ಅಂಕೋಲಾ: ಬಸ್ ನಿಲ್ದಾಣದ ನೀರಿನ ಟ್ಯಾಂಕ್ ಸಮೀಪ ನಿಲ್ಲಿಸಲಾಗಿದ್ದ ಬೈಕ್ ಕಳ್ಳತನವಾಗಿರುವ ಘಟನೆ ಅಂಕೋಲಾದಲ್ಲಿ ನಡೆದಿದ್ದು, ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಕರಮಠದ ಜೈ ಹಿಂದ್ ಹೋಟೆಲ್ ಹಿಂಭಾಗದ ನಿವಾಸಿ ಹಾಗೂ ವ್ಯಾಪಾರಿಯಾಗಿರುವ ಪೈರೋಜ್ ಸತ್ತಾರ ಖಾನ್ (58) ಅವರು ಜೂನ್ 26ರಂದು ಬೆಳಿಗ್ಗೆ 7.10ರಿಂದ 7.25ರ ನಡುವಿನ ಅವಧಿಯಲ್ಲಿ ಅಂಕೋಲಾ ಬಸ್ ನಿಲ್ದಾಣದ ನೀರಿನ ಟ್ಯಾಂಕ್ ಸಮೀಪ ತಮ್ಮ ಹೀರೋ ಎಕ್ಸ್‌ಟ್ರೀಮ್ (KA-30 EE-2938) ಮೋಟಾರ್‌ಸೈಕಲ್‌ನ್ನು ನಿಲ್ಲಿಸಿದ್ದರು.
ಈ ವೇಳೆ ಯಾರೋ ಕಳ್ಳರು ಬೈಕ್ ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಬೈಕ್ ಕಳುವಾದ ಬಳಿಕ ಪೈರೋಜ್ ಅವರು ಅಂಕೋಲಾ ಪಟ್ಟಣದ ವಿವಿಧೆಡೆ ಹುಡುಕಾಟ ನಡೆಸಿದ್ದಾರೆ. ಬಳಿಕ ಕುಟುಂಬದ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.