ರಸ್ತೆ ಬದಿಯಲ್ಲೇ ಸರಾಯಿ ಅಂಗಡಿ ತೆರೆದಿದ್ದ ಜೋಡಿ ಪೊಲೀಸರ ಬಲೆಗೆ
ಅಂಕೋಲಾ: ವೈನ್ಸ್ ಅಂಗಡಿಗೆ ಹೋಗಿ ಬಾಟಲಿ ತರುವ ಕಷ್ಟವೇ ಬೇಡ ಎಂದುಕೊಂಡರೋ ಏನೋ, ರಸ್ತೆ ಬದಿಯಲ್ಲೇ ಮದ್ಯದ ‘ಮಿನಿ ಬಾರ್’ ತೆರೆದು ಗ್ರಾಹಕರನ್ನು ಕಾಯುತ್ತಿದ್ದ ಇಬ್ಬರು ಯುವಕರು ಕೊನೆಗೆ ಪೊಲೀಸರ ಅತಿಥಿಗಳಾಗಿದ್ದಾರೆ!
ಅಂಕೋಲಾ ತಾಲೂಕಿನ ಕುಂಟಕಣಿ ಕ್ರಾಸ್ ಬಳಿ ಭಾನುವಾರ ರಾತ್ರಿ ರಸ್ತೆ ಬದಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಅಂಕೋಲಾ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಗುರುನಾಥ ಹಾದಿಮನಿ ನೇತೃತ್ವದ ತಂಡ ದಾಳಿ ನಡೆಸಿದೆ.
ದಾಳಿ ವೇಳೆ ಚೇತನ ಶಿವಾನಂದ ನಾಯಕ (23) ಹಾಗೂ ಲತೀಶ ನಾಗರಾಜ ನಾಯಕ (30) ಯಾವುದೇ ಪರವಾನಗಿ ಇಲ್ಲದೆ ಅಂಕೋಲಾದ ವೈನ್ಸ್ ಅಂಗಡಿಯಿಂದ ವಿವಿಧ ಬ್ರ್ಯಾಂಡ್‌ಗಳ ಮದ್ಯ ಖರೀದಿಸಿ, ಸಾರ್ವಜನಿಕ ರಸ್ತೆಯ ಬದಿಯಲ್ಲೇ ಮಾರಾಟ ನಡೆಸುತ್ತಿದ್ದದ್ದು ಬೆಳಕಿಗೆ ಬಂದಿದೆ.
ಆರೋಪಿಗಳ ಬಳಿಯಿಂದ ವಿವಿಧ ಬ್ರ್ಯಾಂಡ್‌ಗಳ ಟೆಟ್ರಾ ಪ್ಯಾಕ್, ಬಾಟಲಿ ಹಾಗೂ ಟಿನ್‌ಗಳಲ್ಲಿ ಇದ್ದ ಒಟ್ಟು ₹15,065 ಮೌಲ್ಯದ ಸರಾಯಿ ವಶಕ್ಕೆ ಪಡೆಯಲಾಗಿದೆ. “ಯಾವ ಬ್ರ್ಯಾಂಡ್ ಬೇಕು?” ಎಂದು ಕೇಳುವಷ್ಟರ ಮಟ್ಟಿಗೆ ಸ್ಟಾಕ್ ಮಾಡಿಕೊಂಡಿದ್ದರು ಎನ್ನುವುದು ವಶಪಡಿಸಿಕೊಂಡ ಮದ್ಯದ ಪ್ರಮಾಣವೇ ಹೇಳುತ್ತಿದೆ!
ಪ್ರಕರಣದಲ್ಲಿ ಸಂಬಂಧಿತ ವೈನ್ಸ್ ಅಂಗಡಿಯ ಮಾಲೀಕರನ್ನೂ ಆರೋಪಿಯಾಗಿ ಸೇರಿಸಲಾಗಿದ್ದು, ಅಕ್ರಮ ಸಾಗಾಟ ಹಾಗೂ ಮಾರಾಟಕ್ಕೆ ನೆರವಾದ ಆರೋಪದಡಿ ತನಿಖೆ ಆರಂಭಿಸಲಾಗಿದೆ.