ಕಾರವಾರ: ಕರ್ನಾಟಕ ವಿಧಾನ ಪರಿಷತ್ತಿನ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದಕ್ಕೆ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಹಾಗೂ ಎನ್‌ಡಿಎ ಮೈತ್ರಿಕೂಟದ ಮೇಲೆ ಶಿಕ್ಷಕರು ಮತ್ತು ಪದವೀಧರರು ಇಟ್ಟಿರುವ ವಿಶ್ವಾಸಕ್ಕೆ ಈ ಗೆಲುವು ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಆಗ್ನೇಯ ಪದವೀಧರ ಕ್ಷೇತ್ರದಿಂದ ಕೆ.ಎಂ. ಸುರೇಶ್, ಪಶ್ಚಿಮ ಪದವೀಧರ ಕ್ಷೇತ್ರದಿಂದ ಎಸ್.ವಿ. ಸಂಕನೂರ, ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಶಶಿಲ್ ಜಿ. ನಮೋಶಿ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಎ.ಪಿ. ರಂಗನಾಥ್ ಗೆಲುವು ಸಾಧಿಸಿರುವುದಕ್ಕೆ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಎಸ್.ವಿ. ಸಂಕನೂರ ಸತತ ಮೂರನೇ ಬಾರಿಗೆ ಗೆದ್ದು ಹ್ಯಾಟ್ರಿಕ್ ಸಾಧಿಸಿರುವುದನ್ನೂ ಕಾಗೇರಿ ಶ್ಲಾಘಿಸಿದ್ದಾರೆ.
ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನ ಕಾರ್ಯಕರ್ತರು ಬೂತ್ ಮಟ್ಟದಿಂದ ಹಗಲಿರುಳು ಶ್ರಮಿಸಿದ್ದು, ಎರಡೂ ಪಕ್ಷಗಳ ಪ್ರಮುಖರ ಒಗ್ಗಟ್ಟು, ಸಮನ್ವಯ ಹಾಗೂ ಕಾರ್ಯಕರ್ತರ ಪರಿಶ್ರಮ ಗೆಲುವಿಗೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.
ಎನ್‌ಡಿಎ ಮೈತ್ರಿಕೂಟವನ್ನು ಬೆಂಬಲಿಸಿದ ಶಿಕ್ಷಕರು ಮತ್ತು ಪದವೀಧರ ಮತದಾರರಿಗೆ ಕೃತಜ್ಞತೆ ಸಲ್ಲಿಸಿರುವ ಕಾಗೇರಿ, ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ಶಿಕ್ಷಕರು ಮತ್ತು ಪದವೀಧರರ ಹಕ್ಕುಗಳ ರಕ್ಷಣೆಗಾಗಿ ಮೈತ್ರಿಕೂಟ ಮುಂದೆಯೂ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.


