Friday, July 24, 2026
Join WhatsApp Group
HomeLocal Newsನಾಳೆ ಪತ್ರಿಕಾ ದಿನಾಚರಣೆ: ಮೂವರು ಹಿರಿಯ ಸಾಧಕರಿಗೆ ಸನ್ಮಾನ

ನಾಳೆ ಪತ್ರಿಕಾ ದಿನಾಚರಣೆ: ಮೂವರು ಹಿರಿಯ ಸಾಧಕರಿಗೆ ಸನ್ಮಾನ

ಯಲ್ಲಾಪುರ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಯಲ್ಲಾಪುರ ಹಾಗೂ ಸವಣಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಜುಲೈ 21ರಂದು ಬೆಳಿಗ್ಗೆ 11 ಗಂಟೆಗೆ ಸವಣಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪತ್ರಿಕಾ ದಿನಾಚರಣೆ, ಸಾಧಕರಿಗೆ ಸನ್ಮಾನ ಹಾಗೂ ವನಮಹೋತ್ಸವ ಕಾರ್ಯಕ್ರಮ ನಡೆಯಲಿದೆ.

ಈ ಸಂದರ್ಭದಲ್ಲಿ ಪತ್ರಿಕೋದ್ಯಮ, ಸಾಮಾಜಿಕ ಸೇವೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ಹಿರಿಯ ಪತ್ರಕರ್ತ ನರಸಿಂಹ ಸಾತೊಡ್ಡಿ, ಸಾಮಾಜಿಕ ಕಾರ್ಯಕರ್ತ ಹಾಗೂ ಪತ್ರಕರ್ತ ಕೆ.ಎಸ್. ಭಟ್ಟ ಆನಗೋಡ ಮತ್ತು ಹಿರಿಯ ಪತ್ರಕರ್ತ, ವ್ಯಂಗ್ಯಚಿತ್ರಕಾರ ನಾಗೇಂದ್ರ ಯಲ್ಲಾಪುರ ಅವರನ್ನು ಗೌರವಿಸಿ ಸನ್ಮಾನಿಸಲಾಗುತ್ತಿದೆ.

ಮೂರು ದಶಕಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನರಸಿಂಹ ಸಾತೊಡ್ಡಿ ಅವರ ಬದುಕು ಹೋರಾಟ ಮತ್ತು ನಿರ್ಭೀತ ಪತ್ರಿಕೋದ್ಯಮದ ಪ್ರತೀಕ.

ಕೊಡಸಳ್ಳಿ ಹೋರಾಟದ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಪ್ರಮೋದ ಹೆಗಡೆ ಅವರೊಂದಿಗೆ ಕಾರಾಗೃಹ ಶಿಕ್ಷೆ ಅನುಭವಿಸಿದ ಘಟನೆಯೇ ಅವರ ಬದುಕಿನಲ್ಲಿ ಹೋರಾಟದ ಕಿಡಿ ಹೊತ್ತಿಸಿದ ಘಟ್ಟವಾಗಿದ್ದು, ಅಲ್ಲಿಂದಲೇ ಪರಿಸರ ಮತ್ತು ಜನಪರ ಹೋರಾಟಗಳನ್ನು ಬದುಕಿನ ಧ್ಯೇಯವನ್ನಾಗಿ ರೂಪಿಸಿಕೊಂಡರು. ಇಂದಿಗೂ ಬೇಡ್ತಿ ಹಾಗೂ ವರದಾ ನದಿಗಳ ಉಳಿವಿಗಾಗಿ ನಡೆಯುತ್ತಿರುವ ಹೋರಾಟಗಳಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ.

‘ಧ್ಯೇಯನಿಷ್ಠ ಪತ್ರಕರ್ತ’ ಪತ್ರಿಕೆಯಲ್ಲಿ ಸುಮಾರು ಇಪ್ಪತ್ತು ವರ್ಷಗಳ ಕಾಲ ಪ್ರಕಟವಾದ ಅವರ ತನಿಖಾ ವರದಿಗಳು ಹಾಗೂ ರಾಜಕೀಯ ವಿಶ್ಲೇಷಣೆಗಳು ಅಪಾರ ಜನಮನ್ನಣೆ ಗಳಿಸಿದ್ದವು. ‘ಆರು ಹೆಂಡಿರ ವಲ್ಲಭ’, ‘ರಸ್ತೆಗಳ ಕರ್ಮಕಾಂಡ’, ‘ಜಲಾನಯನ ಕರ್ಮಕಾಂಡ’ ಮೊದಲಾದ ಸರಣಿಗಳ ಮೂಲಕ ಸಮಾಜದ ಮುಖವಾಡಗಳು, ಆಡಳಿತದ ವೈಫಲ್ಯಗಳು ಮತ್ತು ಭ್ರಷ್ಟಾಚಾರವನ್ನು ನಿರ್ದಾಕ್ಷಿಣ್ಯವಾಗಿ ಬಯಲಿಗೆಳೆದಿದ್ದರು.

