Friday, July 24, 2026
Join WhatsApp Group
HomeCrimeನಿಗೂಢವಾಗಿ ನಾಪತ್ತೆಯಾದ ತೇಜಾ ಭಟ್‌ ಎಲ್ಲಿದ್ದಾಳೆ?

ನಿಗೂಢವಾಗಿ ನಾಪತ್ತೆಯಾದ ತೇಜಾ ಭಟ್‌ ಎಲ್ಲಿದ್ದಾಳೆ?

ಯಲ್ಲಾಪುರ/ಬೆಂಗಳೂರು: ವಿದ್ಯಾರಣ್ಯಪುರದ ಇಬ್ಬರು ಪಿಯುಸಿ ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ ರಾಜ್ಯದ ಗಮನ ಸೆಳೆದಿದ್ದು, ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ತನಿಷ್ಕಾ ಮತ್ತು ತೇಜಸ್ವಿನಿ ಎಂಬ ವಿದ್ಯಾರ್ಥಿನಿಯರು ಕಾಣೆಯಾಗಿದ್ದು ಬರೋಬ್ಬರಿ 75 ದಿನಗಳು ಕಳೆದರೂ ಯಾವುದೇ ಸುಳಿವು ಸಿಕ್ಕಿಲ್ಲ.

ಕಳೆದ ಜನವರಿ 31ರಂದು ದ್ವಿತೀಯ ಪಿಯುಸಿ ಓದುತ್ತಿದ್ದ ತನಿಷ್ಕಾ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿನಿ ತೇಜಸ್ವಿನಿ ಮನೆಬಿಟ್ಟು ತೆರಳಿದ್ದಾರೆ. ಅವರ ಕೈಯಲ್ಲಿ ಕೇವಲ ಮೂರು ಸಾವಿರ ರೂಪಾಯಿ ಮಾತ್ರ ಇದ್ದಿತ್ತು ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ, ಇಬ್ಬರೂ ತಮ್ಮ ಮೊಬೈಲ್‌ ಫೋನ್‌ಗಳು ಹಾಗೂ ಎಟಿಎಂ ಕಾರ್ಡ್‌ಗಳನ್ನು ಬಳಸಿಲ್ಲ. ಯಾರನ್ನೂ ಸಂಪರ್ಕಿಸಿಲ್ಲ. ಅವರು ಎಲ್ಲಿದ್ದಾರೆ, ಯಾವ ಸ್ಥಿತಿಯಲ್ಲಿದ್ದಾರೆ ಎಂಬ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ.

ಈ ಪ್ರಕರಣ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಳಿಂದ ಹಿಡಿದು ಸಾರ್ವಜನಿಕ ವಲಯಗಳವರೆಗೆ ನಾನಾ ರೀತಿಯ ಊಹಾಪೋಹಗಳು ನಡೆಯುತ್ತಿವೆ.

ಇದೇ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಹಲವು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ 27 ವರ್ಷದ ಯುವತಿಯೊಬ್ಬಳ ಪ್ರಕರಣ ಮತ್ತೆ ನೆನಪಾಗುತ್ತಿದೆ. ಆಕೆ ಕಾಣೆಯಾಗಿದ್ದು ವರ್ಷಗಳೇ ಕಳೆದರೂ ಇಂದಿಗೂ ಆಕೆ ಎಲ್ಲಿದ್ದಾಳೆ, ಹೇಗಿದ್ದಾಳೆ, ಯಾವ ಸ್ಥಿತಿಯಲ್ಲಿದ್ದಾಳೆ ಎಂಬುದು ತಿಳಿದಿಲ್ಲ.

ಆಕೆ ತೇಜಾ ರಾಮಕೃಷ್ಣ ಭಟ್‌, ವಯಸ್ಸು 27. ತೇಜಾ ರಾಮಕೃಷ್ಣ ಭಟ್‌, ವಯಸ್ಸು 27. ಯಲ್ಲಾಪುರದ ಚಂದಗುಳಿ ಗ್ರಾಮದ ದೇಸಾಯಿಮನೆಕೊಡ್ಲು ಎಂಬಲ್ಲಿಯವಳು. ಎಂ.ಕಾಂ ಪೂರೈಸಿರುವ ಪ್ರತಿಭಾವಂತ ಯುವತಿ. ಹುಬ್ಬಳ್ಳಿಯ ವಿದ್ಯಾನಗರದ ಪಿಜಿ ಒಂದರಲ್ಲಿ ವಾಸವಿದ್ದು ಅಲ್ಲಿಯೇ ಖಾಸಗಿಯಾಗಿ ಆಯುರ್ವೇದಿಕ್‌ ಔಷಧಿ ವಿತರಣಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವಳು.

