Friday, July 24, 2026
Join WhatsApp Group
HomeInformationಪ್ರಕೃತಿಯೊಂದಿಗೇ ಅಭಿವೃದ್ಧಿ ಸಾಧಿಸಿದ ಅಚ್ಚರಿಯ ರಾಷ್ಟ್ರ

ಪ್ರಕೃತಿಯೊಂದಿಗೇ ಅಭಿವೃದ್ಧಿ ಸಾಧಿಸಿದ ಅಚ್ಚರಿಯ ರಾಷ್ಟ್ರ

ವಿಶ್ವದ ಏಕೈಕ ‘ಇಂಗಾಲ-ಋಣಾತ್ಮಕ ದೇಶ’ ಭೂತಾನ್

ಇಂದು ವಿಶ್ವದಾದ್ಯಂತ ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆಯಂತಹ ಪದಗಳು ಸಾಮಾನ್ಯ ಚರ್ಚೆಯ ವಿಷಯಗಳಾಗಿವೆ. ಪರಿಸರ ಸಂರಕ್ಷಣೆ ಬಗ್ಗೆ ಸರ್ಕಾರಗಳು, ವಿಜ್ಞಾನಿಗಳು, ಸಂಘಟನೆಗಳು ಎಚ್ಚರಿಕೆ ನೀಡುತ್ತಲೇ ಇವೆ.

ಇಂತಹ ಸಂದರ್ಭದಲ್ಲಿ ʻಕಾರ್ಬನ್‌ ನ್ಯೂಟ್ರಲ್‌ʼ ಅಥವಾ ʻಇಂಗಾಲ ತಟಸ್ಥʼ ಎಂಬ ಪದ ಹೆಚ್ಚು ಕೇಳಿಬರುತ್ತಿದೆ. ಅಂದರೆ, ಒಂದು ದೇಶ ಎಷ್ಟು ಕಾರ್ಬನ್‌ ಡೈಆಕ್ಸೈಡ್‌ ಹೊರಸೂಸುತ್ತದೆಯೋ, ಅದನ್ನು ಅಷ್ಟೇ ಪ್ರಮಾಣದಲ್ಲಿ ಪ್ರಕೃತಿ ಅಥವಾ ತಂತ್ರಜ್ಞಾನ ಮೂಲಕ ಹೀರಿಕೊಳ್ಳುವ ವ್ಯವಸ್ಥೆ ನಿರ್ಮಿಸುವುದು.

ಆದರೆ, ವಿಶ್ವದ ಅನೇಕ ದೇಶಗಳು ಇನ್ನೂ ಆ ಹಂತವನ್ನೇ ತಲುಪಿಲ್ಲ. ಅಷ್ಟರಲ್ಲಿ, ಒಂದು ಸಣ್ಣ ದೇಶ ಮಾತ್ರ ಈ ಹಂತವನ್ನೂ ಮೀರಿಸಿ ʻಕಾರ್ಬನ್‌ ನೆಗಟಿವ್‌ʼ ರಾಷ್ಟ್ರವಾಗಿ ಜಗತ್ತಿನ ಗಮನ ಸೆಳೆದಿದೆ. ಆ ದೇಶವೇ ಭೂತಾನ್.

ದಕ್ಷಿಣ ಏಷ್ಯಾದ ಹಿಮಾಲಯ ಪರ್ವತ ಶ್ರೇಣಿಗಳ ನಡುವೆ ನೆಲೆಸಿರುವ ಭೂತಾನ್‌ ತನ್ನ ವಿಶಿಷ್ಟ ಜೀವನಶೈಲಿ, ಪ್ರಕೃತಿ ಪ್ರೀತಿ ಮತ್ತು ಅಭಿವೃದ್ಧಿಯ ಪರಿಕಲ್ಪನೆಯಿಂದ ಇಡೀ ಜಗತ್ತಿಗೆ ಮಾದರಿಯಾಗಿದೆ. ಉತ್ತರಕ್ಕೆ ಚೀನಾ, ದಕ್ಷಿಣಕ್ಕೆ ಭಾರತ ಹೊಂದಿರುವ ಈ ಪುಟ್ಟ ದೇಶದ ಜನಸಂಖ್ಯೆ ಕೇವಲ 7.8 ಲಕ್ಷದಷ್ಟಿದೆ. ಆದರೆ ಪರಿಸರ ರಕ್ಷಣೆಯ ವಿಷಯದಲ್ಲಿ ಭೂತಾನ್‌ ಸಾಧಿಸಿರುವುದು ಅನೇಕ ದೊಡ್ಡ ರಾಷ್ಟ್ರಗಳಿಗೂ ಅಸಾಧ್ಯವಾದ ಸಾಧನೆ.

ಭೂತಾನ್‌ ಪ್ರತಿವರ್ಷ ಸುಮಾರು 1.1 ಮಿಲಿಯನ್‌ ಟನ್‌ ಕಾರ್ಬನ್‌ ಡೈಆಕ್ಸೈಡ್‌ ಹೊರಸೂಸಿದರೂ, ದೇಶದ ಅರಣ್ಯ ಪ್ರದೇಶ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದ ಕಾರ್ಬನ್‌ ಹೀರಿಕೊಳ್ಳುತ್ತದೆ. ಇದರ ಪರಿಣಾಮವಾಗಿ ಭೂತಾನ್‌ ವಿಶ್ವದ ಏಕೈಕ ಕಾರ್ಬನ್‌ ನೆಗಟಿವ್‌ ದೇಶವಾಗಿ ಗುರುತಿಸಿಕೊಂಡಿದೆ.

