ಸಿನಿಮಾ ಎಂಬುದು ಸಾಹಿತ್ಯ ಲೋಕದ ಅದ್ಭುತ ವಿಸ್ತಾರವೆಂದರೆ ತಪ್ಪಾಗಲಾರದು. ಜನ, ಮನ ಮತ್ತು ಧನ ಈ ಮೂರನ್ನೂ ಒಟ್ಟಾಗಿ ಸ್ಪರ್ಶಿಸುವ ಶಕ್ತಿ ಹೊಂದಿರುವ ಕ್ಷೇತ್ರವೇ ಸಿನಿಮಾ. ಮನರಂಜನೆ ನೀಡುವುದರ ಜೊತೆಗೆ, ಚಿಂತನೆಗೆ ದಾರಿ ತೋರಿಸುವುದು, ಸಮಾಜದ ಮುಖವನ್ನು ಪ್ರತಿಬಿಂಬಿಸುವುದು, ಸಂಸ್ಕೃತಿಯನ್ನು ಉಳಿಸುವುದು ಮತ್ತು ಕಲೆಯನ್ನು ಜನಸಾಮಾನ್ಯರಿಗೆ ತಲುಪಿಸುವುದು ಸಿನಿಮಾದ ವೈಶಿಷ್ಟ್ಯವಾಗಿದೆ.
ಸಿನಿಮಾ ಹುಟ್ಟುವ ಮುನ್ನ ನಾಟಕ ಕ್ಷೇತ್ರವೇ ಪ್ರಮುಖ ಮನರಂಜನಾ ಮಾಧ್ಯಮವಾಗಿತ್ತು. ರಂಗಭೂಮಿಯ ಅನುಭವ, ಕಥನಶೈಲಿ, ಅಭಿನಯ ಹಾಗೂ ಸಂಗೀತದ ಪರಂಪರೆ ನಂತರ ಸಿನಿಮಾ ರೂಪದಲ್ಲಿ ಹೊಸ ಜೀವ ಪಡೆದಿತು. ಸಿನಿಮಾ ಬೆಳವಣಿಗೆಯೊಂದಿಗೆ ಕಲಾರಂಗಕ್ಕೆ ಹೊಸ ಆಯಾಮ ಸಿಕ್ಕಿತು. ಒಂದು ಸಿನಿಮಾ ಮತ್ತೊಂದು ಸಿನಿಮಾಗಿಂತ ವಿಭಿನ್ನವಾಗಿರಬೇಕು ಎಂಬ ಸ್ಪರ್ಧಾತ್ಮಕ ಮನೋಭಾವವೂ ಬೆಳೆಯಿತು.
ಕನ್ನಡ ಸಿನಿಮಾರಂಗದ ಆರಂಭ 1934ರಲ್ಲಿ ಬಿಡುಗಡೆಯಾದ ಸತಿ ಸುಲೋಚನ ಚಿತ್ರದ ಮೂಲಕವಾಯಿತು. ಇದು ಕನ್ನಡದ ಮೊದಲ ಟಾಕಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲಿಂದ ಆರಂಭವಾದ ಕನ್ನಡ ಸಿನಿಮಾರಂಗ ನಿರಂತರವಾಗಿ ಬೆಳೆಯುತ್ತಲೇ ಬಂದಿದೆ. ಮಧ್ಯೆ ಅನೇಕ ಸವಾಲುಗಳು ಎದುರಾದರೂ ತನ್ನ ದಾರಿಯನ್ನು ಬಿಡಲಿಲ್ಲ.
ಸಿನಿಮಾ ಅನೇಕ ಕಲಾವಿದರ ಬದುಕಿಗೆ ಬೆಳಕಾಯಿತು. ಇಲ್ಲಿ ನಾಯಕ-ನಾಯಕಿಯರಷ್ಟೇ ಅಲ್ಲ, ನಿರ್ದೇಶಕ, ನಿರ್ಮಾಪಕ, ಕಥೆಗಾರ, ಸಂಭಾಷಣೆಗಾರ, ಸಂಗೀತ ನಿರ್ದೇಶಕ, ಗಾಯಕ, ಛಾಯಾಗ್ರಾಹಕ, ಸಂಕಲನಕಾರ, ಕಲಾ ನಿರ್ದೇಶಕ, ನೃತ್ಯ ನಿರ್ದೇಶಕ, ತಂತ್ರಜ್ಞರು ಸೇರಿದಂತೆ ಅನೇಕ ಪ್ರತಿಭಾವಂತರಿಗೆ ಅವಕಾಶ ಸಿಗುತ್ತದೆ. ಹೀಗಾಗಿ ಸಿನಿಮಾ ಸಾವಿರಾರು ಕುಟುಂಬಗಳ ಜೀವನಾಧಾರವೂ ಆಗಿದೆ.
ಸಿನಿಮಾದ ಮತ್ತೊಂದು ವಿಶೇಷತೆ ಎಂದರೆ ಅದು ಪ್ರೇಕ್ಷಕರ ಭಾವನೆಗಳನ್ನು ತಕ್ಷಣ ಮುಟ್ಟುವ ಸಾಮರ್ಥ್ಯ. ನಗು, ಅಳು, ಪ್ರೀತಿ, ಕೋಪ, ಭಯ, ಧೈರ್ಯ, ಕನಸು—ಮಾನವನ ಎಲ್ಲ ಭಾವನೆಗಳನ್ನೂ ಸಿನಿಮಾ ತೆರೆಗೆ ತರುತ್ತದೆ. ಸಂಗೀತ, ಅಭಿನಯ, ಸಂಭಾಷಣೆ ಮತ್ತು ದೃಶ್ಯ ವೈಭವಗಳ ಸಮನ್ವಯದಿಂದ ಸಿನಿಮಾ ಪ್ರಭಾವಶಾಲಿ ಮಾಧ್ಯಮವಾಗುತ್ತದೆ. ಜನಸಾಮಾನ್ಯರ ಭಾಷೆ, ಬದುಕು ಮತ್ತು ಸಂಸ್ಕೃತಿಯ ಪ್ರತಿಬಿಂಬವೂ ಅದರಲ್ಲಿ ಕಾಣುತ್ತದೆ.
