Friday, July 24, 2026
Join WhatsApp Group
HomeHealthಬೇಸಿಗೆ ಬಂತು; ಕಲ್ಲಂಗಡಿ ಹಣ್ಣು ತಿನ್ನುವ ಮುನ್ನ ಇದನ್ನೂ ಗಮನಿಸಿ!

ಬೇಸಿಗೆ ಬಂತು; ಕಲ್ಲಂಗಡಿ ಹಣ್ಣು ತಿನ್ನುವ ಮುನ್ನ ಇದನ್ನೂ ಗಮನಿಸಿ!

ಬೇಸಿಗೆ ಕಾಲ ಶುರುವಾಗುತ್ತಿದ್ದಂತೆ ಕಲ್ಲಂಗಡಿ ಸೇರಿದಂತೆ ವಿವಿಧ ಹಣ್ಣುಗಳ ಬಳಕೆ ಹೆಚ್ಚುತ್ತದೆ. ಆದರೆ ಇತ್ತೀಚೆಗೆ “ಹಣ್ಣುಗಳಿಗೆ ಎರಿಥ್ರೋಸಿನ್ ಎಂಬ ಅಪಾಯಕಾರಿ ಕೆಂಪು ಬಣ್ಣ ಹಚ್ಚಲಾಗುತ್ತಿದೆ” ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದರಿಂದ ಜನರಲ್ಲಿ ಆತಂಕ ಸಹಜ.

ಹೀಗಾಗಿ ಈ ವಿಷಯದ ನಿಜಾಂಶ ತಿಳಿದುಕೊಳ್ಳುವುದು ಅಗತ್ಯ. ಎರಿಥ್ರೋಸಿನ್ (Erythrosine) ಎನ್ನುವುದು ಒಂದು ಕೃತಕ ಆಹಾರ ಬಣ್ಣವಾಗಿದ್ದು, ಇದನ್ನು E-127 ಅಥವಾ FD&C Red No.3 ಎಂದೂ ಕರೆಯಲಾಗುತ್ತದೆ. ಸಾಮಾನ್ಯವಾಗಿ ಮಿಠಾಯಿ, ಕ್ಯಾಂಡಿ, ಜೆಲ್ಲಿ, ಐಸ್ ಕ್ರೀಂ, ಕೆಲವು ಬೇಕರಿ ಉತ್ಪನ್ನಗಳಲ್ಲಿ ಕೆಂಪು ಅಥವಾ ಗುಲಾಬಿ ಬಣ್ಣ ನೀಡಲು ನಿಯಂತ್ರಿತ ಪ್ರಮಾಣದಲ್ಲಿ ಬಳಸಲಾಗುತ್ತದೆ. ಆಹಾರ ಸುರಕ್ಷತಾ ಮಾನದಂಡಗಳ ಪ್ರಕಾರ ಇದು ನಿರ್ದಿಷ್ಟ ಮಿತಿಯೊಳಗೆ ಮಾತ್ರ ಬಳಸಲು ಅನುಮತಿಸಲಾಗಿದೆ.

ಹಣ್ಣುಗಳಿಗೆ ಎರಿಥ್ರೋಸಿನ್ ಹಚ್ಚುವುದು ಕಾನೂನುಬಾಹಿರ. ಆದರೆ ಕೆಲವು ಸ್ಥಳಗಳಲ್ಲಿ ಹಣ್ಣುಗಳ ಬಣ್ಣ ಗಾಢವಾಗಿ ತೋರಿಸಲು ಅಥವಾ ಹಳೆಯ ಹಣ್ಣನ್ನು ತಾಜಾ ಎನ್ನಿಸಿ ಮಾರಾಟ ಮಾಡಲು ಅನಧಿಕೃತವಾಗಿ ಕೃತಕ ಬಣ್ಣಗಳನ್ನು ಬಳಸಿದ ಘಟನೆಗಳು ವರದಿಯಾಗಿವೆ. ಇಂತಹ ಕೃತ್ಯಗಳು ಆಹಾರ ಸುರಕ್ಷತಾ ನಿಯಮಗಳಿಗೆ ವಿರುದ್ಧ. ಭಾರತದಲ್ಲಿ ಆಹಾರ ಗುಣಮಟ್ಟವನ್ನು ನಿಯಂತ್ರಿಸುವ Food Safety and Standards Authority of India (FSSAI) ಸ್ಪಷ್ಟವಾಗಿ ಹೇಳಿರುವುದೇನೆಂದರೆ, ಅನುಮತಿ ಇಲ್ಲದ ಕೃತಕ ಬಣ್ಣಗಳನ್ನು ಹಣ್ಣು ಅಥವಾ ತಾಜಾ ಆಹಾರಗಳಿಗೆ ಬಳಸಲು ಸಂಪೂರ್ಣ ನಿಷೇಧವಿದೆ.

