ಬನವಾಸಿ: ಕುಟುಂಬದ ನಿರ್ವಹಣೆ ಹಾಗೂ ಉತ್ತಮ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಸದಸ್ಯೆ ಭಾರತಿ ಮಿರ್ಜಿ ಹೇಳಿದರು.
ಸಮೀಪದ ಅಜ್ಜರಣಿ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶ್ರೀಗಂಧ ಮಹಿಳಾ ಜ್ಞಾನವಿಕಾಸ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಕುರಿತ ಮಾಹಿತಿ ಕಾರ್ಯಕ್ರಮ ಹಾಗೂ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕುಟುಂಬದ ಆರ್ಥಿಕ ನಿರ್ವಹಣೆ, ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಕಾಳಜಿ, ಮನೆಯ ಜವಾಬ್ದಾರಿಗಳ ನಿರ್ವಹಣೆ ಸೇರಿದಂತೆ ಕುಟುಂಬದ ಪ್ರತಿಯೊಂದು ಹಂತದಲ್ಲೂ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸಾಂಪ್ರದಾಯಿಕವಾಗಿ ಮನೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ಮಹಿಳೆಯರು ಇಂದು ಉದ್ಯೋಗ, ಸ್ವಯಂ ಉದ್ಯೋಗ, ಕೃಷಿ, ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಕುಟುಂಬದ ಆರ್ಥಿಕ ಪ್ರಗತಿಗೂ ಕೊಡುಗೆ ನೀಡುತ್ತಿದ್ದಾರೆ ಎಂದರು.
ಬದಲಾಗುತ್ತಿರುವ ಜೀವನಶೈಲಿಯಲ್ಲಿ ಮಹಿಳೆಯರ ಮೇಲಿನ ಜವಾಬ್ದಾರಿಗಳು ಮತ್ತಷ್ಟು ಹೆಚ್ಚಾಗಿವೆ. ಮನೆ ಹಾಗೂ ಉದ್ಯೋಗ ಎರಡನ್ನೂ ಸಮತೋಲನದಿಂದ ನಿಭಾಯಿಸುತ್ತಿರುವ ಮಹಿಳೆಯರಿಗೆ ಕುಟುಂಬದ ಇತರ ಸದಸ್ಯರು ಅಗತ್ಯ ಸಹಕಾರ ನೀಡಬೇಕು. ಕುಟುಂಬ ನಿರ್ವಹಣೆ ಕೇವಲ ಮಹಿಳೆಯರ ಜವಾಬ್ದಾರಿಯಲ್ಲ. ಪುರುಷರು ಮತ್ತು ಮಹಿಳೆಯರು ಸಮಾನವಾಗಿ ಜವಾಬ್ದಾರಿಯನ್ನು ಹಂಚಿಕೊಂಡಾಗ ಮಾತ್ರ ಕುಟುಂಬದಲ್ಲಿ ಸಂತಸ, ನೆಮ್ಮದಿ ಹಾಗೂ ಪರಸ್ಪರ ಗೌರವ ನೆಲೆಸಲು ಸಾಧ್ಯ ಎಂದು ಭಾರತಿ ಮಿರ್ಜಿ ಹೇಳಿದರು.
ಮಹಿಳಾ ಜ್ಞಾನವಿಕಾಸ ಕೇಂದ್ರದ ತಾಲೂಕು ಸಮನ್ವಯಾಧಿಕಾರಿ ಮಲ್ಲಿಕಾ ಶೆಟ್ಟಿ ಮಾತನಾಡಿ, ಮಹಿಳೆಯರ ಶ್ರಮ, ತ್ಯಾಗ ಹಾಗೂ ಕೊಡುಗೆಯನ್ನು ಗುರುತಿಸಿ ಅವರಿಗೆ ನಿರ್ಧಾರ ಕೈಗೊಳ್ಳುವ ಅವಕಾಶ ಮತ್ತು ಅಗತ್ಯ ಗೌರವ ನೀಡಬೇಕು. ಮಹಿಳೆಯರು ಸಬಲರಾದಾಗ ಕುಟುಂಬವೂ ಸಬಲವಾಗುತ್ತದೆ. ಕುಟುಂಬ ಸಬಲವಾದಾಗ ಸಮಾಜದ ಅಭಿವೃದ್ಧಿಯೂ ಸಾಧ್ಯವಾಗುತ್ತದೆ ಎಂದರು.
ಶ್ರೀಗಂಧ ಮಹಿಳಾ ಜ್ಞಾನವಿಕಾಸ ಕೇಂದ್ರದ ಸದಸ್ಯೆ ಅನ್ನಪೂರ್ಣ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬನವಾಸಿ ವಲಯ ಮೇಲ್ವಿಚಾರಕಿ ಸುನಂದ ನಾಯ್ಕ್, ಒಕ್ಕೂಟದ ಅಧ್ಯಕ್ಷೆ ಮಾಲಿನಿ, ಸೇವಾ ಪ್ರತಿನಿಧಿ ವೀಣಾ ಹಾಗೂ ಶ್ರೀಗಂಧ ಮಹಿಳಾ ಜ್ಞಾನವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.