Saturday, September 19, 2026
Join WhatsApp Group
HomeLocal News45ರ ಸಂಭ್ರಮದಲ್ಲಿ ಕಳಚೆ ಗಣಪ

45ರ ಸಂಭ್ರಮದಲ್ಲಿ ಕಳಚೆ ಗಣಪ

ಶಾಲಾ ಮಕ್ಕಳ ಕಲರವಕ್ಕೆ ಮೆರಗು ನೀಡಿದ ಸಾಂಸ್ಕೃತಿಕ ವೈಭವ

ಯಲ್ಲಾಪುರ: ಗಜಾನನೋತ್ಸವ ಎಂದರೆ ಕೇವಲ ಪೂಜೆ, ಮೆರವಣಿಗೆಗೆ ಸೀಮಿತವಾಗದೆ, ಊರಿನ ಜನರನ್ನು ಒಂದೆಡೆ ಸೇರಿಸುವ, ಸ್ಥಳೀಯ ಕಲೆ ಮತ್ತು ಸಂಸ್ಕೃತಿಗೆ ವೇದಿಕೆ ಕಲ್ಪಿಸುವ ಹಬ್ಬವೂ ಹೌದು. ಇದಕ್ಕೆ ಸಾಕ್ಷಿಯೆಂಬಂತೆ ಕಳಚೆಯಲ್ಲಿ ಸರ್ವೋದಯ ಯುವಕ ಸಂಘ ಹಾಗೂ ಸಾರ್ವಜನಿಕ ಗಜಾನನೋತ್ಸವ ಸಮಿತಿಯ ಆಶ್ರಯದಲ್ಲಿ 45ನೇ ವರ್ಷದ ಗಜಾನನೋತ್ಸವ ಸಂಭ್ರಮದಿಂದ ನಡೆಯಿತು.

ಉತ್ಸವದ ಅಂಗವಾಗಿ ಸೆ.16ರಂದು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ನಡೆಯಿತು. ಶಾಲಾ ಮಕ್ಕಳು ವಿವಿಧ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವ ಮೂಲಕ ಕಳಚೆಯ ಸಾಂಸ್ಕೃತಿಕ ಜೀವಂತಿಕೆಗೆ ಮತ್ತಷ್ಟು ಮೆರಗು ನೀಡಿದರು.

ಯಲ್ಲಾಪುರದ ಚೇತನಾ ಪ್ರೆಸ್‌ನ ಶ್ರೀಮತಿ ರಾಮಕೃಷ್ಣ ಬಾಳಕಲ್‌ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿ, ಕಳಚೆಯ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಮೋದ ಹೆಗಡೆ ಅವರು, ಮನುಷ್ಯ ಸಂಘಜೀವಿಯಾಗಿದ್ದು, ಸಮಾಜಮುಖಿಯಾಗಿ ಬದುಕಿದಾಗ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಮೇಶ ಭಾಗ್ವತ, ಜಿ.ಎಸ್. ಭಟ್ಟ, ಅ.ರಾ. ಭಟ್ಟ ಹಾಗೂ ಶಂಕರ ಹೆಗಡೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಮುಂಜಾನೆಯಿಂದಲೇ ನಡೆದ ವಿನೂತನ ಮಾದರಿಯ ಕ್ರಿಕೆಟ್‌ ಕ್ರೀಡಾಕೂಟ ಕ್ರೀಡಾಭಿಮಾನಿಗಳ ಗಮನ ಸೆಳೆಯಿತು. ರೋಚಕ ಹಣಾಹಣಿಯ ಬಳಿಕ ಪ್ರಮೋದ್‌ ಹೆಬ್ಬಾರ್‌ ನಾಯಕತ್ವದ ಕಳಚೆ ತಂಡ ಪ್ರಥಮ ಬಹುಮಾನ ಹಾಗೂ ಚಿಮ್ನಳ್ಳಿ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿತು.

ಸಮಿತಿಯ ಅಧ್ಯಕ್ಷ ಜಿ.ಆರ್. ಹೆಗಡೆ ಸ್ವಾಗತಿಸಿದರು. ಸಂಘದ ಅಧ್ಯಕ್ಷ ರಾಘವೇಂದ್ರ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ರಾಘವೇಂದ್ರ ಭಟ್ಟ ಕೋಣೆಮನೆ ವಂದಿಸಿದರು.

45 ವರ್ಷಗಳ ಸುದೀರ್ಘ ಪರಂಪರೆಯನ್ನು ಮುಂದುವರಿಸಿಕೊಂಡು ಸಾಗುತ್ತಿರುವ ಕಳಚೆಯ ಗಜಾನನೋತ್ಸವದಲ್ಲಿ ಧಾರ್ಮಿಕ ಆಚರಣೆಯ ಜೊತೆಗೆ ಮಕ್ಕಳ ಕಲೆ, ಕ್ರೀಡೆ ಹಾಗೂ ಸಾಮಾಜಿಕ ಒಗ್ಗಟ್ಟಿಗೂ ವೇದಿಕೆ ಸಿಗುತ್ತಿರುವುದು ವಿಶೇಷವಾಗಿದೆ.

ಉತ್ಸವದ ಅಂಗವಾಗಿ ಜೋಯಿಡಾದ ಸಪ್ತಸ್ವರ ಸೇವಾ ಸಂಸ್ಥೆ-ಗುಂದ ಮಹಿಳೆಯರಿಂದ ‘ಶಶಿಪ್ರಭಾ ಪರಿಣಯ’ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಿತು. ವಿಶೇಷವೆಂದರೆ ಈ ಯಕ್ಷಗಾನದಲ್ಲಿ ಭಾಗವಹಿಸಿದ ಎಲ್ಲ ಕಲಾವಿದರೂ ಮಹಿಳೆಯರಾಗಿದ್ದು, ತಮ್ಮ ಅಭಿನಯ, ನೃತ್ಯ ಹಾಗೂ ಯಕ್ಷಗಾನ ಕಲೆಯ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ಮಹಿಳೆಯರೇ ಸಂಪೂರ್ಣವಾಗಿ ನಡೆಸಿಕೊಟ್ಟ ಈ ಯಕ್ಷಗಾನಕ್ಕೆ ಊರಿನ ಜನರಿಂದ ಮೆಚ್ಚುಗೆಯ ಮಾತುಗಳು ಕೇಳಿಬಂದವು.

ಸಾರ್ವಜನಿಕ ಗಣೇಶೋತ್ಸವದ ಅಂತಿಮ ದಿನವಾದ ಸೆ. 18ರಂದು ಸಂಜೆ ಮಹಾಪೂಜೆ ಹಾಗೂ ಫಲಾವಳಿಗಳ ಲೀಲಾವು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಧ್ಯುಕ್ತವಾಗಿ ಮಂಗಲಮೂರ್ತಿಯ ವಿಸರ್ಜನೆಯೊಂದಿಗೆ ಗಣೇಶೋತ್ಸವ ಸಂಪನ್ನಗೊಂಡಿತು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad

Most Popular

error: Content is protected !!
Share