ಅಂಕೋಲಾ: ಈದ್ ಮಿಲಾದ್ ಹಬ್ಬದ ಅಂಗವಾಗಿ ಅಂಕೋಲಾ ಪಟ್ಟಣದಲ್ಲಿ ಬುಧವಾರ ನಡೆದ ಮೆರವಣಿಗೆಯಲ್ಲಿ ಪ್ಯಾಲೆಸ್ಟಿನ್ ರಾಷ್ಟ್ರಧ್ವಜ ಪ್ರದರ್ಶಿಸಿದ ಆರೋಪದ ಮೇಲೆ 29 ವರ್ಷದ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಆ.26ರಂದು ಅಂಕೋಲಾದಲ್ಲಿ ಅದ್ಧೂರಿಯಾಗಿ ಈದ್ ಮಿಲಾದ್ ಆಚರಣೆ ನಡೆದಿತ್ತು. ಬೆಳಗ್ಗೆ ಸುಮಾರು 11.30ರ ವೇಳೆಗೆ ಮೆರವಣಿಗೆ ಕೇಣಿ ಕ್ರಾಸ್ ಹಾಗೂ ಬಂಡಿ ಬಜಾರ್ ರಸ್ತೆಯ ಮೂಲಕ ಸಾಗುತ್ತಿದ್ದ ಸಂದರ್ಭದಲ್ಲಿ ಕೃಷ್ಣಾಪುರದ ವಿಠ್ಠಲ್ ಘಾಟ್ ಪ್ರದೇಶದ ನಿವಾಸಿ ಮೊಹಮ್ಮದ್ ರಜಾ ಶೇಖ್ ಮಹಮದ್ ಅಕ್ಬರ್ (29) ಎಂಬಾತ ಪ್ಯಾಲೆಸ್ಟಿನ್ ಧ್ವಜವನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದಾನೆ.
ಮೆರವಣಿಗೆಯ ವೇಳೆ ಧ್ವಜ ಪ್ರದರ್ಶಿಸುತ್ತಿರುವುದನ್ನು ಗಮನಿಸಿದ ಅಂಕೋಲಾ ಪೊಲೀಸ್ ನಿರೀಕ್ಷಕ ಚಂದ್ರಶೇಖರ್ ಮಠಪತಿ ಅವರು ತಕ್ಷಣ ಸ್ಥಳಕ್ಕೆ ತೆರಳಿ ಧ್ವಜ ಪ್ರದರ್ಶನವನ್ನು ತಡೆದಿದ್ದಾರೆ. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸದಂತೆ ಸ್ಥಳೀಯ ಮುಸ್ಲಿಂ ಸಮುದಾಯದ ಮುಖಂಡರ ಸಹಕಾರವನ್ನೂ ಪಡೆದುಕೊಂಡ ಪೊಲೀಸರು ಧ್ವಜವನ್ನು ಅಲ್ಲಿಂದ ತೆರವುಗೊಳಿಸಿ ವಶಕ್ಕೆ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಕೆಲಕಾಲ ಗಲಾಟೆಯ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಕಂಡುಬಂದರೂ, ಪೊಲೀಸರು ಹಾಗೂ ಸಮುದಾಯದ ಮುಖಂಡರ ಸಮಯಪ್ರಜ್ಞೆಯಿಂದ ಪರಿಸ್ಥಿತಿ ನಿಯಂತ್ರಣದಲ್ಲೇ ಉಳಿಯಿತು. ಸಮುದಾಯದ ಮುಖಂಡರು ಕೂಡ ಯುವಕನಿಗೆ ಸಾರ್ವಜನಿಕ ಮೆರವಣಿಗೆಯಲ್ಲಿ ಇಂತಹ ವರ್ತನೆ ನಡೆಸುವುದು ಸೂಕ್ತವಲ್ಲ ಎಂದು ಬುದ್ಧಿವಾದ ಹೇಳಿದ್ದಾರೆ. ಬಳಿಕ ಈದ್ ಮಿಲಾದ್ ಮೆರವಣಿಗೆ ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತಿಯುತವಾಗಿ ಮುಕ್ತಾಯಗೊಂಡಿದೆ.
ಘಟನೆ ಬಳಿಕ ಪೊಲೀಸರು ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದು, ಪೊಲೀಸ್ ನಿರೀಕ್ಷಕ ಚಂದ್ರಶೇಖರ್ ಮಠಪತಿ ಅವರ ಸುಮೋಟೋ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಮೊಹಮದ್ ರಜಾ ಶೇಖ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಧ್ವಜವನ್ನು ಉದ್ದೇಶಪೂರ್ವಕವಾಗಿಯೇ ಪ್ರದರ್ಶಿಸಲಾಗಿತ್ತೇ ಎಂಬುದೂ ಸೇರಿದಂತೆ ಘಟನೆಯ ಸಂಪೂರ್ಣ ಹಿನ್ನೆಲೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.