‘ಸರ್ಕಾರವೇ ನಿಷೇಧಿಸಿದ ಅಕೇಶಿಯಾ ನೆಡುತ್ತಿದೆ ಅರಣ್ಯ ಇಲಾಖೆ’
ಶಿರಸಿ: ಪರಿಸರಕ್ಕೆ ಹಾನಿಕಾರಕ ಎಂದು ರಾಜ್ಯ ಸರ್ಕಾರವೇ ನಿಷೇಧಿಸಿರುವ ಅಕೇಶಿಯಾ ಸಸಿಗಳನ್ನು ಅರಣ್ಯ ಇಲಾಖೆ ಇಂದಿಗೂ ಅರಣ್ಯ ಪ್ರದೇಶಗಳಲ್ಲಿ ನೆಡುತ್ತಿರುವುದು ಕಾನೂನು ಉಲ್ಲಂಘನೆಯಾಗಿದ್ದು, ಈ ಪದ್ಧತಿಯನ್ನು ತಕ್ಷಣ ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.
ಅಕೇಶಿಯಾ ಹಾಗೂ ನೀಲಗಿರಿ ಸಸಿಗಳ ನೆಡುವಿಕೆಯನ್ನು ನಿಷೇಧಿಸಲು ರಾಜ್ಯ ಸರ್ಕಾರ ಸುಮಾರು ಹತ್ತು ವರ್ಷಗಳ ಹಿಂದೆ ಕಾನೂನು ಮತ್ತು ಆದೇಶ ಜಾರಿಗೊಳಿಸಿದ್ದರೂ, ಅರಣ್ಯ ಇಲಾಖೆ ಮೀಸಲು ಅರಣ್ಯ, ಅಭಯಾರಣ್ಯ ಸೇರಿದಂತೆ ವಿವಿಧ ಅರಣ್ಯ ಪ್ರದೇಶಗಳಲ್ಲಿ ಅಕೇಶಿಯಾ ನೆಡುತೋಪು ಮುಂದುವರಿಸಿರುವುದು ಖಂಡನೀಯ.
ನೈಸರ್ಗಿಕ ಅರಣ್ಯವಲ್ಲದ ಅಕೇಶಿಯಾ ಮತ್ತು ನೀಲಗಿರಿ ನೆಡುತೋಪುಗಳನ್ನು ಅರಣ್ಯ ಪ್ರದೇಶವೆಂದು ಪರಿಗಣಿಸಿ ಅರಣ್ಯ ವ್ಯಾಪ್ತಿ ಹೆಚ್ಚಾಗಿದೆ ಎಂದು ಅರಣ್ಯ ಇಲಾಖೆ ಹೇಳಿಕೊಳ್ಳುತ್ತಿರುವುದು ಸರಿಯಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಅರಣ್ಯ ಪ್ರದೇಶ 13 ಚದರ ಕಿ.ಮೀ ಹೆಚ್ಚಾಗಿದೆ ಎಂದು ಭಾರತೀಯ ಅರಣ್ಯ ವರದಿಯಲ್ಲಿ ಉಲ್ಲೇಖಿಸಿರುವುದಕ್ಕೂ ಇಂತಹ ನೆಡುತೋಪುಗಳೇ ಕಾರಣವೆಂದು ಅವರು ಹೇಳಿದ್ದಾರೆ.
ಮಲೆನಾಡಿನ ನೈಸರ್ಗಿಕ ಕಾಡುಗಳ ಬದಲಿಗೆ ಅಕೇಶಿಯಾ ನೆಡುವುದರಿಂದ ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಗಂಭೀರ ಹಾನಿ ಉಂಟುಮಾಡುತ್ತಿದೆ. ಬಂಜರು ಭೂಮಿ ಅಭಿವೃದ್ಧಿ ಅಥವಾ ಮಣ್ಣಿನ ಸವಕಳಿ ತಡೆಗಟ್ಟುವ ಉದ್ದೇಶವೂ ಇಲ್ಲದ ಸ್ಥಳಗಳಲ್ಲಿಯೂ ಅಕೇಶಿಯಾ ನೆಡುವುದು ಸಮರ್ಥನೀಯವಲ್ಲ.
ಅಕೇಶಿಯಾ ಮರಗಳಿಂದ ಮಣ್ಣಿನ ಫಲವತ್ತತೆ ಕುಸಿಯುವುದು, ಅಂತರ್ಜಲ ಮಟ್ಟ ಇಳಿಕೆಯಾಗುವುದು, ಪಕ್ಷಿಗಳು ಗೂಡು ಕಟ್ಟದಿರುವುದು, ವನ್ಯಜೀವಿಗಳಿಗೆ ಆಶ್ರಯ ಹಾಗೂ ಆಹಾರದ ಕೊರತೆ ಉಂಟಾಗುವುದು, ಅದರ ಬುಡದಲ್ಲಿ ಇತರ ಸಸ್ಯಗಳು ಮತ್ತು ಹುಲ್ಲು ಬೆಳೆಯದಿರುವುದು ಸೇರಿದಂತೆ ಪರಿಸರದ ಮೇಲೆ ಹಲವು ದುಷ್ಪರಿಣಾಮಗಳು ಉಂಟಾಗುತ್ತವೆ ಎಂಬುದನ್ನು ವಿವಿಧ ವೈಜ್ಞಾನಿಕ ಅಧ್ಯಯನಗಳು ಸೂಚಿಸಿವೆ.
ಆದ್ದರಿಂದ ಪರಿಸರ ವಿರೋಧಿ ಅಕೇಶಿಯಾ ನೆಡುತೋಪುಗಳನ್ನು ಸಂಪೂರ್ಣವಾಗಿ ನಿಷೇಧಿಸಿ, ಮಲೆನಾಡಿನ ನೈಸರ್ಗಿಕ ಅರಣ್ಯಗಳನ್ನು ಸಂರಕ್ಷಿಸುವತ್ತ ಸರ್ಕಾರ ಮತ್ತು ಅರಣ್ಯ ಇಲಾಖೆ ಗಮನಹರಿಸಬೇಕು ಎಂದು ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.