ಇದಕ್ಕೆ ಪ್ರಮುಖ ಕಾರಣ ಭೂತಾನ್‌ನ ಕಾಡುಗಳು. ದೇಶದ ಸಂವಿಧಾನವೇ ಕನಿಷ್ಠ ಶೇ. 60 ಭೂಭಾಗ ಅರಣ್ಯದಿಂದ ಆವೃತವಾಗಿರಬೇಕು ಎಂದು ಹೇಳುತ್ತದೆ. ಪ್ರಸ್ತುತ ಭೂತಾನ್‌ನ ಸುಮಾರು ಶೇ. 72 ಪ್ರದೇಶ ಕಾಡುಗಳಿಂದ ಆವರಿಸಿದೆ. ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ನಾಶ ಮಾಡದೆ, ಪ್ರಕೃತಿಯನ್ನು ಉಳಿಸಿಕೊಂಡೇ ಅಭಿವೃದ್ಧಿ ಸಾಧಿಸಬಹುದು ಎಂಬುದನ್ನು ಭೂತಾನ್‌ ಸಾಬೀತುಪಡಿಸಿದೆ.

ಇದೇ ವೇಳೆ, ಜಲವಿದ್ಯುತ್‌ ಉತ್ಪಾದನೆಯಲ್ಲಿ ಭೂತಾನ್‌ ಬಹಳ ಮುಂದಿದೆ. ವೇಗವಾಗಿ ಹರಿಯುವ ನದಿಗಳನ್ನು ಬಳಸಿಕೊಂಡು ದೇಶ ತನ್ನ ಬಹುತೇಕ ವಿದ್ಯುತ್‌ ಅವಶ್ಯಕತೆಯನ್ನು ಪರಿಸರ ಸ್ನೇಹಿ ಜಲವಿದ್ಯುತ್‌ನಿಂದಲೇ ಪೂರೈಸುತ್ತಿದೆ. ಇದರ ಜೊತೆಗೆ ಪೆಟ್ರೋಲ್‌, ಡೀಸೆಲ್‌ ಆಧಾರಿತ ಕೈಗಾರಿಕೆಗಳು ಕಡಿಮೆ ಇರುವುದೂ ಕಾರ್ಬನ್‌ ಹೊರಸೂಸುವಿಕೆಯ ನಿಯಂತ್ರಣಕ್ಕೆ ಕಾರಣವಾಗಿದೆ.

ಭೂತಾನ್‌ನ ಇನ್ನೊಂದು ವಿಶೇಷತೆ ಎಂದರೆ, ಅದು ತನ್ನ ಅಭಿವೃದ್ಧಿಯನ್ನು ಜಿಡಿಪಿ ಆಧಾರದಲ್ಲಿ ಮಾತ್ರ ಅಳೆಯುವುದಿಲ್ಲ. ಬದಲಾಗಿ “ಗ್ರಾಸ್ ನ್ಯಾಷನಲ್ ಹ್ಯಾಪಿನೆಸ್‌” (GNH) ಅಥವಾ “ಒಟ್ಟು ರಾಷ್ಟ್ರೀಯ ಸಂತೋಷ” ಎಂಬ ಪರಿಕಲ್ಪನೆಗೆ ಆದ್ಯತೆ ನೀಡುತ್ತದೆ. 1972ರಲ್ಲಿ ಭೂತಾನ್‌ನ ರಾಜ ಜಿಗ್ಮೆ ಸಿಂಗ್ಯೆ ವಾಂಗ್ಚುಕ್‌ ಈ ಕಲ್ಪನೆಯನ್ನು ಪರಿಚಯಿಸಿದ್ದರು. ಇದೇ ತತ್ವದ ಮೇಲೆ ಭೂತಾನ್‌ ತನ್ನ ಆಡಳಿತ ವ್ಯವಸ್ಥೆ ರೂಪಿಸಿಕೊಂಡಿದೆ.

ಇಂದು ಅನೇಕ ದೇಶಗಳು ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ನಾಶ, ಮಾಲಿನ್ಯ, ಅತಿಯಾದ ಕೈಗಾರಿಕೆಗಳಿಂದ ಪರಿಸರ ಸಂಕಷ್ಟ ಎದುರಿಸುತ್ತಿವೆ. ಆದರೆ ಭೂತಾನ್‌ ಮಾತ್ರ ʻಪ್ರಕೃತಿ ಉಳಿದರೆ ಮಾತ್ರ ಮಾನವ ಉಳಿಯುತ್ತಾನೆʼ ಎಂಬ ಸಂದೇಶವನ್ನು ತನ್ನ ಬದುಕಿನ ಮೂಲಕವೇ ಜಗತ್ತಿಗೆ ತೋರಿಸುತ್ತಿದೆ. ಸಲಾಂ ಭೂತಾನ್!

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share