ಮಾಗೋಡ ಜಲಪಾತ, ಚಂದಗುಳಿ ದೇವಸ್ಥಾನಕ್ಕೆ ಪ್ರವಾಸಿಗರ ದಂಡು; ವಾಹನ ಸ್ಕಿಡ್, ಕೆಲಕಾಲ ಟ್ರಾಫಿಕ್ ಜಾಮ್
ಯಲ್ಲಾಪುರ: ಸತತ ರಜೆಗಳ ಹಿನ್ನೆಲೆಯಲ್ಲಿ ಚಂದಗುಳಿ ಘಂಟೆ ಗಣಪತಿ ದೇವಸ್ಥಾನ, ಜೇನುಕಲ್ಲು ಗುಡ್ಡ ಹಾಗೂ ಮಾಗೋಡ ಜಲಪಾತಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ರಸ್ತೆ ಸಂಚಾರದ ಮೇಲೂ ಇದರ ಪರಿಣಾಮ ಕಂಡುಬಂದಿದೆ.
ಭಾನುವಾರ ಪ್ರವಾಸಿಗರ ವಾಹನಗಳ ಪೈಕಿ ಎರಡು–ಮೂರು ವಾಹನಗಳು ರಸ್ತೆ ಅಂಚಿನ ಮಣ್ಣಿಗೆ ಇಳಿದು ಸ್ಕಿಡ್ ಆಗಿ ಸಿಲುಕಿಕೊಂಡಿದ್ದರಿಂದ ಕೆಲಕಾಲ ಸಂಚಾರಕ್ಕೆ ತೊಂದರೆಯಾಯಿತು. ವಾಹನಗಳನ್ನು ರಸ್ತೆಗೆ ಮರಳಿ ತರಲು ದೊಡ್ಡ ಟ್ರ್ಯಾಕ್ಟರ್, ಕ್ರೇನ್ ಹಾಗೂ ಜೆಸಿಬಿ ಬಳಸಿ ಹರಸಾಹಸ ನಡೆಸಬೇಕಾಯಿತು. ಕೆಲಕಾಲ ಮೂರೂ ಕಡೆಯ ರಸ್ತೆಯಲ್ಲಿ ಪ್ರವಾಸಿಗರ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ದೈನಂದಿನ ಕೆಲಸ ಕಾರ್ಯಗಳಿಗೆ ತೆರಳುವ ಸ್ಥಳೀಯರಿಗೂ ಇದರಿಂದ ಅನಾನುಕೂಲವಾಯಿತು. ಈ ವೇಳೆ ಮಾಗೋಡ ಕಾಲೋನಿಯ ಯುವಕರು ಸಹ ಸ್ಥಳಕ್ಕೆ ತೆರಳಿ ವಾಹನ ತೆರವು ಕಾರ್ಯಕ್ಕೆ ಸಹಕರಿಸಿದರು.
ಜಲಪಾತ ಸೇರಿದಂತೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ ಸೇರಿದಂತೆ ರಜೆ ದಿನಗಳಲ್ಲಿ ಸೂಕ್ತ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
ವಾಹನ ನಿಲುಗಡೆ, ಸಂಚಾರ ನಿಯಂತ್ರಣ ಹಾಗೂ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದರೆ ಇಂತಹ ಸಂದರ್ಭಗಳಲ್ಲಿ ಟ್ರಾಫಿಕ್ ಸಮಸ್ಯೆ ಮಾತ್ರವಲ್ಲದೆ ಸಂಭವನೀಯ ಅನಾಹುತಗಳನ್ನೂ ತಡೆಯಲು ಅನುಕೂಲವಾಗಲಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಗ್ರಾಮಸಭೆ ಸೇರಿದಂತೆ ವಿವಿಧ ಸಭೆಗಳಲ್ಲಿ ಹಲವು ಬಾರಿ ಗಮನ ಸೆಳೆದಿದ್ದರೂ, ಬೇಡಿಕೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಎಂಬ ಅಸಮಾಧಾನವೂ ಸ್ಥಳೀಯರಲ್ಲಿ ವ್ಯಕ್ತವಾಗಿದೆ. ಸಾಂದರ್ಭಿಕ ರಜಾ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುವ ಮುನ್ನವೇ ಸಂಬಂಧಿಸಿದ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.