ಬಂಗಾರಮಕ್ಕಿಯಲ್ಲಿ ಜೀವವೈವಿಧ್ಯ ಸಂರಕ್ಷಣೆ ಕುರಿತು ಚಿಂತನ–ಮಂಥನ
ಬಂಗಾರಮಕ್ಕಿ: ಪಶ್ಚಿಮ ಘಟ್ಟದ ಜೀವವೈವಿಧ್ಯ, ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಯ ಅಗತ್ಯದ ಕುರಿತು ವಿದ್ಯಾರ್ಥಿಗಳು, ಪರಿಸರಾಸಕ್ತರು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ವಿಶೇಷ ಚಿಂತನ–ಮಂಥನ ಕಾರ್ಯಕ್ರಮ ನಡೆಯಿತು.
ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತು ನಡೆಯುತ್ತಿರುವ ವಿಚಾರ ಸಂಕಿರಣಗಳ ಸರಣಿಯ ಭಾಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಿಚಾರ ಸಂಕಿರಣದಲ್ಲಿ ವನ್ಯಜೀವಿ ತಜ್ಞ ವಿನಾಯಕ ಎಸ್.ಜಿ., ಪರಿಸರ ಸಂರಕ್ಷಕ ಅಖಿಲೇಶ್ ಚಿಪ್ಳಿ ಹಾಗೂ ಪರಿಸರ ವಿಜ್ಞಾನಿ ಡಾ. ಎನ್.ಎಂ. ಗುರುಪ್ರಸಾದ್ ಭಾಗವಹಿಸಿ ಪಶ್ಚಿಮ ಘಟ್ಟದ ಜೀವವೈವಿಧ್ಯ, ಅರಣ್ಯ ಸಂರಕ್ಷಣೆ, ವನ್ಯಜೀವಿಗಳ ಆವಾಸಸ್ಥಾನ, ಮಾನವ–ವನ್ಯಜೀವಿ ಸಂಘರ್ಷ ಹಾಗೂ ಶರಾವತಿಯ ಉಪನದಿಗಳ ಕುರಿತು ಮಾಹಿತಿ ಹಂಚಿಕೊಂಡರು.
ಪಶ್ಚಿಮ ಘಟ್ಟದ ಅರಣ್ಯ ಪ್ರದೇಶಗಳು ಛಿದ್ರಗೊಳ್ಳುತ್ತಿರುವುದು, ವನ್ಯಜೀವಿಗಳ ಆವಾಸಸ್ಥಾನಗಳು ಕಡಿಮೆಯಾಗುತ್ತಿರುವುದು ಹಾಗೂ ಮಾನವ–ವನ್ಯಜೀವಿ ಸಂಘರ್ಷ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರಿಸರ ಸಮತೋಲನ ಕಾಪಾಡುವ ಅಗತ್ಯವನ್ನು ತಜ್ಞರು ವಿವರಿಸಿದರು. ಶರಾವತಿ ಕಣಿವೆಯಲ್ಲಿ ಪ್ರಸ್ತಾಪಿತವಾಗಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಸೇರಿದಂತೆ ಬೃಹತ್ ಅಭಿವೃದ್ಧಿ ಯೋಜನೆಗಳು ಪರಿಸರ ಹಾಗೂ ಜಲಸಂಪನ್ಮೂಲಗಳ ಮೇಲೆ ಬೀರಬಹುದಾದ ದೀರ್ಘಕಾಲೀನ ಪರಿಣಾಮಗಳ ಬಗ್ಗೆಯೂ ಚರ್ಚೆ ನಡೆಯಿತು.
ʻಪಶ್ಚಿಮ ಘಟ್ಟ ಉಳಿದರೆ ಮಾತ್ರ ನಮ್ಮ ನದಿಗಳು, ಕೃಷಿ, ಹವಾಮಾನ ಮತ್ತು ಮುಂದಿನ ಪೀಳಿಗೆಯ ಬದುಕು ಸುರಕ್ಷಿತವಾಗಿರುತ್ತದೆ. ಜೀವವೈವಿಧ್ಯ ನಮ್ಮ ಶತ್ರುವಲ್ಲ. ಅವುಗಳಿಗೂ ಈ ಭೂಮಿಯಲ್ಲಿ ಬದುಕುವ ಹಕ್ಕಿದೆ. ಪ್ರಕೃತಿಯ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿʼ ಎಂದು ಶ್ರೀ ಮಾರುತಿ ಗುರೂಜಿಯವರು ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಜ್ಞರೊಂದಿಗೆ ಸಂವಾದ ನಡೆಸಿದರು. ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆ, ಪಶ್ಚಿಮ ಘಟ್ಟದ ಭವಿಷ್ಯ ಹಾಗೂ ಅಭಿವೃದ್ಧಿ ಯೋಜನೆಗಳ ಪರಿಣಾಮಗಳ ಕುರಿತು ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿ ತಜ್ಞರಿಂದ ಉತ್ತರ ಪಡೆದರು.
ಪಶ್ಚಿಮ ಘಟ್ಟದ ಸಂರಕ್ಷಣೆ ಕೇವಲ ಸರ್ಕಾರ ಅಥವಾ ಪರಿಸರ ಸಂಘಟನೆಗಳ ಜವಾಬ್ದಾರಿಯಲ್ಲ. ಸ್ಥಳೀಯರು, ವಿದ್ಯಾರ್ಥಿಗಳು, ಯುವಜನರು, ರೈತರು ಸೇರಿದಂತೆ ಸಮಾಜದ ಪ್ರತಿಯೊಬ್ಬರೂ ಪ್ರಕೃತಿ ಮತ್ತು ಜೀವವೈವಿಧ್ಯ ಉಳಿಸುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂಬ ಸಂದೇಶ ಕಾರ್ಯಕ್ರಮದಲ್ಲಿ ಮೂಡಿಬಂತು.
ಶೈಲೇಶ್ ಕಾರ್ಯಕ್ರಮ ನಿರೂಪಿಸಿದರು.