ಕನ್ನಡ ಸಿನಿಮಾರಂಗದಲ್ಲಿ ಹಲವಾರು ಕಾಲಘಟ್ಟಗಳಲ್ಲಿ ಅನೇಕ ಅಮರಚಿತ್ರಗಳು ಮೂಡಿವೆ. ಆರಂಭಿಕ ದಿನಗಳಲ್ಲಿ ಸತಿ ಸುಲೋಚನ, ಬೆಡರ ಕಣ್ಣಪ್ಪ, ಭಕ್ತ ಪ್ರಹ್ಲಾದ, ಭೂತಯ್ಯನ ಮಗ ಅಯ್ಯು, ನಾಗರಹಾವುಮೊದಲಾದ ಚಿತ್ರಗಳು ಜನಮನ ಗೆದ್ದವು. ನಂತರದ ಅವಧಿಯಲ್ಲಿಮುಂಗಾರು ಮಳೆ, ಮೈಲಾರಿ, ಉಗ್ರಂ, ರಾಜಕುಮಾರ ಮೊದಲಾದ ಚಿತ್ರಗಳು ಹೊಸ ತಲೆಮಾರಿನ ಪ್ರೇಕ್ಷಕರನ್ನು ಸೆಳೆದವು.
ಇತ್ತೀಚಿನ ಕಾಲಘಟ್ಟದಲ್ಲಿ ಕನ್ನಡ ಸಿನಿಮಾ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡಿದೆ. ಕೆಜಿಎಫ್, 777 ಚಾರ್ಲಿ, ಕಾಂತಾರಮುಂತಾದ ಸಿನಿಮಾಗಳು ವಿಷಯ ವೈವಿಧ್ಯ, ತಾಂತ್ರಿಕ ಗುಣಮಟ್ಟ ಮತ್ತು ಜಾಗತಿಕ ಮೆಚ್ಚುಗೆಯಿಂದ ಕನ್ನಡ ಚಿತ್ರರಂಗದ ಘನತೆಯನ್ನು ಹೆಚ್ಚಿಸಿವೆ.
ಕನ್ನಡ ಸಿನಿಮಾರಂಗವು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದಿದೆ. ಇದರಿಂದ ಅದರ ಸಾಹಿತ್ಯಿಕ ಮತ್ತು ಕಲಾತ್ಮಕ ಮೌಲ್ಯ ಸ್ಪಷ್ಟವಾಗುತ್ತದೆ.
ತಂತ್ರಜ್ಞಾನ ಬೆಳವಣಿಗೆಯೊಂದಿಗೆ ಚಿತ್ರಮಂದಿರಗಳ ರೂಪವೂ ಬದಲಾಗಿದೆ. ಇಂದಿನ ದಿನಗಳಲ್ಲಿ ಮಲ್ಟಿಪ್ಲೆಕ್ಸ್‌ಗಳು, ಡಿಜಿಟಲ್ ಪ್ರೊಜೆಕ್ಷನ್, ಉನ್ನತ ಧ್ವನಿ ವ್ಯವಸ್ಥೆ, 3D ಅನುಭವಗಳು ಸಿನಿಮಾ ವೀಕ್ಷಣೆಗೆ ಹೊಸ ಆಯಾಮ ನೀಡಿವೆ. ಇನ್ನೊಂದೆಡೆ ಮೊಬೈಲ್ ಫೋನ್‌ಗಳು, ಓಟಿಟಿ ವೇದಿಕೆಗಳು ಮತ್ತು ವೆಬ್‌ಸೈಟ್‌ಗಳ ಮೂಲಕ ಜನರು ಮನೆಯಲ್ಲೇ ಸಿನಿಮಾಗಳನ್ನು ನೋಡುವ ಅಭ್ಯಾಸ ರೂಢಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ಸಿನಿಮಾ ಕೇವಲ ಮನರಂಜನೆ ಅಲ್ಲ; ಅದು ಸಾಹಿತ್ಯ, ಸಂಸ್ಕೃತಿ, ತಂತ್ರಜ್ಞಾನ ಮತ್ತು ಸಮಾಜದ ಸಂಯೋಜಿತ ರೂಪವಾಗಿದೆ. ಕನ್ನಡ ಸಿನಿಮಾರಂಗ ಹೀಗೆ ಇನ್ನಷ್ಟು ಬೆಳೆಯಲಿ, ಹೊಸ ಪ್ರತಿಭೆಗಳು ಹೊರಹೊಮ್ಮಲಿ, ಜಗತ್ತಿನ ವೇದಿಕೆಯಲ್ಲಿ ಇನ್ನಷ್ಟು ಮೆರೆಯಲಿ ಎಂಬುದು ಎಲ್ಲರ ಆಶಯ.
ದಶ್ಮಿತ ಕೆ .ಎಮ್
ಎಮ್.ಜಿ.ಎಮ್ ಕಾಲೇಜು, ಉಡುಪಿ.