ಬನವಾಸಿ: ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ಒಂದಾದ ಬನವಾಸಿಗೆ ಪ್ರತಿದಿನ ನೂರಾರು ಪ್ರಯಾಣಿಕರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮೂಲಕ ಆಗಮಿಸುತ್ತಾರೆ. ಆದರೆ, ಅವರನ್ನು ಸ್ವಾಗತಿಸುತ್ತಿರುವುದು ಸುಸಜ್ಜಿತ ಬಸ್ ನಿಲ್ದಾಣವಲ್ಲ, ಬದಲಾಗಿ ಪ್ರವೇಶ ದ್ವಾರದ ಎರಡೂ ಬದಿಯಲ್ಲಿ ಬಾಯಿ ತೆರೆದಿರುವ ಬೃಹತ್ ಗುಂಡಿಗಳು!
ಮಳೆಯಿಂದ ಮತ್ತಷ್ಟು ಹದಗೆಟ್ಟಿರುವ ಈ ರಸ್ತೆ ಈಗ ಬಸ್ಗಳ ಓಡಾಟಕ್ಕೂ, ಪ್ರಯಾಣಿಕರ ಸುರಕ್ಷತೆಗೂ ಸವಾಲಾಗಿ ಪರಿಣಮಿಸಿದೆ.
ಬಸ್ ನಿಲ್ದಾಣದ ಪ್ರವೇಶ ದ್ವಾರ ಹಾಗೂ ಆವರಣದಲ್ಲಿ ಡಾಂಬರು ಸಂಪೂರ್ಣ ಕಿತ್ತು ಹೋಗಿದ್ದು, ಸಣ್ಣದಾಗಿದ್ದ ಗುಂಡಿಗಳು ನಿರಂತರ ಮಳೆಯಿಂದ ಎರಡರಿಂದ ಮೂರು ಅಡಿ ಆಳದ ಹೊಂಡಗಳಾಗಿ ಮಾರ್ಪಟ್ಟಿವೆ. ಗುಂಡಿಗಳಲ್ಲಿ ಮಳೆ ನೀರು ತುಂಬಿರುವುದರಿಂದ ಅವುಗಳ ಆಳ ಅಂದಾಜಿಸಲು ಸಾಧ್ಯವಾಗದೆ ದ್ವಿಚಕ್ರ ವಾಹನ ಸವಾರರು, ವಿದ್ಯಾರ್ಥಿಗಳು ಹಾಗೂ ಪಾದಚಾರಿಗಳು ಅಪಾಯದ ನಡುವೆ ಸಂಚರಿಸುವಂತಾಗಿದೆ.
ಪ್ರತಿದಿನ ನೂರಾರು ಬಸ್ಗಳು ಈ ಮಾರ್ಗದಲ್ಲೇ ಸಂಚರಿಸುತ್ತಿವೆ. ಆದರೆ, ಬಸ್ ಚಾಲಕರು ಮತ್ತು ನಿರ್ವಾಹಕರು ಗುಂಡಿಗಳನ್ನು ತಪ್ಪಿಸಿಕೊಂಡು ವಾಹನ ಚಲಾಯಿಸುವುದೇ ದೊಡ್ಡ ಸವಾಲಾಗಿದೆ. ಮಳೆ ನೀರು ತುಂಬಿದ ಗುಂಡಿಗಳ ಮೇಲೆ ಬಸ್ಗಳು ಸಾಗುವಾಗ ನೀರು ಪಾದಚಾರಿಗಳ ಮೇಲೆ ಚಿಮ್ಮುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಥಳೀಯರ ಪ್ರಕಾರ, ಈ ಸಮಸ್ಯೆ ಹೊಸದೇನಲ್ಲ. ಹಲವು ಬಾರಿ ಘಟಕ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಯ ಗಮನಕ್ಕೆ ತಂದರೂ ಇದುವರೆಗೆ ಶಾಶ್ವತ ಪರಿಹಾರ ದೊರೆತಿಲ್ಲ. ಹೀಗಾಗಿ, ಅನಾಹುತ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ರಸ್ತೆ ದುರಸ್ತಿಗೆ ಮುಂದಾಗಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕೆಎಸ್ಆರ್ಟಿಸಿ ಶಿರಸಿ ಘಟಕ ವ್ಯವಸ್ಥಾಪಕಿ ಸವಿತಾ ಪಾಟೀಲ್, “ಬಸ್ ನಿಲ್ದಾಣದ ಒಳಭಾಗ ಹಾಗೂ ಹೊರಭಾಗದಲ್ಲಿ ಗುಂಡಿಗಳು ನಿರ್ಮಾಣವಾಗಿರುವುದು ಗಮನಕ್ಕೆ ಬಂದಿದೆ. ನಿಲ್ದಾಣದ ಮುಂಭಾಗದ ರಸ್ತೆಯ ಗುಂಡಿಯನ್ನು ಗ್ರಾಮ ಪಂಚಾಯಿತಿಯಿಂದ ಮುಚ್ಚಬೇಕು. ಒಳಭಾಗದ ಗುಂಡಿಗಳ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಬಳಿಕ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು” ಎಂದಿದ್ದಾರೆ.
ಇನ್ನು ಬನವಾಸಿ ಗ್ರಾಮ ಪಂಚಾಯಿತಿಯ ಆಡಳಿತಾಧಿಕಾರಿ ಬಸವರಾಜ ಬಳ್ಳಾರಿ ಅವರನ್ನು ಸಂಪರ್ಕಿಸಿದ್ರೆ, ಪಂಚಾಯಿತಿ ಪಿಡಿಓ ಅವರೊಂದಿಗೆ ಚರ್ಚಿಸಿ ಶೀಘ್ರದಲ್ಲೇ ದುರಸ್ತಿ ಕಾರ್ಯ ಆರಂಭಿಸಲಾಗುವುದು” ಎಂದು ಭರವಸೆ ನೀಡಿದ್ದಾರೆ. ಒಟ್ಟಿನಲ್ಲಿ, ಎಂದು ಅದೇವು ಮುಕ್ತ…. ಎಂಬಂತಾಗಿದೆ.
ವರದಿ: ಸುಧೀರ್ ನಾಯರ್, ಬನವಾಸಿ.