20-12-2023ರಂದು ಉಪಳೇಶ್ವರದ ತನ್ನ ಮನೆಯಿಂದ ಹುಬ್ಬಳ್ಳಿಗೆ ಹೋಗುತ್ತೇನೆಂದು ಹೊರಟವಳು ನಾಪತ್ತೆಯಾದಳು. ಮೊಬೈಲ್‌ ಸ್ವಿಚಾಫ್‌ ಆಗಿದೆ. ನೆಂಟರ ಮನೆಗೆ ಹೋಗಿಲ್ಲ. ಸ್ನೇಹಿತರ, ಆಪ್ತ ವಲಯದವರಲ್ಲೂ ವಿಚಾರಿಸಿ ಸೋತ ಪಾಲಕರು ನಂತರ ಯಲ್ಲಾಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದರು.

ತೇಜಾ ಭಟ್‌ ನಾಪತ್ತೆಯಾದ ದಿನದಿಂದಲೂ ಆಕೆಯ ತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾಳೆ. ಕುಟುಂಬಸ್ಥರು ಕಣ್ಣಿರಾಗಿದ್ದಾರೆ. ಮನೆಗೆ ಮರಳಲು ಅಥವಾ ಮುಖತಃ ಭೇಟಿಗೆ ಕಷ್ಟವಾದರೂ ಫೋನ್‌ ಮೂಲಕವಾದರೂ ಸಂಪರ್ಕಿಸಿಲ್ಲ.

ಪೊಲೀಸ್‌ ಅಧಿಕಾರಿಗಳು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಿ ಪತ್ತೆಗೆ ಪ್ರಯತ್ನಿಸಿದ್ದಾರೆ. ಅಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಾಗಿದ್ದ ನಾರಾಯಣ ಅವರು ತಮ್ಮ ತಂಡದೊಂದಿಗೆ ಬೇರೆ ಬೇರೆ ರಾಜ್ಯಗಳಲ್ಲೂ ಹುಡುಕಾಟ ನಡೆಸಿದ್ದಾರೆ. ಹುಬ್ಬಳ್ಳಿಯ ಯುವಕನೊಬ್ಬನೊಂದಿಗೆ ಸಲುಗೆಯಿಂದಿದ್ದ ತೇಜಾ ಭಟ್‌ ಕೊನೆಯದಾಗಿ ಕೇವಲ 6-7 ಸೆಕೆಂಡ್‌ ಮಾತ್ರ ಫೋನ್‌ನಲ್ಲಿ ಮಾತನಾಡಿದ್ದಾರೆ. ಅಲ್ಲಿಂದ ಮುಂದೆ ಸ್ವಿಚ್‌ ಆಫ್‌ ಆಗಿರುವ ಆಕೆಯ ನಂಬರ್‌ ಮತ್ತೆಂದೂ ಆನ್‌ ಆಗಿಲ್ಲ.

ಈ ಬಗ್ಗೆ ಸೋಷಿಯಲ್‌ ಮೀಡಿಯಾಗಳಲ್ಲಿ find Tejaa ಎಂಬ ಅಭಿಯಾನವನ್ನೂ ನಡೆಸಿ ಪತ್ತೆಗೆ ಪ್ರಯತ್ನಿಸಿದ್ದಾರೆ. ಆದರೆ, ಆಕೆಯ ಬಗ್ಗೆ ಒಂದೇ ಒಂದು ಸುಳಿವೂ ಲಭ್ಯವಾಗಿಲ್ಲ. ಹಾಗಾದರೆ, ತೇಜಾ ಭಟ್‌ ಹೋಗಿದ್ದೆಲ್ಲಿಗೆ? ನಾಪತ್ತೆಯಾಗಿ ಸರಿಸುಮಾರು ಎರಡುವರೆ ವರ್ಷಗಳೇ ಗತಿಸಿಹೋದರೂ ಆಕೆಯ ಬಗ್ಗೆ ಒಂದೇ ಒಂದು ಸುಳಿವೂ ಲಭ್ಯವಾಗದಿರುವುದು ಪ್ರಕರಣವನ್ನು ಇನ್ನಷ್ಟು ನಿಗೂಢವಾಗಿಸಿದೆ. ಹೊಸ ನಾಪತ್ತೆ ಪ್ರಕರಣಗಳು ಆತಂಕ ಹೆಚ್ಚಿಸುತ್ತಿರುವಾಗ, ಹಳೆಯ ಪ್ರಕರಣಗಳು ಇನ್ನೂ ನಿಗೂಢವಾಗಿಯೇ ಉಳಿದಿರುವುದು ಸಮಾಜದ ಮುಂದೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share