ಸರ್ಕಾರಿ ವ್ಯವಸ್ಥೆಯ ಲೋಪಗಳು, ಅಕ್ರಮ ಗಣಿಗಾರಿಕೆ, ರಾಜಕೀಯ ದ್ವಂದ್ವ, ಅರಣ್ಯ ಲೂಟಿ, ಪರಿಸರ ನಾಶ ಸೇರಿದಂತೆ ಅನೇಕ ಸೂಕ್ಷ್ಮ ವಿಷಯಗಳನ್ನು ನಿರ್ಭೀತಿಯಿಂದ ಬೆಳಕಿಗೆ ತಂದಿದ್ದರು. ಲಾಲಗುಳಿ, ಸಾವಗದ್ದೆ, ವಜ್ರಳ್ಳಿ, ಎಮ್ಮಳ್ಳಿ, ನಂದೊಳ್ಳಿ, ಬೆಳಖಂಡ, ಕೋಣೆಮನೆ ಭಾಗಗಳ ಅಕ್ರಮ ಅರಣ್ಯ ನಾಶದ ವಿರುದ್ಧ ಅವರ ವರದಿಗಳು ವ್ಯಾಪಕ ಚರ್ಚೆಗೆ ಕಾರಣವಾಗಿದ್ದವು.

 ಅಕ್ರಮ ಕಲ್ಲು ಗಣಿಗಾರಿಕೆಯನ್ನು ವಿರೋಧಿಸಿ ಹೋರಾಟ ನಡೆಸಿದ ವೇಳೆ ಬೆದರಿಕೆಗಳನ್ನು ಎದುರಿಸಿ, ಮನೆ ಮೇಲೆ ಕಲ್ಲು ತೂರಾಟ ನಡೆದ ಪರಿಣಾಮ ಕೆಲಕಾಲ ಪೊಲೀಸ್ ರಕ್ಷಣೆಯಲ್ಲೂ ಬದುಕಬೇಕಾದ ಸಂದರ್ಭ ಬಂದಿದ್ದರೂ ಅವರು ತಮ್ಮ ನಿಲುವಿನಿಂದ ಹಿಂದೆ ಸರಿಯಲಿಲ್ಲ. ನಿಖರತೆ, ಪ್ರಾಮಾಣಿಕತೆ ಮತ್ತು ಸಮಾಜಮುಖಿ ದೃಷ್ಟಿಕೋನವನ್ನು ಬರವಣಿಗೆಯ ಜೀವಾಳವಾಗಿಸಿಕೊಂಡ ಅವರು, ಓದುಗರಲ್ಲಿ ವಿಶಿಷ್ಟ ವಿಶ್ವಾಸ ಗಳಿಸಿದ ಪತ್ರಕರ್ತರಾಗಿದ್ದಾರೆ.

ಕೆ.ಎಸ್. ಭಟ್ಟ ಆನಗೋಡ ಅವರು ಎರಡು ದಶಕಗಳಿಗೂ ಹೆಚ್ಚು ಕಾಲ ಸಾಮಾಜಿಕ ಸೇವೆ, ಸಾಕ್ಷರತೆ, ನೈರ್ಮಲ್ಯ, ಗ್ರಾಮೀಣಾಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದು, ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರಪತಿ ಪ್ರತಿಭಾ ಪಾಟೀಲರಿಂದ ‘ಸತ್ಯೇನ ಮಿತ್ರ’ ರಾಷ್ಟ್ರ ಪ್ರಶಸ್ತಿ ಸೇರಿದಂತೆ ಹಲವು ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಹಿರಿಯ ಪತ್ರಕರ್ತ ಹಾಗೂ ವ್ಯಂಗ್ಯಚಿತ್ರಕಾರ ನಾಗೇಂದ್ರ ಯಲ್ಲಾಪುರ ಅವರ ಆರು ಸಾವಿರಕ್ಕೂ ಹೆಚ್ಚು ವ್ಯಂಗ್ಯಚಿತ್ರಗಳು ಹಾಗೂ ಸಾವಿರಕ್ಕೂ ಅಧಿಕ ಲೇಖನಗಳು ರಾಜ್ಯದ ಹಲವು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ವಿಶಿಷ್ಟ ಕೊಡುಗೆಯೊಂದಿಗೆ 24ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿರುವ ಅವರು ರಾಷ್ಟ್ರೀಯ ಮಟ್ಟದಲ್ಲಿಯೂ ಪ್ರಶಸ್ತಿ ಪಡೆದಿದ್ದಾರೆ. ಈ ಮೂವರೂ ಸಾಧಕರಿಗೆ ʻಕೆನರಾ ನೆಕ್ಸ್ಟ್‌ʼ ಪರವಾಗಿ ಅಭಿನಂದನೆಗಳು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share