ಎರಿಥ್ರೋಸಿನ್ ನಿಯಂತ್ರಿತ ಪ್ರಮಾಣದಲ್ಲಿ ಬಳಸಿದರೆ ತಕ್ಷಣದ ಗಂಭೀರ ಅಪಾಯ ಉಂಟಾಗುವುದಿಲ್ಲ ಎಂದು ಕೆಲವು ಅಂತಾರಾಷ್ಟ್ರೀಯ ಅಧ್ಯಯನಗಳು ಸೂಚಿಸುತ್ತವೆ. ಆದರೆ ಅಧಿಕ ಪ್ರಮಾಣದಲ್ಲಿ ಅಥವಾ ನಿರಂತರ ಬಳಕೆಯಿಂದ ಥೈರಾಯ್ಡ್ ಗ್ರಂಥಿಯ ಮೇಲೆ ಪರಿಣಾಮ, ಅಲರ್ಜಿ, ಮಕ್ಕಳಲ್ಲಿ ಅತಿಸಕ್ರಿಯತೆ (hyperactivity) ಮುಂತಾದ ಸಮಸ್ಯೆಗಳ ಸಾಧ್ಯತೆ ಕುರಿತು ಸಂಶೋಧನೆಗಳು ಎಚ್ಚರಿಕೆ ನೀಡಿವೆ. ಆದ್ದರಿಂದಲೇ ಹಲವಾರು ದೇಶಗಳಲ್ಲಿ ಇದರ ಬಳಕೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗಿದೆ.

ಈ ಬಗ್ಗೆ ಗ್ರಾಹಕರಲ್ಲಿ ಜಾಗೃತು ಮೂಡಬೇಕಿದೆ. ಕಲ್ಲಂಗಡಿ ಅಥವಾ ಇತರ ಹಣ್ಣುಗಳನ್ನು ಕತ್ತರಿಸಿದಾಗ ಅತಿಯಾಗಿ ಕೆಂಪು ಬಣ್ಣ ಹೊರಹೊಮ್ಮುವುದು, ಕೈಗೆ ಅಸಹಜ ಬಣ್ಣ ಅಂಟುವುದು ಕಂಡುಬಂದರೆ ಅನುಮಾನಿಸಬಹುದು. ಹಣ್ಣು ಕತ್ತರಿಸಿ ಬಿಳಿ ಟಿಶ್ಯೂ ಅಥವಾ ಹತ್ತಿಯಿಂದ ಒರೆಸಿದಾಗ ಬಣ್ಣ ಕಂಡುಬಂದರೆ ಅದು ಕೃತಕ ಬಣ್ಣದ ಬಳಕೆಯನ್ನು ಸೂಚಿಸುತ್ತದೆ. ಸಾಧ್ಯವಾದಷ್ಟು ವಿಶ್ವಾಸಾರ್ಹ ಅಂಗಡಿಗಳಿಂದ ಅಥವಾ ಪರಿಚಿತ ರೈತರಿಂದ ಹಣ್ಣು ಖರೀದಿಸುವುದು ಒಳಿತು.

ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸುವುದು ವ್ಯಾಪಾರಿಗಳ ಕರ್ತವ್ಯವಾಗಿದ್ದು, ಸಂಶಯಾಸ್ಪದ ಪ್ರಕರಣಗಳು ಕಂಡುಬಂದರೆ ಸ್ಥಳೀಯ ಆರೋಗ್ಯ ಇಲಾಖೆ ಅಥವಾ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ದೂರು ನೀಡುವುದು ಸಾರ್ವಜನಿಕರ ಹೊಣೆಗಾರಿಕೆಯೂ ಆಗಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share