸರಲ್ಲಿ ಹಣ ಮಾಡೋದೇ ಕೆಲಸನಾ? ನೀವು ಎಂಎಲ್‌ಸಿ ಅಷ್ಟೇ. ಯಾವ ಅಧಿಕಾರದಲ್ಲಿ ವರ್ಗಾವಣೆ ಮಾಡಿಸುತ್ತೀರಾ?” ಎಂದು ಪ್ರಶ್ನಿಸಿದರು.

ಇದೇ ವೇಳೆ, “ಯತೀಂದ್ರ ಹೆಸರಿನ ಹಿಂದೆ ಸಿದ್ದರಾಮಯ್ಯ ಎಂಬ ಹೆಸರು ಇರದೇ ಇದ್ದಿದ್ದರೆ ನಿಮ್ಮನ್ನು ಯಾರೂ ಗಮನಿಸುತ್ತಿರಲಿಲ್ಲ. ತಂದೆಯ ಹೆಸರಿನಿಂದ ಅಸ್ತಿತ್ವ ಉಳಿಸಿಕೊಂಡಿರುವ ನೀವು ನನಗೆ ಪಾಠ ಹೇಳಬೇಡಿ. ಬೆಂಗಳೂರಿನಿಂದ ಮೈಸೂರಿಗೆ ಆರಾಮವಾಗಿ ಓಡಾಡುವ ರಸ್ತೆ ನಿರ್ಮಾಣಕ್ಕೆ ನಾನು ಕಾರಣ ಎಂಬುದನ್ನು ನೆನಪಿಡಿ. ನಿಮ್ಮ ತಂದೆ ಮೈಸೂರಿಗೆ ಇಂತಹ ರಸ್ತೆ ಮಾಡಿಸಿದ್ದಾರಾ?” ಎಂದು ಕಟುವಾಗಿ ಟೀಕಿಸಿದರು.

ತಮ್ಮ ರಾಜಕೀಯ ಭವಿಷ್ಯ ಕುರಿತು ಮಾತನಾಡಿದ ಪ್ರತಾಪ್ ಸಿಂಹ, “ನನಗೆ ಟಿಕೆಟ್ ತಪ್ಪಿದೆ ಅಷ್ಟೇ. ದೇಶದಲ್ಲಿ 132 ಜನರಿಗೆ ಟಿಕೆಟ್ ಸಿಗಲಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮೈಸೂರಿನಿಂದಲೇ ಗೆದ್ದು ಬರುತ್ತೇನೆ. ನಿಮ್ಮಂತೆ ಹಿಂಬಾಗಿಲಿನಿಂದ ಅಸೆಂಬ್ಲಿಗೆ ಬರುವ ಜಾಯಮಾನ ನನ್ನದಲ್ಲ,” ಎಂದು ವಾಗ್ದಾಳಿ ಮುಂದುವರಿಸಿದರು.

ಈ ಹೇಳಿಕೆಗಳಿಂದ ಮೈಸೂರು ರಾಜಕೀಯದಲ್ಲಿ ಹೊಸ ಚರ್ಚೆ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಈ ಮಾತಿನ ಸಮರ ತಣ್ಣಗಾಗದೇ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share