Friday, March 13, 2026
HomeStateಡಾ.ರಾಜ್ ಅಪಹರಣ ಪ್ರಕರಣ: 25 ವರ್ಷಗಳ ಬಳಿಕ 9 ಆರೋಪಿಗಳಿಗೆ ಖುಲಾಸೆ

ಡಾ.ರಾಜ್ ಅಪಹರಣ ಪ್ರಕರಣ: 25 ವರ್ಷಗಳ ಬಳಿಕ 9 ಆರೋಪಿಗಳಿಗೆ ಖುಲಾಸೆ

ಬೆಂಗಳೂರು: ಕನ್ನಡದ ಖ್ಯಾತ ನಟ ಡಾ. ರಾಜ್ ಅಪಹರಣ ಪ್ರಕರಣದಲ್ಲಿ ಮಹತ್ವದ ತೀರ್ಪು ಪ್ರಕಟಗೊಂಡಿದೆ. ಕಾಡುಗಳ್ಳ ವೀರಪ್ಪನ್ ನಡೆಸಿದ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್‌ ಹೈಕೋರ್ಟ್ 9‌ ಮಂದಿಯನ್ನು ಆರೋಪಮುಕ್ತಗೊಳಿಸಿದೆ. ಸುಮಾರು 25 ವರ್ಷಗಳ ಬಳಿಕ ಪ್ರಕರಣದಲ್ಲಿ ಸಿಲುಕಿದ್ದ ಆರೋಪಿಗಳು ಸಂಪೂರ್ಣ ಖುಲಾಸೆಯಾಗಿದ್ದಾರೆ.

ಈ ಹಿಂದೆ ಸೆಷನ್ಸ್ ನ್ಯಾಯಾಲಯವೂ ಗೋವಿಂದರಾಜ್, ಆಂಡ್ರಿಲ್, ಪಸುವಣ್ಣ, ಪುಟ್ಟುಸಾಮಿ, ಕಲ್ಮಂಡಿರಾಮನ್, ಮಾರನ್, ಸೆಲ್ವಂ, ಅಮೃತಲಿಂಗಂ ಮತ್ತು ನಾಗರಾಜ್ ಅವರನ್ನು ಸಾಕ್ಷ್ಯಾಭಾವದ ಆಧಾರದಲ್ಲಿ ಖುಲಾಸೆ ಮಾಡಿತ್ತು. ಆರೋಪಿಗಳು ಮತ್ತು ವೀರಪ್ಪನ್ ನಡುವೆ ಸಂಬಂಧವಿದೆ ಎಂಬುದನ್ನು ಪೊಲೀಸರು ಸಮರ್ಪಕವಾಗಿ ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿತ್ತು. ರಾಜ್‌ಕುಮಾರ್ ಹಾಗೂ ಅವರ ಪತ್ನಿ ಪಾರ್ವತಮ್ಮರನ್ನು ವಿಚಾರಣೆ ನಡೆಸಿಲ್ಲ. ಮಧ್ಯಸ್ಥಿಕೆದಾರರನ್ನೂ ಸಮರ್ಪಕವಾಗಿ ಪ್ರಶ್ನಿಸಿಲ್ಲ ಎಂಬ ಅಂಶವನ್ನು ನ್ಯಾಯಾಲಯ ಗಮನಿಸಿತ್ತು.

ಈ ತೀರ್ಪನ್ನು ಪ್ರಶ್ನಿಸಿ ಪೊಲೀಸರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ಕೂಡ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಸಮರ್ಥಿಸಿ ಆರೋಪಿಗಳನ್ನು ಮರುಖುಲಾಸೆಗೊಳಿಸಿದ್ದು, ಇದರಿಂದ ಪೊಲೀಸರಿಗೆ ಹಿನ್ನೆಡೆಯಾಗಿದೆ.

ಜುಲೈ 30, 2000ರಂದು ಕರ್ನಾಟಕ-ತಮಿಳುನಾಡು ಗಡಿ ಭಾಗದ ಈರೋಡ್ ಜಿಲ್ಲೆಯ ತಲವಾಡಿ ಸಮೀಪದ ದೊಡ್ಡ ಗಾಜನೂರು ತೋಟದ ಮನೆಯಲ್ಲಿ ತಂಗಿದ್ದ ಡಾ.‌ ರಾಜ್‌ಕುಮಾರ್ ಅವರನ್ನು ವೀರಪ್ಪನ್ ಮತ್ತು ಅವನ ಸಹಚರರು ಅಪಹರಿಸಿದ್ದರು. ಅವರೊಂದಿಗೆ ಸಂಬಂಧಿಕರಾದ ಎಸ್.ಎ. ಗೋವಿಂದರಾಜ್, ನಾಗೇಶ್ ಹಾಗೂ ಸಹಾಯಕ ನಿರ್ದೇಶಕ ನಾಗಪ್ಪರನ್ನೂ ಕಿಡ್ನಾಪ್ ಮಾಡಲಾಗಿತ್ತು. ಸೆಪ್ಟೆಂಬರ್ 28ರಂದು ನಾಗಪ್ಪರನ್ನು ಬಿಡುಗಡೆ ಮಾಡಲಾಗಿದ್ದು, ಉಳಿದವರು 108 ದಿನಗಳ ಬಳಿಕ ಬಿಡುಗಡೆಗೊಂಡಿದ್ದರು.

ವೀರಪ್ಪನ್, ಮುತ್ತುಲಕ್ಷ್ಮಿ ಸೇರಿದಂತೆ ಒಟ್ಟು 25 ಮಂದಿಯ ವಿರುದ್ಧ ಕೇಸ್ ದಾಖಲಾಗಿತ್ತು. ಅಕ್ಟೋಬರ್ 18, 2004ರಂದು ತಮಿಳುನಾಡು ವಿಶೇಷ ಕಾರ್ಯಪಡೆ ‘ಆಪರೇಷನ್ ಕಕೂನ್’ ಮೂಲಕ ವೀರಪ್ಪನ್ ಹಾಗೂ ಅವನ ಇಬ್ಬರು ಸಹಚರರಾದ ಸೇತುಕುಳಿ ಗೋವಿಂದನ್ ಮತ್ತು ಚಂದ್ರಗೌಡರನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿತ್ತು. ಇದೀಗ ಹೈಕೋರ್ಟ್ ತೀರ್ಪಿನೊಂದಿಗೆ 25 ವರ್ಷಗಳ ಹಳೆಯ ಪ್ರಕರಣಕ್ಕೆ ಮಹತ್ವದ ಅಂತ್ಯ ಕಂಡಂತಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share