ಕಾರವಾರ: ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಪಡಿತರ ಅಕ್ಕಿಯನ್ನು ಈ ಬಾರಿ ಆಗಸ್ಟ್ ತಿಂಗಳಲ್ಲೇ ಒಟ್ಟಿಗೆ ವಿತರಿಸಲಾಗುತ್ತಿದೆ.
ಕೇಂದ್ರ ಸರ್ಕಾರದ ನಿರ್ದೇಶನದಂತೆ ಉತ್ತರ ಕನ್ನಡ ಜಿಲ್ಲೆಯ ಅಂತ್ಯೋದಯ ಅನ್ನ ಯೋಜನೆಯ ಫಲಾನುಭವಿಗಳಿಗೆ ಪ್ರತಿ ಪಡಿತರ ಚೀಟಿಗೆ ಒಟ್ಟು 70 ಕೆಜಿ ಅಕ್ಕಿ ನೀಡಲಾಗುತ್ತದೆ. ಅಂದರೆ ಆಗಸ್ಟ್‌ಗೆ 35 ಕೆಜಿ ಹಾಗೂ ಸೆಪ್ಟೆಂಬರ್‌ಗೆ 35 ಕೆಜಿ ಸೇರಿ ಒಟ್ಟು 70 ಕೆಜಿ ಅಕ್ಕಿ ವಿತರಿಸಲಾಗುತ್ತಿದೆ.
ಅದೇ ರೀತಿ ಆದ್ಯತಾ ಕುಟುಂಬಗಳ (ಬಿಪಿಎಲ್) ಪಡಿತರ ಚೀಟಿದಾರರಿಗೆ ಪ್ರತಿ ಸದಸ್ಯರಿಗೆ ಒಟ್ಟು 10 ಕೆಜಿ ಅಕ್ಕಿ ಸಿಗಲಿದೆ. ಆಗಸ್ಟ್ ತಿಂಗಳ 5 ಕೆಜಿ ಹಾಗೂ ಸೆಪ್ಟೆಂಬರ್ ತಿಂಗಳ 5 ಕೆಜಿ ಸೇರಿ ಈ ಪ್ರಮಾಣವನ್ನು ವಿತರಿಸಲಾಗುತ್ತಿದೆ.
ಜಿಲ್ಲೆಯಲ್ಲಿ 15,818 ಅಂತ್ಯೋದಯ ಅನ್ನ ಪಡಿತರ ಚೀಟಿಗಳು ಹಾಗೂ 2,88,833 ಪಿಎಚ್‌ಎಚ್ (ಬಿಪಿಎಲ್) ಪಡಿತರ ಚೀಟಿಗಳ ಫಲಾನುಭವಿಗಳಿಗೆ ಈ ಸೌಲಭ್ಯ ದೊರೆಯಲಿದೆ.
ಸದ್ಯ ಜಿಲ್ಲೆಯ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ನಡೆಯುತ್ತಿದ್ದು, ಫಲಾನುಭವಿಗಳು ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಪಡಿತರವನ್ನು ಪಡೆಯಲು ಎರಡೂ ತಿಂಗಳಿಗೆ ಪ್ರತ್ಯೇಕವಾಗಿ ಬೆರಳಚ್ಚು ನೀಡಿ ಉಚಿತವಾಗಿ ಆಹಾರಧಾನ್ಯ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.
ಪಡಿತರ ವಿತರಿಸುವ ಸಂದರ್ಭದಲ್ಲಿ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಅಕ್ಕಿ ನೀಡುವುದು ಅಥವಾ ಫಲಾನುಭವಿಗಳಿಂದ ಹಣ ಪಡೆಯುವುದು ಕಂಡುಬಂದರೆ ಸುಮ್ಮನಿರಬೇಡಿ. ಸಂಬಂಧಪಟ್ಟ ತಾಲೂಕಿನ ಆಹಾರ ಶಿರಸ್ತೇದಾರರು, ಆಹಾರ ನಿರೀಕ್ಷಕರಿಗೆ ಅಥವಾ ಉಪನಿರ್ದೇಶಕರು, ಆಹಾರ ನಾಗರಿಕ ಸರಬರಾಜು ಇಲಾಖೆಗೆ ದೂರು ನೀಡಬಹುದು. ಜೊತೆಗೆ ಉಚಿತ ಸಹಾಯವಾಣಿ 1967ಕ್ಕೆ ಕರೆ ಮಾಡಿ ದೂರು ದಾಖಲಿಸಬಹುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.